ಭಾರತದಿಂದ ಆತಿಥ್ಯ ಕಸಿದ ವಿಶ್ವ ಕುಸ್ತಿ ಒಕ್ಕೂಟ

Update: 2019-03-17 18:21 GMT

ಹೊಸದಿಲ್ಲಿ, ಮಾ.17: ಭಾರತ- ಪಾಕಿಸ್ತಾನಗಳ ಮಧ್ಯದ ರಾಜತಾಂತ್ರಿಕ ಸಂಬಂಧದ ಪ್ರಕ್ಷುಬ್ಧತೆಯ ಕರಿನೆರಳು ಕ್ರೀಡೆಯ ಮೇಲೆ ಬಿದ್ದಿದೆ. ವಿಶ್ವ ಕುಸ್ತಿ ಒಕ್ಕೂಟವು (ಯುಡಬ್ಲುಡಬ್ಲು) ತನ್ನ ಎಲ್ಲ ಸಹಾಯಕ ಒಕ್ಕೂಟಗಳಿಗೆ ಭಾರತ ಕುಸ್ತಿ ಒಕ್ಕೂಟದೊಂದಿಗಿನ ಸಂಬಂಧಗಳನ್ನು ಕಡಿತಗೊಳಿಸಬೇಕೆಂದು ಕೇಳಿಕೊಂಡ ಕೆಲವೇ ದಿನಗಳ ಬಳಿಕ ಭಾರತದಲ್ಲಿ ನಡೆಯಬೇಕಿದ್ದ ಕಿರಿಯರ ಏಶ್ಯನ್ ಚಾಂಪಿಯನ್‌ಶಿಪ್ ಆತಿಥ್ಯವನ್ನು ಕಸಿದುಕೊಂಡಿದೆ.

ಕಿರಿಯರ ಏಶ್ಯನ್ ಚಾಂಪಿಯನ್‌ಶಿಪ್‌ನ ಆತಿಥ್ಯ ವಹಿಸಲು ಮೊದಲು ಒಪ್ಪಿದ್ದ ಲೆಬನಾನ್ ಹಿಂದೆ ಸರಿದ ಬಳಿಕ ಭಾರತ ತಾನು ಆತಿಥ್ಯ ವಹಿಸುವುದಾಗಿ ಕೇಳಿಕೊಂಡಿತ್ತು.

ಪುಲ್ವಾಮ ಉಗ್ರ ದಾಳಿಯ ಬಳಿಕ ಭಾರತದ ದಿಲ್ಲಿಯಲ್ಲಿ ನಡೆಯಬೇಕಿದ್ದ ಶೂಟಿಂಗ್ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಬೇಕಿದ್ದ ಮೂವರು ಪಾಕಿಸ್ತಾನ ಆಟಗಾರರು ಹಾಗೂ ಸಿಬ್ಬಂದಿಗೆ ಭಾರತ ವೀಸಾ ನೀಡಲಿಲ್ಲ ಎಂಬುದನ್ನು ಮುಂದಿಟ್ಟುಕೊಂಡು ಅಂತರ್‌ರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯು(ಐಒಸಿ) ಭಾರತ ಒಲಿಂಪಿಕ್ಸ್ ಸಂಸ್ಥೆಯ (ಐಒಎ) ವಿರುದ್ಧ ವ್ಯಗ್ರಗೊಂಡಿತ್ತು.

ಇದರೊಂದಿಗೆ ಯುಡಬ್ಲುಡಬ್ಲು ಕೂಡ ತನ್ನ ಸಹಾಯಕ ಒಕ್ಕೂಟಗಳಿಗೆ ಭಾರತದೊಂದಿಗಿನ ಎಲ್ಲ ಸಂಪರ್ಕಗಳನ್ನು ರದ್ದುಗೊಳಿಸುವಂತೆ ಹೇಳಿತ್ತು.

ಈ ಸಮಸ್ಯೆ ಬಗೆಹರಿಯದಿದ್ದರೆ ಭವಿಷ್ಯದಲ್ಲಿ ತಾನು ಯಾವುದೇ ಟೂರ್ನಿಯನ್ನು ಆಯೋಜಿಸಲು ಸಾಧ್ಯವಾಗದು ಎಂದು ಭಾರತದ ಕುಸ್ತಿ ಒಕ್ಕೂಟ ಆತಂಕ ವ್ಯಕ್ತಪಡಿಸಿದೆ.

 ಏಶ್ಯನ್ ಜೂನಿಯರ್ ಚಾಂಪಿಯನ್‌ಶಿಪ್ ಆತಿಥ್ಯವನ್ನು ಥಾಲ್ಯಾಂಡ್‌ಗೆ ವರ್ಗಾಯಿಸಲಾಗಿದೆ ಎಂದು ವಿಶ್ವ ಕುಸ್ತಿ ಒಕ್ಕೂಟ ಹೇಳಿದೆ. ‘‘ನಾವು ಯುಡಬ್ಲುಡಬ್ಲು ಹಾಗೂ ಏಶ್ಯ ಒಕ್ಕೂಟಕ್ಕೆ ಬದ್ಧರಾಗಿ ಈ ಟೂರ್ನಿಗೆ ಬಿಡ್ ಸಲ್ಲಿಸಿರಲಿಲ್ಲ’’ ಎಂದು ಭಾರತ ಕುಸ್ತಿ ಒಕ್ಕೂಟದ (ಡಬ್ಲುಎಫ್‌ಐ) ಸಹಾಯಕ ಕಾರ್ಯದರ್ಶಿ ವಿನೋದ್ ತೋಮರ್ ಹೇಳಿದ್ದಾರೆ.

ಡಬ್ಲುಎಫ್‌ಐ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತಿರುವಾಗಲೇ ಈ ಟೂರ್ನಿ ಥಾಲ್ಯಾಂಡ್‌ಗೆ ವರ್ಗಾವಣೆಯಾಗಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News