ಭಾರತದ ಕೃಷಿ ಬಿಕ್ಕಟ್ಟು: ಅಭಿವೃದ್ಧಿಯ ಅಧಃಪತನ

Update: 2019-03-20 18:32 GMT

ಅಮೆರಿಕದ ಮಾದರಿಯನ್ನು ಗಮನಿಸಿದರೆ ಅದು ಕೃಷಿ ಬ್ಯುಝಿನೆಸ್‌ನ ಕಾರ್ಪೊರೇಶನ್‌ಗಳ ಲಾಭಕ್ಕಾಗಿ ಇದೆಯೇ ಹೊರತು ಭಾರತದ ರೈತರ ಹಿತಾಸಕ್ತಿಗಳನ್ನು ಕಾಪಾಡುವುದಕ್ಕಾಗಿ ಅಲ್ಲ ಎಂಬುದು ಸ್ಪಷ್ಟವಾಗುತ್ತದೆ. ವಿಶ್ವಬ್ಯಾಂಕಿನ ನಿರ್ದೇಶನಗಳ ಮೂಲಕ ಈ ಕಾರ್ಪೊರೇಶನ್‌ಗಳಿಗೆ ತಲೆಬಾಗುತ್ತ ಸಾಗುವ ಭಾರತದ ಭವಿಷ್ಯ ಹೇಗಿರಬಹುದು?


1978ರ ತನ್ನ ‘ಇಂಡಿಯಾ ಮಾರ್ಟ್‌ಗೇಜ್ಡ್’ ಎಂಬ ಪುಸ್ತಕದಲ್ಲಿ ಟಿ.ಎನ್.ರೆಡ್ಡಿಯವರು, ಭಾರತ ಒಂದು ದಿನ ತನ್ನ ಎಲ್ಲ ರಂಗಗಳನ್ನು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಮುಕ್ತವಾಗಿ ತೆರೆದಿಟ್ಟು ತನ್ನ ಆರ್ಥಿಕ ಸಾರ್ವಭೌಮತ್ವವನ್ನು ಸಾಮ್ರಾಜ್ಯಶಾಹಿ ಶಕ್ತಿಗಳಿಗೆ ಒಪ್ಪಿಸಿ ಬಿಡುತ್ತದೆಂದು, ಆರ್ಥಿಕವಾಗಿ ಸಂಪೂರ್ಣವಾಗಿ ಶರಣಾಗುತ್ತದೆಂದು ಭವಿಷ್ಯ ನುಡಿದಿದ್ದರು.

ಅವರು ಅಂದು ಹೇಳಿದ ಭವಿಷ್ಯ ಇಂದು ನಿಜವಾಗಿದೆ. ಅಮೆರಿಕ ಮತ್ತು ಯುರೋಪ್ ಬಂಡವಾಳಶಾಹಿಯ ಒಂದು ಹಾನಿಕಾರಕ ಕೂಪಕ್ಕೆ ಜೋತು ಬಿದ್ದು ಆರ್ಥಿಕ ಜಡತೆ ಮತ್ತು ಭಾರೀ ಅಸಮಾನತೆಗಳನ್ನು ಉಂಟು ಮಾಡಲು ಅನೇಕ ರೀತಿಯ ತಂತ್ರಗಳನ್ನು ಬಳಸಿವೆ.
ಜಾಗತೀಕರಣದ ಮೂಲಕ, ಜಗತ್ತಿನ ಹಲವು ಭಾಗಗಳಲ್ಲಿ ಹೊಸ ಮಾರುಕಟ್ಟೆಗಳನ್ನು ಸ್ಥಾಪಿಸುವ ಮೂಲಕ ಅವುಗಳು ಹಲವು ಅಭಿವೃದ್ಧಿಶೀಲ ದೇಶಗಳ ಸಂಪತ್ತನ್ನು ಕೊಳ್ಳೆ ಹೊಡೆಯುವ ಸತತ ಅಭಿಯಾನದಲ್ಲಿ ತೊಡಗಿದೆ.

