ಬಿಜೆಪಿ ಟೀಕಾಕಾರ ಧ್ರುವ್ ರಾಠಿ ಫೇಸ್ ಬುಕ್ ಪೇಜ್ ಗೆ ನಿರ್ಬಂಧ

Update: 2019-03-18 07:46 GMT

ಹೊಸದಿಲ್ಲಿ , ಮಾ. 18 : ಚುನಾವಣೆ ಸಮೀಪಿಸುತ್ತಿರುವಾಗ ಸೋಷಿಯಲ್ ಮೀಡಿಯಾದ ರಾಜಕೀಯವೂ ರಂಗೇರತೊಡಗಿದೆ. ಖ್ಯಾತ ಯುಟೂಬರ್ ಹಾಗು ರಾಜಕೀಯ ವಿಶ್ಲೇಷಕ ಧ್ರುವ್ ರಾಠಿ ಅವರ ಪೇಜ್ ಅನ್ನು  ಫೇಸ್ ಬುಕ್  ಒಂದು ತಿಂಗಳ ಅವಧಿಗೆನಿರ್ಬಂಧಿಸಿದೆ. ಅಂದರೆ ಈ ಅವಧಿಯಲ್ಲಿ ಅವರು ತಮ್ಮ ಪೇಜ್ ನಲ್ಲಿ ಏನನ್ನೂ ಪೋಸ್ಟ್ ಮಾಡುವಂತಿಲ್ಲ.

ಇದನ್ನು ಸ್ವತಃ ಧ್ರುವ್ ತಮ್ಮ ಟ್ವಿಟರ್ ನಲ್ಲಿ ರವಿವಾರ ತಡರಾತ್ರಿ ಹೇಳಿದ್ದಾರೆ. " ನನ್ನ ಖಾತೆಯನ್ನು ಫೇಸ್ ಬುಕ್ ತಿಂಗಳ ಅವಧಿಗೆ ನಿರ್ಬಂಧಿಸಿದೆ. ಒಂದು ತಿಂಗಳಲ್ಲೇ ಚುನಾವಣೆ ನಡೆಯಲಿರುವುದು, ನನ್ನ ಪೇಜ್ ದೇಶದಲ್ಲೇ ಅತ್ಯಂತ ಹೆಚ್ಚು ಎಂಗೇಜ್ ಮೆಂಟ್ ( ಓದುಗರ ಸ್ಪಂದನೆ ) ಇರುವ ಪೇಜ್ ಗಳಲ್ಲಿ ಒಂದಾಗಿರುವುದು,  ಸ್ವತಃ ಮೋದಿ ಅವರ ಅಧಿಕೃತ ಪೇಜ್ ಸಹಿತ ಹಲವು ಬಿಜೆಪಿಯ ಟಾಪ್ ಪ್ರಚಾರ ಪೇಜ್ ಗಳಷ್ಟೇ ಜನಪ್ರಿಯತೆ ಪಡೆದಿರುವುದು ಇವೆಲ್ಲವೂ ಅದೆಂತಹ ಆಕಸ್ಮಿಕವಲ್ಲವೇ ?" ಎಂದವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ತನ್ನ ಫೇಸ್ ಬುಕ್ ಪುಟವನ್ನು ನಿರ್ಬಂಧಿಸಲು ಫೇಸ್ ಬುಕ್ ನೀಡಿರುವ ಕಾರಣವನ್ನು ಅವರು ವಿವರಿಸಿದ್ದಾರೆ. ಹಿಟ್ಲರ್ ನ ರಾಜಕೀಯ ಹೇಗಿತ್ತು ಎಂಬುದನ್ನು ವಿವರಿಸುವ ಅವರ ಪೋಸ್ಟ್ ಒಂದು ನಿರ್ಬಂಧಕ್ಕೆ ಕಾರಣ ಎಂದು ಫೇಸ್ ಬುಕ್ ಅವರಿಗೆ ಮಾಹಿತಿ ನೀಡಿದೆ. ಆದರೆ ಆ ಪೋಸ್ಟ್ ನಲ್ಲಿ ಯಾವುದೇ ರೀತಿಯ ಅವಹೇಳನಕಾರಿ ಪದಗಳಿರಲಿಲ್ಲ ಎಂದು ಧ್ರುವ್ ಆ ಪೋಸ್ಟ್ ನ ಸ್ಕ್ರೀನ್ ಶಾಟ್ ಟ್ವಿಟರ್ ನಲ್ಲಿ ಹಾಕಿದ್ದಾರೆ. ಪ್ರತಿಷ್ಠಿತ ಬ್ರಿಟಾನಿಕಾ ಎನ್ಸೈಕ್ಲೋಪೀಡಿಯಾ ದಲ್ಲಿರುವ ಮಾಹಿತಿ ನೀಡಿ ಜನರಿಗೆ ಹಿಟ್ಲರ್ ಬಗ್ಗೆ ಹೇಳಿದರೆ ಅದು ಹೇಗೆ ನಿರ್ಬಂಧಕ್ಕೆ ಕಾರಣವಾಗುತ್ತದೆ ಎಂದವರು ಪ್ರಶ್ನಿಸಿದ್ದಾರೆ. 

