30ನೆ ಹಿಮಾಲಯ ಯಾತ್ರೆಗೆ ಸಿದ್ಧವಾದ 99 ವರ್ಷದ ಚಿತ್ರನ್

Update: 2019-03-19 10:23 GMT

ತಿರುವನಂತಪುರಂ, ಮಾ.19: ಕೇರಳದ ತ್ರಿಶ್ಶೂರು ನಿವಾಸಿ, 99 ವರ್ಷದ ಚಿತ್ರನ್ ನಂಬೂದಿರಿಪ್ಪಾಡ್ ಈ ಇಳಿವಯಸ್ಸಿನಲ್ಲೂ ಹೊಂದಿರುವ ಅದಮ್ಯ ಉತ್ಸಾಹ ಯುವಕರನ್ನೂ ನಾಚಿಸುತ್ತದೆ. ಈ ಇಳಿ ವಯಸ್ಸಿನಲ್ಲೂ ಅವರು ಪ್ರತಿ ವರ್ಷ ಹಿಮಾಲಯಕ್ಕೆ ತೆರಳುತ್ತಾರೆಂದರೆ ಅಚ್ಚರಿಯಾಗುವುದಲ್ಲವೇ ? ಆದರೆ ಇದು ನಿಜ. ಕಳೆದ ಮೂರು ದಶಕಗಳಿಂದ ಒಂದು ವರ್ಷವೂ ಬಿಡದೆ ಅವರು ಇಲ್ಲಿಯ ತನಕ ಹಿಮಾಲಯಕ್ಕೆ 29 ಬಾರಿ ಪ್ರವಾಸ ಹೋಗಿ ಬಂದಿದ್ದಾರೆ.

ಅವರು ಮೊದಲು ಹಿಮಾಲಯ ಯಾತ್ರೆ ನಡೆಸಿದ್ದು 1990ರಲ್ಲಿ. ಆ ವರ್ಷ ಅವರು ಬದರೀನಾಥ್, ಕೇದಾರನಾಥ ಮುಂತಾದೆಡೆ ಪ್ರವಾಸ ಹೋಗಿದ್ದರು. ಈ ವರ್ಷದ ಅಕ್ಟೋಬರ್ ತಿಂಗಳಲ್ಲಿ ಅವರು ತಮ್ಮ ಜನ್ಮ ಶತದಿನ ಪೂರೈಸುತ್ತಾರಲ್ಲದೆ ಹಿಮಾಲಯಕ್ಕೆ ತಮ್ಮ 30ನೇ ಪ್ರವಾಸ ಕೈಗೊಳ್ಳುತ್ತಾರೆ.

ಹಿಮಾಲಯ ನಿಮ್ಮನ್ನು ಅಷ್ಟೊಂದು ಏಕೆ ಆಕರ್ಷಿಸುತ್ತಿದೆ ಎಂಬ ಪ್ರಶ್ನೆಗೆ ‘‘ಅದೊಂದು ವಿಸ್ಮಯಕಾರಿ ಸ್ಥಳ. ದೇಶದ ಎಲ್ಲಾ ದೊಡ್ಡ ನದಿಗಳ ಉಗಮ ಸ್ಥಾನ. ಈ ನದಿಗಳ ಉಗಮ ಸ್ಥಾನಗಳಿಗೆ ಹೋಗುವುದು ನನಗೆ ಇಷ್ಟ, ಈ ಪರ್ವತ ಶ್ರೇಣಿ ಭಾರತ ಮತ್ತು ಇತರ ರಾಷ್ಟ್ರಗಳ ನಡುವೆ ತಡೆಗೋಡೆಯಂತಿವೆ’’ ಎಂದು ಅವರು ಹೇಳುತ್ತಾರೆ.

ಹಿಂದೆ ತಾವು ಪ್ರವಾಸ ಹೋಗುತ್ತಿದ್ದಾಗ ಹಲವು ಸ್ಥಳಗಳಿಗೆ ವಾಹನಗಳು ಹೋಗದೆ ಗಂಟೆಗಟ್ಟಲೆ ನಡೆದುಕೊಂಡೇ ಹೋಗುವ ಪರಿಸ್ಥಿತಿಯಿತ್ತು. ಪ್ರತಿ ವರ್ಷ ದಿಲ್ಲಿಗೆ ರೈಲಿನಲ್ಲಿ ತೆರಳುತ್ತಿದ್ದೆ, ಈ ಬಾರಿ ಪ್ರಯಾಣ ಕಷ್ಟಕರವಾದರೆ ವಿಮಾನದಲ್ಲಿ ಹೋಗುವ ಯೋಚನೆಯಿದೆ’’ ಎಂದು ಚಿತ್ರನ್ ವಿವರಿಸುತ್ತಾರೆ.

ಮೊದಲ ಬಾರಿ ಹಿಮಾಲಯಕ್ಕೆ ಅವರು ತಮ್ಮ ಆತ್ಮೀಯ ಸ್ನೇಹಿತರ ಜತೆ ಹೋಗಿದ್ದನ್ನು ನೆನಪಿಸುತ್ತಾರೆ. ‘‘ದಿಲ್ಲಿಗೆ ಕಾನ್ಫರೆನ್ಸ್ ಒಂದರಲ್ಲಿ ಭಾಗವಹಿಸಲು ತೆರಳಿ ಅಲ್ಲಿಂದ ನಾವು ಹೋಗಿದ್ದೆವು. ಆದರೆ ಆ ವರ್ಷ ಫುಡ್ ಪಾಯ್ಸನಿಂಗ್ ಸಮಸ್ಯೆಯಿಂದ ಅರ್ಧದಲ್ಲಿಯೇ ಹಿಂದಿರುಗಬೇಕಾಯಿತು’’ ಎಂದು ಅವರು ಹೇಳುತ್ತಾರೆ.

ಪ್ರಶಸ್ತಿ ವಿಜೇತ ಶೈಕ್ಷಣಿಕ ತಜ್ಞರಾಗಿರುವ ಚಿತ್ರನ್ 1940ರ ದಶಕದಲ್ಲಿ ಮೂಕ್ಕುತ್ತಲ ಗ್ರಾಮದಲ್ಲಿ ಮೊದಲ ಹೈಸ್ಕೂಲ್ ಆರಂಭಿಸಿದ್ದರು. ತಮ್ಮ ಕುಟುಂಬದ ಐದು ಎಕರೆ ಜಮೀನಿನಲ್ಲಿ ಅವರು ಈ ಶಾಲೆ ನಿರ್ಮಿಸಿದ್ದರು. ಈ ಶಾಲೆಯಲ್ಲಿ ಶಿಕ್ಷಕರಾಗಿ ಮುಂದೆ ಹೆಡ್ ಮಾಸ್ಟರ್ ಆಗಿ ಅವರು ಸೇವೆ ಸಲ್ಲಿಸಿ ನಂತರ ಶಾಲೆಯನ್ನು ಕೇವಲ ರೂ.1 ಪಡೆದು ಸರಕಾರಕ್ಕೆ ದಾನ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News