ದೋಹಾ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ ಗೋಪಿ ಅರ್ಹ

Update: 2019-03-18 18:49 GMT

ಹೊಸದಿಲ್ಲಿ, ಮಾ.18: ಸಿಯೋಲ್ ಅಂತರ್‌ರಾಷ್ಟ್ರೀಯ ಮ್ಯಾರಥಾನ್ ಸ್ಪರ್ಧೆಯಲ್ಲಿ 11ನೇ ಸ್ಥಾನ ಪಡೆಯುವ ಮೂಲಕ ಏಶ್ಯನ್ ಮ್ಯಾರಥಾನ್ ಚಾಂಪಿಯನ್ ಭಾರತದ ಗೋಪಿ ಥೋನಕಲ್ ದೋಹಾದಲ್ಲಿ ಸೆಪ್ಟಂಬರ್‌ನಲ್ಲಿ ನಡೆಯುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ ಅರ್ಹತೆ ಗಿಟ್ಟಿಸಿದ್ದಾರೆ.

ರವಿವಾರ ನಡೆದ ಮ್ಯಾರಥಾನ್ ರೇಸ್‌ನಲ್ಲಿ 2 ತಾಸು 13 ನಿಮಿಷಗಳಲ್ಲಿ ಗುರಿ ತಲುಪುವ ಮೂಲಕ 30 ವರ್ಷದ ಗೋಪಿ ತಮ್ಮ ವೈಯಕ್ತಿಕ ಶ್ರೇಷ್ಠ ದಾಖಲೆ ಉತ್ತಮಪಡಿಸಿಕೊಂಡರು. ವಿಶ್ವ ಚಾಂಪಿಯನ್‌ಶಿಪ್‌ನ ಅರ್ಹತಾ ಗುರುತು 2 ತಾಸು 16 ನಿಮಿಷಗಳಾಗಿತ್ತು. ಕಳೆದ ವರ್ಷ ಅವರು 2 ತಾಸು 15 ನಿಮಿಷ 16 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ್ದರು.

ಗೋಪಿ ತೆಗೆದುಕೊಂಡ ಸಮಯವು ಭಾರತೀಯ ಅಥ್ಲೀಟ್‌ವೊಬ್ಬನ ಸಾರ್ವಕಾಲಿಕ ಎರಡನೇ ಶ್ರೇಷ್ಠ ದಾಖಲೆಯಾಗಿದೆ. ನಾಲ್ಕು ದಶಕಗಳ ಹಿಂದೆ ಶಿವನಾಥ್ ಸಿಂಗ್ 2 ಗಂಟೆ 12 ನಿಮಿಷಗಳ ಸಮಯ ತೆಗೆದುಕೊಂಡಿದ್ದು ರಾಷ್ಟ್ರೀಯ ದಾಖಲೆಯಾಗಿದೆ.

ಸಿಯೋಲ್ ಅಂತರ್‌ರಾಷ್ಟ್ರೀಯ ಮ್ಯಾರಥಾನ್ ವಿಶ್ವ ವರ್ಗದ ಐಎಎಎಫ್ ಚಿನ್ನದ ಮಟ್ಟದ ಸ್ಪರ್ಧೆಯಾಗಿದೆ.

2017ರಲ್ಲಿ ಚೀನಾದ ಡಾನ್‌ಗುವಾನ್‌ನಲ್ಲಿ ನಡೆದ ಏಶ್ಯನ್ ಮ್ಯಾರಥಾನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಜಯಿಸಿದ್ದ ಗೋಪಿ, 2016ರ ಒಲಿಂಪಿಕ್ಸ್ ನಲ್ಲಿ 25ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News