ಡಿಎಚ್‌ಎ, ಹೆಲ್ತ್ ಮ್ಯಾಗಝಿನ್‌ನಿಂದ ಆರೋಗ್ಯ ರಕ್ಷಣೆಯ ಪ್ರವರ್ತಕರು, ಸಂಸ್ಥೆಗಳಿಗೆ ಸನ್ಮಾನ

Update: 2019-03-20 13:45 GMT

ದುಬೈ, ಮಾ.19: ದುಬೈ ಆರೋಗ್ಯ ಪ್ರಾಧಿಕಾರ (ಡಿಎಚ್‌ಎ) ಮತ್ತು ಹೆಲ್ತ್ ಕೇರ್ ಜಂಟಿಯಾಗಿ ಸೋಮವಾರ ಗ್ರಾಂಡ್ ಹಯಾತ್ ದುಬೈನಲ್ಲಿ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆರೋಗ್ಯ ರಕ್ಷಣೆಯ ಪ್ರವರ್ತಕರು ಮತ್ತು ಸಂಸ್ಥೆಗಳನ್ನು ಸನ್ಮಾನಿಸಲಾಯಿತು.

ಸಂಯುಕ್ತ ಅರಬ್ ಗಣರಾಜ್ಯ (ಯುಎಇ) ಸರ್ವೋಚ್ಚ ಮಂಡಳಿಯ ಸದಸ್ಯ ಹಾಗೂ ಅಜ್ಮಾನ್ ಆಡಳಿತಗಾರ ಶೇಕ್ ಹುಮೈದ್ ಬಿನ್ ರಶೀದ್ ಅಲ್ ನುಐಮಿ ಅವರಿಗೆ ‘ವರ್ಷದ ವ್ಯಕ್ತಿ’ ಪ್ರಶಸ್ತಿಯನ್ನು ಪ್ರದಾನಿಸಲಾಯಿತು.

ಯುಎಇಯ ಖಾಸಗಿ ಮತ್ತು ಸರಕಾರಿ ಕ್ಷೇತ್ರಗಳ ಸಾವಿರಕ್ಕೂ ಅಧಿಕ ಆರೋಗ್ಯ ರಕ್ಷಣೆ ಕ್ಷೇತ್ರದ ನಾಯಕರು ಮತ್ತು ವೃತ್ತಿಪರರು ಭಾಗವಹಿಸಿದ್ದ ಕಾರ್ಯ ಕ್ರಮದಲ್ಲಿ 18 ಉನ್ನತ ಸಂಸ್ಥೆಗಳು, 24 ವೃತ್ತಿಪರರು ಮತ್ತು 11 ಆರೋಗ್ಯ ರಕ್ಷಣೆ ಪ್ರವರ್ತಕರಿಗೂ ಪ್ರಶಸ್ತಿಗಳನ್ನು ಪ್ರದಾನಿಸಲಾಯಿತು.

ಪ್ರತ್ಯೇಕ ಸಮಾರಂಭವೊಂದರಲ್ಲಿ ಡಿಎಚ್‌ಎ ಮಂಡಳಿ ಅಧ್ಯಕ್ಷ ಹಾಗೂ ಮಹಾ ನಿರ್ದೇಶಕ ಹುಮೈದ್ ಅಲ್ ಖತಾಮಿ ಅವರು ಶೇಕ್ ಹುಮೈದ್ ಬಿನ್ ರಶೀದ್ ಅಲ್ ನುಐಮಿ ಅವರಿಗೆ ಬಿನ್ನವತ್ತಳೆಯನ್ನು ಸಮರ್ಪಿಸಿದರು. ತುಂಬೆ ಗ್ರೂಪ್‌ನ ಸ್ಥಾಪಕಾಧ್ಯಕ್ಷ ಹಾಗೂ ಹೆಲ್ತ್ ಮ್ಯಾಗಝಿನ್‌ನ ಪ್ರಕಾಶಕ ಡಾ. ತುಂಬೆ ಮೊಯಿದೀನ್ ಅವರು ಉಪಸ್ಥಿತರಿದ್ದರು.

