ಗರಿಷ್ಠ ವೈಯುಕ್ತಿಕ ರನ್ ಗಳಿಕೆಯಲ್ಲಿ ಭಾರತೀಯರು

Update: 2019-03-19 18:52 GMT

ಹೊಸದಿಲ್ಲಿ, ಮಾ.19: ವಿಶ್ವದಾದ್ಯಂತ ತಾರಾ ದಾಂಡಿಗರು ಇಂಡಿಯನ್ ಪ್ರೀಮಿ ಯರ್ ಲೀಗ್‌ನಲ್ಲಿ (ಐಪಿಎಲ್) ಪಾಲ್ಗೊಳ್ಳು ತ್ತಿದ್ದರೂ ಟೂರ್ನಿಯಲ್ಲಿ ಗರಿಷ್ಠ ರನ್ ಸ್ಕೋರ್ ಪಟ್ಟಿಯನ್ನು ಭಾರತದ ದಾಂಡಿಗರೇ ಆಳುತ್ತಿದ್ದಾರೆ. ಸುರೇಶ್ ರೈನಾರಿಂದ ಗೌತಮ್ ಗಂಭೀರ್(ಎಲ್ಲ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಗಂಭೀರ್ ಯಾವುದೇ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿಲ್ಲ) ಸೇರಿದಂತೆ ಭಾರತೀಯ ಆಟಗಾರರೇ ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ವೈಯಕ್ತಿಕ ರನ್ ಗಳಿಸಿದ್ದಾರೆ.

12ನೇ ಆವೃತ್ತಿಯ ಐಪಿಎಲ್ ಟೂರ್ನಿ ಮಾ.23ರಿಂದ ಆರಂಭವಾಗುತ್ತಿದ್ದು ಇಲ್ಲಿಯವರೆಗೆ ಗರಿಷ್ಠ ವೈಯಕ್ತಿಕ ರನ್ ಗಳಿಸಿದ ದಾಂಡಿಗರ ಪಟ್ಟಿ ಇಲ್ಲಿದೆ.

1. ಸುರೇಶ್ ರೈನಾ (4,985 ರನ್): ಸುರೇಶ್ ರೈನಾ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ದಾಂಡಿಗ. ದುಬಾರಿ ಐಪಿಎಲ್ ಟೂರ್ನಿಯಲ್ಲಿ ರನ್‌ಗಳನ್ನು ದುಬಾರಿಯಾಗಿಯೇ ಗಳಿಸಿದ್ದಾರೆ ಇಲ್ಲಿಯವರೆಗೆ ಒಟ್ಟು 176 ಐಪಿಎಲ್ ಪಂದ್ಯಗಳನ್ನಾಡಿರುವ ರೈನಾ 34.37ರ ಸರಾಸರಿಯಲ್ಲಿ 4,985 ರನ್ ಗಳಿಸಿದ್ದಾರೆ. ಸ್ಫೋಟಕ ದಾಂಡಿಗನಾಗಿರುವ ರೈನಾರಿಂದ ಒಂದು ಶತಕ ಹಾಗೂ 35 ಅರ್ಧಶತಕಗಳು ಸಿಡಿದಿವೆ. ಗುಜರಾತ್ ಲಯನ್ಸ್ ತಂಡದ ಪರವೂ ಅವರು ಆಡಿದ್ದಾರೆ.

2.ವಿರಾಟ್ ಕೊಹ್ಲಿ (4,948 ರನ್): ಭಾರತ ರಾಷ್ಟ್ರೀಯ ತಂಡದ ಹಾಲಿ ನಾಯಕ ವಿರಾಟ್ ಕೊಹ್ಲಿ ಐಪಿಎಲ್ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ (ನಾಯಕ)ಅವಿಭಾಜ್ಯ ಅಂಗವಾಗಿದ್ದಾರೆ. 163 ಪಂದ್ಯಗಳನ್ನು ಆಡಿರುವ ಕಿಂಗ್ ಕೊಹ್ಲಿ, ರೈನಾಗಿಂತ 37 ರನ್ ಹಿಂದಿದ್ದಾರೆ. 38.35ರ ಸರಾಸರಿಯಲ್ಲಿ 4,948 ರನ್ ಅವರ ಖಾತೆಯಲ್ಲಿವೆ. 4 ಶತಕ ಹಾಗೂ 34 ಅರ್ಧಶತಕ ಅವರ ಬ್ಯಾಟ್‌ನಿಂದ ಸಿಡಿದಿವೆ.

3.ರೋಹಿತ್ ಶರ್ಮಾ (4,393 ರನ್): ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದು 173 ಪಂದ್ಯಗಳಿಂದ 31.86 ರ ಸರಾಸರಿಯಲ್ಲಿ 4,493 ರನ್ ಗಳಿಸಿದ್ದಾರೆ. ಅವರ ಖಾತೆಯಲ್ಲಿ ಒಂದು ಶತಕ ಹಾಗೂ 34 ಅರ್ಧಶತಕಗಳಿವೆ. ಈ ಹಿಂದೆ ಅವರು ಹೈದರಾಬಾದ್ ತಂಡದ ಪರವೂ ಆಡಿದ್ದರು.

4. ಗೌತಮ್ ಗಂಭೀರ್ (4,217 ರನ್): ಕೆಕೆಆರ್ ಹಾಗೂ ದಿಲ್ಲಿ ತಂಡಗಳ ಪರ ಗೌತಮ್ ಗಂಭೀರ್ ಒಟ್ಟು 154 ಪಂದ್ಯಗಳನ್ನು ಆಡಿ 4,217 ರನ್ ಕಲೆ ಹಾಕಿ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. 2012 ಹಾಗೂ 2014ರಲ್ಲಿ ನಾಯಕರಾಗಿ ಕೆಕೆಆರ್ ತಂಡವನ್ನು ಪ್ರಶಸ್ತಿಯವರೆಗೂ ಮುನ್ನಡೆಸಿದ್ದ ಹೆಗ್ಗಳಿಕೆ ಅವರದು. 36 ಅರ್ಧಶತಕಗಳನ್ನು ಅವರು ಸಿಡಿಸಿದ್ದಾರೆ.

5. ರಾಬಿನ್ ಉತ್ತಪ್ಪ (4,086): ಸದ್ಯ ಕೆಕೆಆರ್ ತಂಡದಲ್ಲಿರುವ ಕನ್ನಡಿಗ ರಾಬಿನ್ ಉತ್ತಪ್ಪ ಮುಂಬೈ ಇಂಡಿಯನ್ಸ್, ಆರ್‌ಸಿಬಿ, ಪುಣೆ ವಾರಿಯರ್ಸ್ ತಂಡಗಳನ್ನು ಪ್ರತಿನಿಧಿಸಿದ್ದಾರೆ. 165 ಪಂದ್ಯಗಳಿಂದ ಅವರು 28.57ರ ಸರಾಸರಿಯಲ್ಲಿ 4,086 ರನ್ ಗಳಿಸಿದ್ದಾರೆ. ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿರುವ ಅವರು 23 ಅರ್ಧಶತಕಗಳನ್ನು ಸಿಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News