 ಭಾರತದ ಆಹಾರ ಮತ್ತು ಕೃಷಿ ರಂಗಕ್ಕೂ ವಿದೇಶಿ ಕೃಷಿ ಬಂಡವಾಳ ಲಗ್ಗೆ ಇಟ್ಟಿದೆ. ಪಾಶ್ಚಾತ್ಯ ಕೃಷಿ ವಾಣಿಜ್ಯ (ಅಗ್ರಿ ಬ್ಯುಝಿನೆಸ್) ಭಾರತದ ಅಭಿವೃದ್ಧಿ ಕಾರ್ಯಸೂಚಿಯನ್ನು ರೂಪಿಸುತ್ತಿದೆ. 3,00,000ಕ್ಕಿಂತಲೂ ಹೆಚ್ಚು ರೈತರು (1994ರಿಂದ) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಮತ್ತು ಇದಕ್ಕಿಂತಲೂ ಹೆಚ್ಚು ಮಂದಿ ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದಾರೆ ಅಥವಾ ತಾವು ಮಾಡಿದ ಸಾಲದ ಪರಿಣಾಮವಾಗಿ ಬೇಸಾಯಕ್ಕೆ ವಿದಾಯ ಹೇಳಿದ್ದಾರೆ. ಅಭಿವೃದ್ಧಿಯ ಈ ಖೋಟಾ ಪರಿಕಲ್ಪನೆ ಇತರ ರಂಗಗಳಿಗೂ ವ್ಯಾಪಿಸಿದೆ. ಉದ್ಯಮಗಳಿಗಾಗಿ ವಿಶೇಷ ಆರ್ಥಿಕ ವಲಯ, ಅಣುಸ್ಥಾವರ ಮತ್ತು ಬೃಹತ್ ಪ್ರಮಾಣದ ಯೋಜನೆಗಳಿಗಾಗಿ ಮಿಲಿಯಗಟ್ಟಲೆ ಜನರನ್ನು ಸ್ಥಳಾಂತರಗೊಳಿಸಲಾಗಿದೆ. ಅವರ ಬದುಕನ್ನು ನಾಶಗೊಳಿಸಲಾಗಿದೆ. ಜನರನ್ನು ಅವರ ಜಮೀನುಗಳಿಂದ, ವಾಸಸ್ಥಳಗಳಿಂದ ಬಲವಂತವಾಗಿ ಒಕ್ಕಲೆಬ್ಬಿಸಿ ಹೊರಗೆ ದಬ್ಬಿ ಅವರನ್ನು ಶಿಬಿರಗಳಲ್ಲಿ ಇಟ್ಟು ಅವರ ಮೇಲೆ ಮಾನವಹಕ್ಕು ಉಲ್ಲಂಘನೆಯ ದೌರ್ಜನ್ಯಗಳನ್ನೆಸಗಲು ಸರಕಾರಗಳು ಪೊಲೀಸ್ ಹಾಗೂ ಮಿಲಿಟರಿ ಶಕ್ತಿಗಳನ್ನು ಬೇಕಾಬಿಟ್ಟಿಯಾಗಿ ಬಳಸಿಕೊಂಡಿವೆ.

