ಸ್ವತಃ ವಾದಿಸಲಿರುವ ನ್ಯೂಝಿಲ್ಯಾಂಡ್ ಮಸೀದಿಯಲ್ಲಿ ದಾಳಿ ನಡೆಸಿದ ಉಗ್ರ

Update: 2019-03-18 17:35 GMT

ಕ್ರೈಸ್ಟ್‌ಚರ್ಚ್ (ನ್ಯೂಝಿಲ್ಯಾಂಡ್), ಮಾ. 18: ನ್ಯೂಝಿಲ್ಯಾಂಡ್‌ನ ಎರಡು ಮಸೀದಿಗಳಲ್ಲಿ ರಕ್ತದ ಹೊಳೆಯನ್ನೇ ಹರಿಸಿದ ಭಯೋತ್ಪಾದಕ ಬ್ರೆಂಟನ್ ಟ್ಯಾರಂಟ್ ತನ್ನ ಪರವಾಗಿ ತಾನೇ ವಾದ ಮಂಡಿಸಲು ಉದ್ದೇಶಿಸಿದ್ದಾನೆ ಹಾಗೂ ತಾರ್ಕಿಕ ಜ್ಞಾನವುಳ್ಳವನಂತೆ ಕಂಡುಬಂದಿದ್ದಾನೆ ಎಂದು ಅವನಿಗಾಗಿ ನ್ಯಾಯಾಲಯ ನಿಯೋಜಿಸಿರುವ ವಕೀಲರು ಸೋಮವಾರ ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.

ಅವನು ಶುಕ್ರವಾರ ಮಸೀದಿಗಳಲ್ಲಿ ನಡೆಸಿದ ಹತ್ಯಾಕಾಂಡಗಳಲ್ಲಿ 50 ಮಂದಿ ಮೃತಪಟ್ಟಿದ್ದಾರೆ. ಕೊಲೆ ಆರೋಪ ಹೊತ್ತ ಅವನನ್ನು ಶನಿವಾರ ಕ್ರೈಸ್ಟ್‌ಚರ್ಚ್ ಜಿಲ್ಲಾ ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು.

ತನಗೆ ವಕೀಲರು ಬೇಕಿಲ್ಲ ಎಂಬ ಇಂಗಿತವನ್ನು 28 ವರ್ಷದ ಭಯೋತ್ಪಾದಕ ವ್ಯಕ್ತಪಡಿಸಿದ್ದಾನೆ ಎಂದು ನ್ಯಾಯಾಲಯದ ಆರಂಭಿಕ ವಿಚಾರಣೆಯ ವೇಳೆ ಹಂತಕನ ಪರವಾಗಿ ವಾದಿಸಿದ ‘ಡ್ಯೂಟಿ ಲಾಯರ್’ ರಿಚರ್ಡ್ ಪೀಟರ್ಸ್ ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.

‘‘ಈ ಪ್ರಕರಣದಲ್ಲಿ ತನ್ನ ಪರವಾಗಿ ತಾನೇ ವಾದಿಸಲು ಆಸ್ಟ್ರೇಲಿಯ ಪ್ರಜೆ ನಿರ್ಧರಿಸಿದ್ದಾನೆ’’ ಎಂದು ಪೀಟರ್ಸ್ ಹೇಳಿದರು.

ಅವನು ವಿಚಾರಣೆ ಎದುರಿಸುವ ಮಾನಸಿಕ ಪ್ರಬುದ್ಧತೆಯನ್ನು ಹೊಂದಿಲ್ಲ ಎಂಬ ವಾದವನ್ನು ಅವರು ತಳ್ಳಿಹಾಕಿದರು.

‘‘ಅವನು ಕಾಣಿಸಿಕೊಂಡ ರೀತಿ ಪ್ರಬುದ್ಧವಾಗಿದೆ ಹಾಗೂ ಅವನು ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವಂತೆ ಕಾಣುತ್ತಿಲ್ಲ. ಏನು ನಡೆಯುತ್ತಿದೆ ಎಂಬುದನ್ನು ಅರ್ಥಮಾಡಿಕೊಂಡವನಂತೆ ಅವನು ಕಾಣುತ್ತಾನೆ’’ ಎಂದು ಪೀಟರ್ಸ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News