ನ್ಯೂಝಿಲ್ಯಾಂಡ್ ಮಸೀದಿ ಶೂಟೌಟ್ ಲೈವ್: ಫೇಸ್ ಬುಕ್ ಗೆ ಗುಡ್ ಬೈ ಹೇಳಿದ ಏರ್ ಏಷ್ಯಾ ಸಿಇಒ

Update: 2019-03-18 07:34 GMT

ಇಂಗ್ಲೆಂಡ್, ಮಾ.18: ನ್ಯೂಝಿಲ್ಯಾಂಡ್ ನ ಎರಡು ಮಸೀದಿಗಳಲ್ಲಿ ಇತ್ತೀಚೆಗೆ ನಡೆದ ಶೂಟೌಟ್ ನ ನೇರ ಪ್ರಸಾರ ಫೇಸ್ ಬುಕ್ ನಲ್ಲಿ ಹರಿದಾಡಿದ್ದನ್ನು ಕಂಡು ತೀವ್ರ ನೊಂದು ಹಾಗೂ ಅದನ್ನು ವಿರೋಧಿಸಿ ಏರ್ ಏಷ್ಯಾದ ಸಿಇಒ ಟೋನಿ ಫೆರ್ನಾಂಡಿಸ್ ಫೇಸ್ ಬುಕ್ ಗೆ ಗುಡ್ ಬೈ ಹೇಳಿದ್ದಾರೆ.

ತಮ್ಮ ಫೇಸ್ ಬುಕ್ ಖಾತೆಗೆ 6,70,000 ಫಾಲೋವರ್ಸ್ ಇದ್ದಾರೆ ಎಂದು ಹೇಳಿದ ಫೆರ್ನಾಂಡಿಸ್ ಇಂತಹ ಸಂದರ್ಭದಲ್ಲಿ ತಾನು ಫೇಸ್ಬುಕ್ ನಿಂದ ಸಂಸ್ಥೆಯಿಂದ ಹೆಚ್ಚಿನದನ್ನು ನಿರೀಕ್ಷಿಸಿದ್ದೆ ಎಂದಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ``ದ್ವೇಷ''ವನ್ನು ಪಸರಿಸಲಾಗುತ್ತಿದೆ ಎಂದು ಈ ಹಿಂದೆ ಹೇಳಿದ್ದ ಟೋನಿ, ತಮ್ಮ ಟ್ವಿಟರ್ ಖಾತೆಯನ್ನೂ ಬಂದ್ ಮಾಡುವ ಸುಳಿವು ನೀಡಿದ್ದರು. ಅವರಿಗೆ ಟ್ವಿಟ್ಟರ್ ನಲ್ಲಿ  1.29 ಕೋಟಿ ಫಾಲೋವರ್ಸ್ ಇದ್ದು, ಅವರು 2008ರಲ್ಲಿ ಟ್ವಿಟರ್ ಸೇರಿದಂದಿನಿಂದ 20,300ಕ್ಕೂ ಅಧಿಕ ಬಾರಿ ಟ್ವೀಟ್ ಮಾಡಿದ್ದಾರೆ. ಆದರೆ ಫೇಸ್ ಬುಖ್ ಖಾತೆ ಬಂದ್ ಮಾಡುವ ಬಗ್ಗೆ ತಿಳಿಸಿದ ತಮ್ಮ ಟ್ವಿಟರ್ ಪೋಸ್ಟ್ ನಲ್ಲಿ ಅವರು ಟ್ವಿಟರ್ ನಲ್ಲಿ ಮುಂದುವರಿಯುವ ಬಗ್ಗೆ ಸೂಚನೆ ನೀಡಿದ್ದು ``ಟ್ವಿಟರ್ ನಲ್ಲಿ ನನ್ನ ಹೋರಾಟ ಮುಂದುವರಿಯಬಹುದು,'' ಎಂದು ಬರೆದಿದ್ದಾರೆ.

ಫೆರ್ನಾಂಡಿಸ್ ಅವರು ಇಂಗ್ಲಿಷ್ ಫುಟ್ಬಾಲ್ ಕ್ಲಬ್ ಕ್ವೀನ್ಸ್ ಪಾರ್ಕ್ ರೇಂಜರ್ಸ್  ಸಹ ಮಾಲಕರೂ ಆಗಿದ್ದಾರೆ. 2012ರಲ್ಲಿ ಇಂಡೋನೇಷ್ಯಾದಲ್ಲಿ  ಏರ್ ಏಷ್ಯಾ ವಿಮಾನ ಪತನಗೊಂಡ ಘಟನೆಯ ನಂತರ ಅವರು ಹಲವು ಟ್ವೀಟ್ ಗಳ ಮೂಲಕ ಜನರಿಗೆ ಘಟನೆಯ ಬಗ್ಗೆ ಮಾಹಿತಿ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News