ಭಾರತದ ಕೃಷಿ ಬಿಕ್ಕಟ್ಟು ಭಾರತ ಈಗ ವಿದೇಶಿ ಕೃಷಿ ಬಂಡವಾಳ ಹೂಡಿಕೆಗೆ ನೆರವಾಗುತ್ತ ಸದ್ಯದ ಕೃಷಿ ಪದ್ಧತಿಯನ್ನು ಖಂಡಿಸುವ ಧಾವಂತದಲ್ಲಿದೆ. ಇದೇ ವೇಳೆ ಅಗ್ಗದ ಆಹಾರ ಮತ್ತು ರೈತರನ್ನು ಇನ್ನಷ್ಟು ಬಡವರನ್ನಾಗಿಸುವ ಯೋಜನೆಗಳನ್ನವಲಂಬಿಸಿ ಭಾರತದ ಒಟ್ಟು ದೇಶಿಯ ಉತ್ಪನ್ನ (ಜಿಡಿಪಿ)ವನ್ನು ಹೆಚ್ಚಿಸುವ ಪ್ರಯತ್ನ ನಡೆದಿದೆ. ರೈತರಿಗೆ ಸಿಗದ ಬಡ್ಡಿರಹಿತ ಸಾಲ ಬೃಹತ್ ಕಾರ್ಪೊರೇಶನ್‌ಗಳಿಗೆ ಸಿಗುತ್ತಿದೆಯಾದರೂ ಅವುಗಳಿಂದ ಉದ್ಯೋಗಗಳು ಸೃಷ್ಟಿಯಾಗುತ್ತಿಲ್ಲ. ಈಗ ಇರುವ ಚಿಕ್ಕ ಹಿಡುವಳಿಯ ಬೇಸಾಯದ ಜಾಗದಲ್ಲಿ ಅಂತರ್‌ರಾಷ್ಟ್ರೀಯ ಕೃಷಿ ವ್ಯಾಪಾರ ಮತ್ತು ಚಿಲ್ಲರೆ (ರಿಟೈಲ್) ಕಂಪೆನಿಗಳನ್ನು ತಂದುಕೂರಿಸುವ ಪ್ರಯತ್ನ ನಡೆಯುತ್ತಿದೆ. ಅಮೆರಿಕದ ಕೃಷಿ ವ್ಯಾಪಾರ (ಅಗ್ರಿಬ್ಯುಝಿನೆಸ್) ಕಾರ್ಪೊರೇಶನ್‌ಗಳು ಈ ಪ್ರಕ್ರಿಯೆಯ ಮುಂಚೂಣಿ ಯಲ್ಲಿವೆ. ಕೃಷಿ ತಂತ್ರಜ್ಞಾನ, ಕೃಷಿ ಉಪಕರಣಗಳು, ಸರಕು ವ್ಯಾಪಾರ, ಆಹಾರ ಪರಿಷ್ಕರಣೆ ಹಾಗೂ ಚಿಲ್ಲರೆ(ರಿಟೈಲ್) ರಂಗಗಳಿಗೆ ಸೇರಿದ ಈ ಕಾರ್ಪೊರೇಶನ್‌ಗಳು ಭಾರೀ ಲಾಭ ಮಾಡಿಕೊಳ್ಳುತ್ತಿವೆ. ಅಮೆರಿಕದ ಮಾದರಿಯನ್ನು ಗಮನಿಸಿದರೆ ಅದು ಕೃಷಿ ಬ್ಯುಝಿನೆಸ್ ಕಾರ್ಪೊರೇಶನ್‌ಗಳ ಲಾಭಕ್ಕಾಗಿ ಇದೆಯೇ ಹೊರತು ಭಾರತದ ರೈತರ ಹಿತಾಸಕ್ತಿಗಳನ್ನು ಕಾಪಾಡುವುದಕ್ಕಾಗಿ ಅಲ್ಲ ಎಂಬುದು ಸ್ಪಷ್ಟವಾಗುತ್ತದೆ.

