​ಛತ್ತೀಸ್‌ಗಢ: ಎಲ್ಲ 10 ಸಂಸದರಿಗೆ ಟಿಕೆಟ್ ನಿರಾಕರಿಸಿದ ಬಿಜೆಪಿ

Update: 2019-03-20 03:37 GMT

ಹೊಸದಿಲ್ಲಿ, ಮಾ. 20: ಇತ್ತೀಚೆಗೆ ನಡೆದ ಛತ್ತೀಸ್‌ಗಢ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ ಭಾರತೀಯ ಜನತಾ ಪಕ್ಷ, ಇದೀಗ ಎಲ್ಲ ಹತ್ತು ಮಂದಿ ಹಾಲಿ ಸಂಸದರಿಗೆ ಟಿಕೆಟ್ ನಿರಾಕರಿಸುವ ಮೂಲಕ ಹೊಸ ಮುಖಗಳಿಗೆ ಮಣೆ ಹಾಕಿದೆ.

ಈ ಅಚ್ಚರಿಯ ನಿರ್ಧಾರವನ್ನು ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಬಿಜೆಪಿ ವ್ಯವಹಾರಗಳ ಉಸ್ತುವಾರಿ ಹೊಣೆ ಹೊಂದಿರುವ ಅನಿಲ್ ಜೈನ್ ತಿಳಿಸಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿ ಹಾಗೂ ಇತರ ಅಗ್ರ ನಾಯಕರನ್ನು ಒಳಗೊಂಡ ಬಿಜೆಪಿಯ ಸಾರ್ವತ್ರಿಕ ಚುನಾವಣಾ ಸಮಿತಿ ಈ ನಿರ್ಧಾರ ಕೈಗೊಂಡಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

"ಹೊಸ ಮುಖಗಳೊಂದಿಗೆ ಹೊಸ ಉತ್ಸಾಹದಿಂದ ನಾವು ಚುನಾವಣೆ ಎದುರಿಸುತ್ತೇವೆ" ಎಂದು ಅವರು ಹೇಳಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಕಳೆದುಕೊಂಡಿದ್ದ ಬಿಜೆಪಿ ಸಾಮ್ರಾಜ್ಯದ ಮರುಸ್ಥಾಪನೆಗೆ ಪೂರ್ವಭಾವಿಯಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪಕ್ಷದ ಮೂಲಗಳು ಹೇಳಿವೆ. 68 ಸದಸ್ಯಬಲದ ವಿಧಾನಸಭೆಯಲ್ಲಿ 15 ವರ್ಷದಿಂದ ಇದ್ದ ಅಧಿಕಾರ ಕಳೆದುಕೊಂಡದ್ದು ಮಾತ್ರವಲ್ಲದೇ ಬಿಜೆಪಿ ಸಂಖ್ಯಾಬಲ ಕೇವಲ 15ಕ್ಕೆ ಕುಸಿದಿತ್ತು. ಹಾಲಿ ಸಂಸದರ ಕುಟುಂಬ ಸದಸ್ಯರಿಗೆ ಕೂಡಾ ಟಿಕೆಟ್ ನೀಡುತ್ತಿಲ್ಲ ಎಂದು ಸ್ಪಷ್ಟಪಡಿಸಿದೆ. ಇದು ಕಟ್ಟುನಿಟ್ಟಾಗಿ ಪಾಲನೆಯಾದಲ್ಲಿ ಹಾಲಿ ಸಂಸದ ಅಭಿಷೇಕ್ ಸಿಂಗ್ ಅವರ ತಂದೆ ಹಾಗೂ ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್ ಟಿಕೆಟ್ ಪಡೆಯುವುದು ಕೂಡಾ ಅನುಮಾನವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News