ಅಗ್ರ ಸ್ಥಾನ ಕಾಯ್ದುಕೊಂಡ ಕೊಹ್ಲಿ, ಬುಮ್ರಾ

Update: 2019-03-17 18:23 GMT

ದುಬೈ, ಮಾ.17: ಭಾರತ ನಾಯಕ ವಿರಾಟ್ ಕೊಹ್ಲಿ ಹಾಗೂ ಪ್ರಮುಖ ವೇಗದ ಬೌಲರ್ ಜಸ್‌ಪ್ರಿತ್ ಬುಮ್ರಾ ರವಿವಾರ ಬಿಡುಗಡೆಯಾದ ಐಸಿಸಿ ಏಕದಿನ ರ್ಯಾಂಕಿಂಗ್‌ನಲ್ಲಿ ಬ್ಯಾಟ್ಸ್‌ಮನ್ ಹಾಗೂ ಬೌಲರ್‌ಗಳ ವಿಭಾಗದಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದ್ದಾರೆ.

ಇತ್ತೀಚೆಗೆ ಆಸ್ಟ್ರೇಲಿಯ ವಿರುದ್ಧ ಸ್ವದೇಶದಲ್ಲಿ ನಡೆದ ಏಕದಿನ ಸರಣಿಯಲ್ಲಿ ಒಟ್ಟು 310 ರನ್ ಗಳಿಸಿರುವ ಕೊಹ್ಲಿ ನಂ.1 ಸ್ಥಾನ ಭದ್ರಪಡಿಸಿಕೊಂಡಿದ್ದಾರೆ. ಉಪ ನಾಯಕ ರೋಹಿತ್ ಶರ್ಮಾ ಒಟ್ಟು 202 ರನ್ ಗಳಿಸಿ ಬ್ಯಾಟಿಂಗ್ ರ್ಯಾಂಕಿಂಗ್‌ನಲ್ಲಿ ನಂ.2ನೇ ಸ್ಥಾನ ಉಳಿಸಿಕೊಂಡಿದ್ದಾರೆ.

ಕೇದಾರ್ ಜಾಧವ್ 5 ಪಂದ್ಯಗಳ ಏಕದಿನ ಸರಣಿಯಲ್ಲಿ ಆಲ್‌ರೌಂಡ್ ಪ್ರದರ್ಶನದ ಮೂಲಕ 11 ಸ್ಥಾನ ಭಡ್ತಿ ಪಡೆದು ಜೀವನಶ್ರೇಷ್ಠ 24ನೇ ಸ್ಥಾನಕ್ಕೇರಿದ್ದಾರೆ. ಇದೇ ವೇಳೆ ಕೇಪ್‌ಟೌನ್‌ನಲ್ಲಿ ಶನಿವಾರ ಕೊನೆಗೊಂಡ ಶ್ರೀಲಂಕಾ ವಿರುದ್ಧ 5-0 ಅಂತರದಿಂದ ಸರಣಿ ಜಯಿಸಲು ನೆರವಾಗಿದ್ದ ದಕ್ಷಿಣ ಆಫ್ರಿಕದ ಆರಂಭಿಕ ಆಟಗಾರ ಕ್ವಿಂಟನ್ ಡಿಕಾಕ್ ನಾಲ್ಕನೇ ಸ್ಥಾನ ಬಾಚಿಕೊಂಡಿದ್ದಾರೆ. 26ರ ಹರೆಯದ ಎಡಗೈ ದಾಂಡಿಗ ಡಿಕಾಕ್ ಸರಣಿಯಲ್ಲಿ 353 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ 3 ಅರ್ಧಶತಕಗಳಿವೆ. ನ್ಯೂಝಿಲ್ಯಾಂಡ್‌ನ ರಾಸ್ ಟೇಲರ್ 3ನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಬೌಲರ್‌ಗಳ ಪಟ್ಟಿಯಲ್ಲಿ ಬುಮ್ರಾ 774 ಅಂಕ ಗಳಿಸಿ ಅಗ್ರ ಸ್ಥಾನದಲ್ಲಿದ್ದಾರೆ. ನ್ಯೂಝಿಲ್ಯಾಂಡ್‌ನ ಟ್ರೆಂಟ್ ಬೌಲ್ಟ್ ಬಾಂಗ್ಲಾದೇಶ ವಿರುದ್ಧ 6 ವಿಕೆಟ್ ಪಡೆದ ಕಾರಣ ರ್ಯಾಂಕಿಂಗ್‌ನಲ್ಲಿ 2ನೇ ಸ್ಥಾನಕ್ಕೇರಿದ್ದಾರೆ. ಅಫ್ಘಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್‌ರನ್ನು ಮೂರನೇ ಸ್ಥಾನಕ್ಕೆ ತಳ್ಳಿದ್ದಾರೆ. ದ.ಆಫ್ರಿಕದ ಲೆಗ್ ಸ್ಪಿನ್ನರ್ ಇಮ್ರಾನ್ ತಾಹಿರ್ 7 ಸ್ಥಾನ ಗಳಿಸಿ ನಾಲ್ಕನೇ ಸ್ಥಾನಕ್ಕೆ ತಲುಪಿದ್ದಾರೆ.

ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ರಶೀದ್ ಖಾನ್ ಅಗ್ರ ಸ್ಥಾನದಲ್ಲಿ ಮುಂದುವರಿದಿದ್ದು ಅಗ್ರ-5ರಲ್ಲಿ ಭಾರತದ ಯಾವ ಆಟಗಾರನೂ ಸ್ಥಾನ ಪಡೆದಿಲ್ಲ.

ಏಕದಿನ ಟೀಮ್ ರ್ಯಾಂಕಿಂಗ್‌ನಲ್ಲಿ ಇಂಗ್ಲೆಂಡ್ ಹಾಗೂ ಭಾರತ ಅಗ್ರ-2ರಲ್ಲಿ ಸ್ಥಾನ ಪಡೆದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News