ಆ ಪೋಸ್ಟ್ ನಲ್ಲಿ ಹಿಟ್ಲರ್ ಹೇಗೆ ತನ್ನ ಸ್ಥಾನ ಭದ್ರಪಡಿಸಿಕೊಳ್ಳಲು ಉದ್ಯಮಿಗಳನ್ನು ಬಳಸಿಕೊಂಡ, ಆತ ಮದುವೆಯಾಗದೆ ಉಳಿದ, ಪಕ್ಷದ ಉಳಿದ ನಾಯಕರನ್ನು ತುಳಿದ, ನಿರುದ್ಯೋಗಿ ಯುವಜನರನ್ನು ಹೇಗೆ ಸೆಳೆದ ಇತ್ಯಾದಿ ವಿವರಗಳಿವೆ. 

ಧ್ರುವ್ ರಾಠಿ ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಚಿರಪರಿಚಿತ ಹೆಸರು. ಯುಟೂಬ್, ಫೇಸ್ ಬುಕ್ ಹಾಗು ಟ್ವಿಟರ್ ನಲ್ಲಿ ಬಿಜೆಪಿ, ಮೋದಿ ಹಾಗು ಸಂಘ ಪರಿವಾರವನ್ನು ನಿಖರ ಮಾಹಿತಿ, ಅಂಕಿ ಅಂಶ ಇಟ್ಟು ವಿಶ್ಲೇಷಿಸುವ ಅವರಿಗೆ ದೊಡ್ಡ ಸಂಖ್ಯೆಯ ಫಾಲೋವರ್ ಗಳಿದ್ದಾರೆ. ಯುಟೂಬ್ ನಲ್ಲಿ ಅವರ ವಿಡಿಯೋ ಗಳನ್ನೂ ಹದಿನೇಳು ಲಕ್ಷಕ್ಕಿಂತಲೂ ಹೆಚ್ಚು ಮಂದಿ ನೋಡುತ್ತಾರೆ.  ಅವರ ಫೇಸ್ ಬುಕ್ ಪುಟಕ್ಕೆ 5 ಲಕ್ಷ ಫಾಲೋವರ್ ಗಳಿದ್ದಾರೆ. ಟ್ವಿಟರ್ ನಲ್ಲಿ ಅವರಿಗೆ 2 ಲಕ್ಷಕ್ಕಿಂತಲೂ ಹೆಚ್ಚು ಫಾಲೋವರ್ ಗಳಿದ್ದಾರೆ. ಇತ್ತೀಚಿಗೆ ಟಿವಿ ಚರ್ಚೆಗಳಲ್ಲೂ ಭಾಗವಹಿಸಿ ಬಿಜೆಪಿಯ ಬೆವರಿಳಿಸುತ್ತಿದ್ದಾರೆ. 

ವಿಶೇಷವೆಂದರೆ ಅವರೇ ಟ್ವಿಟರ್ ನಲ್ಲಿ ಹಾಕಿರುವ ಸ್ಕ್ರೀನ್ ಶಾಟ್ ಪ್ರಕಾರ ಪ್ರಧಾನಿ  ನರೇಂದ್ರ ಮೋದಿ ಸಹಿತ ಬಿಜೆಪಿಯ ಅಧಿಕೃತ ಫೇಸ್ ಬುಕ್ ಪೇಜ್  ಗಳಷ್ಟೇ ಜನಪ್ರಿಯತೆ ಧ್ರುವ್ ಅವರ ಪೇಜ್ ಗಿದೆ.

ಸೋಮವಾರ ಮಧ್ಯಾಹ್ನ ತನ್ನ ಫೇಸ್ ಬುಕ್ ಪುಟದ ಮೇಲಿನ ನಿರ್ಬಂಧವನ್ನು ಫೇಸ್ ಬುಕ್ ಹಿಂಪಡೆದಿದೆ ಎಂದು ಧ್ರುವ್ ರಾಠಿ ಟ್ವಿಟ್ಟರ್ ನಲ್ಲಿ ಪ್ರಕಟಿಸಿದ್ದಾರೆ. ಮತ್ತು  ತಪ್ಪು ಒಪ್ಪಿಕೊಂಡು ಕ್ರಮ ಕೈಗೊಂಡಿದ್ದಕ್ಕೆ  ಫೇಸ್ ಬುಕ್ ಗೆ  ಕೃತಜ್ಞತೆ ಸಲ್ಲಿಸಿದ್ದಾರೆ. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News