ವಿಶ್ವಬ್ಯಾಂಕಿನ ನಿರ್ದೇಶನಗಳ ಮೂಲಕ ಈ ಕಾರ್ಪೊರೇಶನ್‌ಗಳಿಗೆ ತಲೆಬಾಗುತ್ತ ಸಾಗುವ ಭಾರತದ ಭವಿಷ್ಯ ಹೇಗಿರಬಹುದು? ಆರೋಗ್ಯಸೇವೆ ಪಡೆಯಲು ಹೆಚ್ಚು ಹೆಚ್ಚು ವೆಚ್ಚ, ಸವಕಳಿಯಾದ ಮಣ್ಣು, ಹೊಲ, ಕೀಟಗಳ ಸಂಖ್ಯೆಯಲ್ಲಿ ಭಾರೀ ಕುಸಿತ, ಕಲುಶಿತ ನೀರು, ನೀರಿನ ಕೊರತೆ, ರಸಾಯನಿಕ ಹಾಗೂ ಆಹಾರ ಸಂಸ್ಕರಣ ಕಂಪೆನಿಗಳು; ಅಥವಾ ಒಟ್ಟಿನಲ್ಲಿ ಗ್ರಾಮೀಣ ಸಮುದಾಯಗಳ ವಿನಾಶ. ಆದರೂ ಔದ್ಯೋಗಿಕ ಪ್ರಮಾಣದ ಕೃಷಿ ಮತ್ತು ಮೊನ್ಸಾಂಟೊ-ಬೇಯರ್, ಕಾರ್ಗಿಲ್ ಮತ್ತು ಇತರ ಅಂತರ್‌ರಾಷ್ಟ್ರೀಯ ಕಂಪೆನಿಗಳ ಲಾಭಕ್ಕಾಗಿ ಅಮೆರಿಕ/ಯುರೋಪ್ ಹೇಳುವ ಜಾಗತಿಕ ಆಹಾರ ಪ್ರಭುತ್ವಕ್ಕೆ ಶರಣಾಗುವ ದಿಕ್ಕಿನಲ್ಲಿ ಭಾರತ ಸಾಗುತ್ತಿದೆ. ಹಾಗಾದರೆ ಇವೆಲ್ಲದರ ಹಿಂದಿರುವ ಮಸಲತ್ತು ಯಾವುದು? ಚೀನಾ ಈಗ ಆಗಿರುವ ಹಾಗೆ ಭಾರತವನ್ನೂ ಪರಿವರ್ತಿಸುವುದು. ಅಂದರೆ ಗ್ರಾಮೀಣ ಪ್ರದೇಶಗಳಿಂದ ಮಿಲಿಯಗಟ್ಟಲೆ ಜನರು ನಗರಗಳಿಗೆ ವಲಸೆ ಹೋಗುವಂತಹ ಸ್ಥಿತಿಯನ್ನು ಹಳ್ಳಿಗಳಲ್ಲಿ ನಿರ್ಮಿಸಿ ನಗರಗಳಲ್ಲಿ ವಿದೇಶಿ ಕಂಪೆನಿಗಳಿಗೆ ಕಡಿಮೆ ವೇತನಕ್ಕೆ ಕಾರ್ಮಿಕರು ಸಿಗುವಂತೆ ಮಾಡುವುದು. ಭಾರತದಲ್ಲಿ ಗ್ರಾಮಿಣ ಪ್ರದೇಶದಿಂದ ನಗರಗಳಿಗೆ ವಲಸೆ ಹೋಗುವ ರೈತರು ಬಡವರು ನಗರಗಳ ಕಟ್ಟಡ ನಿರ್ಮಾಣ ರಂಗಕ್ಕೆ ಅಗ್ಗದ ದಿನಕೂಲಿಗಳಾಗುತ್ತಾರೆ ಅಥವಾ ಕೆಳ ಹಂತದ ಕಾರ್ಖಾನೆ ನೌಕರಿಗಳಿಗೆ ಅಭ್ಯರ್ಥಿಗಳಾಗುತ್ತಾರೆ. ಭಾರತವನ್ನು ಕಾಡುತ್ತಿರುವ ಕೃಷಿ ಬಿಕ್ಕಟನ್ನು ಪರಿಹರಿಸಬೇಕಾದರೆ ಚಿಕ್ಕ ರೈತ ದೇಶದ ಯೋಜನೆಗಳ ಕೇಂದ್ರ ಬಿಂದುವಾಗಬೇಕು. ಸ್ವಾವಲಂಬನೆ, ಸ್ಥಳೀಯಗೊಳಿಸುವಿಕೆ, ಆಹಾರ ಸಾರ್ವಭೌಮತ್ವ, ನವೀಕರಿಸಬಹುದಾದ ಕೃಷಿ ಮತ್ತು ಕೃಷಿ ಪರಿಸರವನ್ನು ಕೃಷಿ ಯೋಜನೆಯ ಕೇಂದ್ರವಾಗುವಂತೆ ಮಾಡಬೇಕು. ಕೃಷಿ ಪರಿಸರ ಕೇಂದ್ರಿತವಾಗಿ ಯೋಜನೆಗಳು ರೂಪುಗೊಳ್ಳಬೇಕು.