ಎಮಿರೇಟ್ಸ್‌ನ ಇಂಟರ್ನೆಟ್ ತಾರೆ ಖಾಲಿದ್ ಅಲ್ ಅಮೆರಿ, ಮಾಜಿ ವಿಶ್ವಸುಂದರಿ ಮಾನುಷಿ ಚಿಲ್ಲರ್, ಬಾಲಿವುಡ್ ನಟ ಸೋನು ಸೂದ್, ಸಾಮಾಜಿಕ ಮಾಧ್ಯಮಗಳ ಪ್ರಭಾವಿ ಗಣ್ಯರಾದ ಸಲಾಮ ಮುಹಮ್ಮದ್, ಜುಮಾನ ಖಾನ್ ಮತ್ತು ಫರ್ಹಾನ್ ಬೋದಿ ಹಾಗೂ ಮಿಸ್ ವರ್ಲ್ಡ್ ಈಜಿಪ್ತ್ 2018 ಮೊನಿ ಹೆಲಾಲ್ ಅವರೂ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಪ್ರಶಸ್ತಿ ವಿಜೇತರನ್ನು ಅಭಿನಂದಿಸಿ ಮಾತನಾಡಿದ ಹುಮೈದ್ ಅಲ್ ಖತಾಮಿ ಅವರು, ಆರೋಗ್ಯ ರಕ್ಷಣೆಯಲ್ಲಿ ಅಸಾಧಾರಣ ಸಾಧನೆಗಳನ್ನು ಗೌರವಿಸುವುದು ಮತ್ತು ಆರೋಗ್ಯ ರಕ್ಷಣೆಯ ಅತ್ಯುತ್ತಮ ಪದ್ಧತಿಗಳನ್ನು ಉತ್ತೇಜಿಸುವುದು ವಾರ್ಷಿಕ ಹೆಲ್ತ್ ಪ್ರಶಸ್ತಿಗಳ ಧ್ಯೇಯವಾಗಿದೆ. ಈ ವರ್ಷ ಸ್ವೀಕರಿಸಲಾಗಿದ್ದ ನಾಮಕರಣಗಳ ಸಂಖ್ಯೆ ಹಿಂದಿನ ಆವೃತ್ತಿಗಿಂತ ಎರಡು ಪಟ್ಟಿನಷ್ಟು ಇತ್ತು ಎಂದರು. ಮುಂದಿನ ಆವೃತ್ತಿಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಆರೋಗ್ಯ ರಕ್ಷಣೆ ವೃತ್ತಿಪರರು ಮತ್ತು ಸಂಸ್ಥೆಗಳು ಪಾಲ್ಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಡಾ. ತುಂಬೆ ಮೊಯಿದೀನ್ ಅವರು, ವಾರ್ಷಿಕ ಹೆಲ್ತ್ ಪ್ರಶಸ್ತಿಗಳ 2020ನೇ ಸಾಲಿನ ಆವೃತ್ತಿಯು ಕೊಲ್ಲಿ ಮತ್ತು ವಿಶಾಲ ಮಧ್ಯ ಪ್ರಾಚ್ಯ ಪ್ರದೇಶಗಳನ್ನು ಒಳಗೊಳ್ಳಲಿದೆ. ಮುಂದಿನ ಆವೃತ್ತಿಯಲ್ಲಿ ಇನ್ನಷ್ಟು ಕಾರ್ಪೊರೇಟ್ ಮತ್ತು ವ್ಯಕ್ತಿಗತ ಆರೋಗ್ಯ ರಕ್ಷಣೆ ವರ್ಗಗಳನ್ನು ಸೇರ್ಪಡೆಗೊಳಿಸುವ ಯೋಜನೆಯಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News