ಮಸೀದಿಯಲ್ಲಿ ಹತ್ಯಾಕಾಂಡ ನಡೆಸಿದ ಉಗ್ರನ ಹೆಸರು ಯಾರೂ ಹೇಳ್ಬೇಡಿ ಎಂದು ನ್ಯೂಜಿಲೆಂಡ್ ಪ್ರಧಾನಿ ಹೇಳಿದ್ದೇಕೆ ?

Update: 2019-03-19 05:30 GMT

ಕ್ರೈಸ್ಟ್ ಚರ್ಚ್, ಮಾ.19: ಕಳೆದ ವಾರ ನ್ಯೂಝಿಲೆಂಡ್ ನ ಕ್ರೈಸ್ಟ್ ಚರ್ಚ್ ನಗರದ ಎರಡು ಮಸೀದಿಗಳಲ್ಲಿ ಉಗ್ರನೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ 50 ಮಂದಿ ಬಲಿಯಾದ ಪ್ರಕರಣದ ನಂತರ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ್ದ ದೇಶದ ಪ್ರಧಾನಿ ಜೆಸಿಂಡಾ ಆರ್ಡರ್ನ್, ದುಷ್ಕರ್ಮಿಗೆ ಆತ ಬಯಸುವ ಪ್ರಚಾರ ನೀಡಬಾರದೆಂದು ಹೇಳಿದ್ದರು.

‘‘ಇದೇ ಕಾರಣಕ್ಕೆ ಆತನ ಹೆಸರನ್ನು ನಾನೆತ್ತುವುದನ್ನು ನೀವು ಕೇಳುವುದಿಲ್ಲ. ಆತನೊಬ್ಬ ಉಗ್ರವಾದಿ, ಕ್ರಿಮಿನಲ್ ಮತ್ತು ತೀವ್ರವಾದಿ. ಆದರೆ ನಾನು ಮಾತನಾಡುವಾಗ ಆತ ಹೆಸರಿಲ್ಲದವನಾಗುತ್ತಾನೆ’’ ಎಂದು ಪ್ರಧಾನಿ ಹೇಳಿದ್ದರು.

ತನ್ನ ಜನಾಂಗೀಯ ನಿಲುವನ್ನು ಸಮರ್ಥಿಸಿಕೊಂಡು 74 ಪುಟಗಳ ಟಿಪ್ಪಣಿಯನ್ನು ಹಂತಕ ಬರೆದಿದ್ದನಲ್ಲದೆ, ಅಲ್ ನೂರ್ ಮಸೀದಿಯ ಮೇಲಿನ ದಾಳಿಯನ್ನು ಫೇಸ್ ಬುಕ್ ನಲ್ಲಿ ನೇರ ಪ್ರಸಾರ ಕೂಡ ನಡೆಸುವ ಧಾರ್ಷ್ಟ್ಯ ತೋರಿದ್ದ.

‘‘ಆತ ಕುಖ್ಯಾತಿ ಬಯಸಿರಬಹುದು, ಆದರೆ ನಾವು ನ್ಯೂಝಿಲೆಂಡ್ ನವರು ಆತನಿಗೆ ಏನೂ ನೀಡುವುದಿಲ್ಲ, ಹೆಸರು ಕೂಡ’’ ಎಂದು ಆಕೆ ಹೇಳಿದ್ದರು.

ಉಗ್ರನ ದಾಳಿಯನ್ನು ಪ್ರಚುರಪಡಿಸುವಲ್ಲಿ ಸಾಮಾಜಿಕ ಜಾಲತಾಣಗಳ ಪಾತ್ರವನ್ನೂ ಪರಾಮರ್ಶಿಸುವುದಾಗಿ ಜೆಸಿಂಡಾ ಹೇಳಿದರು. ದೇಶದ ಬಂದೂಕು ಕಾನೂನುಗಳಲ್ಲಿ ಬದಲಾವಣೆಗಳನ್ನು ತರುವ ತಮ್ಮ ಹಿಂದಿನ ಆಶ್ವಾಸನೆಯನ್ನೂ ಅವರು ಪುನರುಚ್ಚರಿಸಿದ್ದರು.

ದೇಶದ ಆ ದುಃಖಕರ ಸಂದರ್ಭದಲ್ಲಿ 37 ವರ್ಷದ ಪ್ರಧಾನಿ ಪ್ರತಿಕ್ರಿಯಿಸಿದ ರೀತಿ, ಅನುಕಂಪ ವ್ಯಕ್ತಪಡಿಸುವುದರ ಜತೆಗೆ ಜನರಲ್ಲಿ ಧೈರ್ಯ ತುಂಬಿಸುವ ಆಕೆಯ ಯತ್ನ ಎಲ್ಲೆಡೆ ಶ್ಲಾಘನೆ ಪಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News