ಬಿಜೆಪಿ ಆಡಳಿತದ ಜಾರ್ಖಂಡ್ ನಲ್ಲಿ 10,000 ಚೌಕಿದಾರರಿಗೆ 4 ತಿಂಗಳುಗಳಿಂದ ಸಿಕ್ಕಿಲ್ಲ ಸಂಬಳ!

Update: 2019-03-20 17:12 GMT
ಫೋಟೊ ಕೃಪೆ: telegraphindia.com

ರಾಂಚಿ, ಮಾ.20: ಒಂದೆಡೆ ಪ್ರಧಾನಿ ನರೇಂದ್ರ ಮೋದಿಯಾದಿಯಾಗಿ ಎಲ್ಲಾ ಬಿಜೆಪಿ ನಾಯಕರು ‘ಮೈ ಭಿ ಚೌಕಿದಾರ್’ ಎಂದು ಹೇಳುತ್ತಿದ್ದರೆ, ಇನ್ನೊಂದಡೆ ಬಿಜೆಪಿ ಆಡಳಿತದ ಜಾರ್ಖಂಡ್ ನಲ್ಲಿ 4 ತಿಂಗಳಿನಿಂದ ಸಂಬಳ ಸಿಗದೆ 10 ಸಾವಿರ ಚೌಕಿದಾರರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು The Telegraph ವರದಿ ಮಾಡಿದೆ.

ಸಂಬಳ ಸಿಗದೆ ಕಂಗಾಲಾಗಿರುವ ಚೌಕಿದಾರರು ಮಾರ್ಚ್ 19ರಂದು ರಾಂಚಿಯ ರಾತು ಪೊಲೀಸ್ ಠಾಣೆಯ ಬಳಿ ಒಂದು ಗಂಟೆ ಕಾಲ ಮೌನ ಪ್ರತಿಭಟನೆ ನಡೆಸಿದರು. ಒಂದು ಪೊಲೀಸ್ ಠಾಣೆಯ ವ್ಯಾಪ್ತಿಯ 10 ಗ್ರಾಮಗಳನ್ನು ನೋಡಿಕೊಳ್ಳುವ ಚೌಕಿದಾರರು ರಾಜ್ಯಾದ್ಯಂತ 24 ಜಿಲ್ಲೆಗಳಲ್ಲಿದ್ದಾರೆ ಮತ್ತು ಇವರ ಮಾಸಿಕ ಸಂಬಳ 20 ಸಾವಿರ ರೂ. ಕಳೆದ 4 ತಿಂಗಳುಗಳಿಂದ ಇವರಿಗೆ ಇನ್ನೂ ಸಂಬಳ ಸಿಕ್ಕಿಲ್ಲ. ಇಷ್ಟೇ ಅಲ್ಲದೆ ಚೌಕಿದಾರರು ಮಾಹಿತಿ ನೀಡಬೇಕಾದ 200 ದಫೇದಾರರಿಗೂ 4  ತಿಂಗಳ ಸಂಬಳ ಬಾಕಿಯಿದೆ ಎಂದು ವರದಿ ತಿಳಿಸಿದೆ.

"ಇಡೀ ದೇಶದಲ್ಲಿ ‘ಮೈ ಭಿ ಚೌಕಿದಾರ್’ ಎಂದು ಚರ್ಚೆಯಾಗುತ್ತಿರುವಾಗ ರಾಜ್ಯದಲ್ಲಿರುವ ಚೌಕಿದಾರರು ಮಾತ್ರ ಸಂಬಳ ಸಿಗದೆ ಕಂಗಾಲಾಗಿದ್ದಾರೆ" ಎಂದು ಜಾರ್ಖಂಡ್ ರಾಜ್ಯ ದಫಾದರ್ ಚೌಕಿದಾರ್ ಪಂಚಾಯತ್ ಅಧ್ಯಕ್ಷ ಕೃಷ್ಣ ದಯಾಳ್ ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News