ಪ್ರಜ್ಞೇಶ್ ಜೀವನಶ್ರೇಷ್ಠ ಸಾಧನೆ

Update: 2019-03-18 18:51 GMT

ಹೊಸದಿಲ್ಲಿ, ಮಾ.18: ಇಂಡಿಯನ್ ವೆಲ್ಸ್ ಟೆನಿಸ್ ಟೂರ್ನಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದ ಪ್ರಜ್ಞೇಶ್ ಗುಣೇಶ್ವರನ್ ಜೀವನಶ್ರೇಷ್ಠ 84ನೇ ರ್ಯಾಂಕ್ ತಲುಪಿದ್ದಾರೆ. ಆದರೆ, ಗಾಯಗೊಂಡಿರುವ ಯೂಕಿ ಭಾಂಬ್ರಿ ಸುಮಾರು ಎರಡು ವರ್ಷಗಳ ಬಳಿಕ ಅಗ್ರ-200 ರ್ಯಾಂಕಿಗಿಂತ ಹೊರಗುಳಿದಿದ್ದಾರೆ.

ಎಟಿಪಿ ಮಾಸ್ಟರ್ಸ್ ಸೀರಿಸ್ ಟೂರ್ನಿಯಲ್ಲಿ ಮೂರನೇ ಸುತ್ತಿಗೆ ತಲುಪಿದ್ದ ಪ್ರಜ್ಞೇಶ್ ವಿಶ್ವದ ನಂ.18ನೇ ಆಟಗಾರ ನಿಕೊಲೊಝ್ ಬಾಸಿಲಾಶ್ವಿಲಿ ವಿರುದ್ಧ ಭರ್ಜರಿ ಜಯ ದಾಖಲಿಸಿದ್ದರು. ಈ ಪ್ರದರ್ಶನದ ಹಿನ್ನೆಲೆಯಲ್ಲಿ 13 ಸ್ಥಾನ ಮೇಲಕ್ಕೇರಿರುವ ಪ್ರಜ್ಞೇಶ್ ಜೀವನಶ್ರೇಷ್ಠ ರ್ಯಾಂಕಿಂಗ್ ತಲುಪಿದರು. ಭಾರತದ ಇನ್ನೋರ್ವ ಸಿಂಗಲ್ಸ್ ಆಟಗಾರ ರಾಮಕುಮಾರ್ ರಾಮನಾಥನ್(139)ಮೂರು ಸ್ಥಾನ ಕಳೆದುಕೊಂಡಿದ್ದಾರೆ. ಈ ಇಬ್ಬರು ಆಟಗಾರರು ಈ ವಾರ ನಡೆಯಲಿರುವ ಮಿಯಾಮಿ ಮಾಸ್ಟರ್ಸ್‌ನಲ್ಲಿ ಸಿಂಗಲ್ಸ್‌ನ ಮುಖ್ಯ ಸುತ್ತಿಗೆ ಅರ್ಹತೆ ಪಡೆಯಲು ಯತ್ನಿಸಲಿದ್ದಾರೆ.

ಯೂಕಿ ಓರ್ವ ನತದೃಷ್ಟ ಸಿಂಗಲ್ಸ್ ಆಟಗಾರ. ಅವರ ವೃತ್ತಿಜೀವನದ ಏಳಿಗೆಗೆ ಗಾಯದ ಸಮಸ್ಯೆಯೇ ಪದೇ ಪದೇ ಅಡ್ಡಿಯಾಗುತ್ತಿದೆ. ಅವರು ರ್ಯಾಂಕಿಂಗ್‌ನಲ್ಲಿ ಅಗ್ರ-100ರೊಳಗೆ ಸ್ಥಾನ ಪಡೆದಾಗ ಗಾಯದ ಸಮಸ್ಯೆ ಅವರನ್ನು ಟೆನಿಸ್‌ನಿಂದ ದೂರ ಇಡುತ್ತದೆ.

ಈ ಬಾರಿ ಸಾಕೇತ್ ಮೈನೇನಿ(251), ಸಾಯಿ ಕುಮಾರ್ ಮುಕುಂದ್(268) ಈ ಬಾರಿ ಉತ್ತಮ ಸಾಧನೆ ಮಾಡಿದ್ದಾರೆ.

 ಡಬಲ್ಸ್‌ನಲ್ಲಿ ಜೀವನ್ 64ನೇ ಸ್ಥಾನಕ್ಕೇರುವುದರೊಂದಿಗೆ ಉತ್ತಮ ಸಾಧನೆ ಮಾಡಿದ್ದಾರೆ. ರೋಹನ್ ಬೋಪಣ್ಣ(36) ಹಾಗೂ ದಿವಿಜ್ ಶರಣ್(41) ಬಳಿಕ ಭಾರತದ ಮೂರನೇ ಗರಿಷ್ಠ ರ್ಯಾಂಕಿನ ಡಬಲ್ಸ್ ಆಟಗಾರನಾಗಿದ್ದಾರೆ. ಪೂರವ್ ರಾಜಾ(80)ಒಂದು ಸ್ಥಾನ ಕಳೆದುಕೊಂಡರೆ, ಹಿರಿಯ ಆಟಗಾರ ಲಿಯಾಂಡರ್ ಪೇಸ್(94) 2 ಸ್ಥಾನ ಭಡ್ತಿ ಪಡೆದರು.

ಡಬ್ಲುಟಿಎ ರ್ಯಾಂಕಿಂಗ್‌ನಲ್ಲಿ ಅಂಕಿತಾ ರೈನಾ ಭಾರತದ ಅಗ್ರ ರ್ಯಾಂಕಿನ ಆಟಗಾರ್ತಿಯಾಗಿ ಮುಂದುವರಿದಿದ್ದು 168ನೇ ಸ್ಥಾನದಲ್ಲಿದ್ದಾರೆ. ಕರ್ಮಾನ್ ಕೌರ್ ಥಂಡಿ ಏಳು ಸ್ಥಾನ ಭಡ್ತಿ ಪಡೆದು 203ನೇ ಸ್ಥಾನ ತಲುಪಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News