‘ಅಭಿವೃದ್ಧಿಗೆ ಪರ್ಯಾಯ’ವಾಗಿ ಅಭಿವೃದ್ಧಿ ನಂತರದ ಪರಿಕಲ್ಪನೆ ನಮ್ಮದಾಗಬೇಕು. ಈ ಪರಿಕಲ್ಪನೆಯ ರೂವಾರಿ ಆರ್ತುರೊ ಎಸ್ಕೊಬಾರ್ ಲ್ಯಾಟಿನ್ ಅಮೆರಿಕದ ಕೃಷಿಯ ಬಗ್ಗೆ ಹೇಳುವ ಮಾತುಗಳು ಭಾರತಕ್ಕೂ ಅನ್ವಯವಾಗುತ್ತದೆ. ಅಂದರೆ ಈಗ ನಡೆಯುತ್ತಿರುವ ಗ್ರಾಮೀಣ ಜನತೆಯ ಸ್ಥಳಾಂತರ, ನಗರಗಳ ಕಡೆಗಿನ ಅನಿವಾರ್ಯ ನಡೆ ನಿಲ್ಲಬೇಕು. ತೈಲ, ನೀರು ಮತ್ತು ಇತರ ಸಂಪನ್ಮೂಲಗಳನ್ನು ಅತ್ಯಂತ ವೇಗವಾಗಿ ಬರಿದು ಮಾಡುವ ಅಭಿವೃದ್ಧಿ ಮಾದರಿ ಕೊನೆಗಾಣಬೇಕು. ನಾವು ನದಿಗಳನ್ನು ಹಾಗೂ ಸಾಗರಗಳನ್ನು ವಿಷಯಮಯಗೊಳಿಸಿದ್ದೇವೆ. ವನ್ಯ ಜೀವಿಗಳನ್ನು ವಿನಾಶದ ಹಂತಕ್ಕೆ ತಂದು ನಿಲ್ಲಿಸಿದ್ದೇವೆ. ವಾತಾವರಣದ ರಾಸಾಯನಿಕ ಸಂರಚನೆಯನ್ನು ಬದಲಿಸಿದ್ದೇವೆ. ಇದೆಲ್ಲದರ ಪರಿಣಾಮ ಕಡಿಮೆಯಾಗುತ್ತಿರುವ ವಿವಿಧ ಸಂಪನ್ಮ್ಮೂಲಗಳಿಗಾಗಿ ಅಂತ್ಯವಿಲ್ಲದ ಸಂಘರ್ಷಗಳು, ಹಿಂಸೆ, ಘರ್ಷಣೆಗಳು ಮತ್ತು ಮನುಕುಲದ ತಲೆಯ ಮೇಲೆ ಅಣ್ವಸ್ತ್ರ ಕ್ಷಿಪಣಿಗಳು ಹಾರಾಡುವ ಭಯ. ಇನ್ನಾದರೂ ಅಭಿವೃದ್ಧಿಯ ಕುರಿತಾದ ನಮ್ಮ ಪರಿಕಲ್ಪನೆ ಬದಲಾಗಬೇಕು.


ಕೃಪೆ: countercurrents

Writer - ಕೊಲಿನ್ ಚಾಡ್ ಹಂಟರ್

contributor

Editor - ಕೊಲಿನ್ ಚಾಡ್ ಹಂಟರ್

contributor

Similar News