1,600 ಅತಿಥಿಗಳ ಖಾಸಗಿ ದೃಶ್ಯ ಸೆರೆಹಿಡಿದ ನಾಲ್ವರ ಬಂಧನ

Update: 2019-03-21 11:18 GMT

ಸಿಯೋಲ್, ಮಾ. 21: ದಕ್ಷಿಣ ಕೊರಿಯದ ವಿವಿಧ ನಗರಗಳ 30 ಹೋಟೆಲ್‌ಗಳ 42 ಕೊಠಡಿಗಳಲ್ಲಿ ರಹಸ್ಯ ಕ್ಯಾಮರ ಅಳವಡಿಸಿ 1600 ಅತಿಥಿಗಳ ಖಾಸಗಿ ದೃಶ್ಯಗಳನ್ನು ಸೆರೆಹಿಡಿದ ಘಟನೆಗೆ ಸಂಬಂಧಿಸಿ ನಾಲ್ವರು ಯುವಕರನ್ನು ಬಂಧಿಸಲಾಗಿದೆ.

ಆರೋಪಿಗಳು ಹೊಟೇಲ್ ಕೊಠಡಿಗಳ ಗೋಡೆಗಳಲ್ಲಿ, ದಿನ ಬಳಕೆಯ ವಸ್ತುಗಳಲ್ಲಿ ಅನೇಕ ಕ್ಯಾಮರಾಗಳನ್ನು ಅಳವಡಿಸಿ ಗ್ರಾಹಕರ ರಹಸ್ಯ ದೃಶ್ಯಗಳನ್ನು ಸೆರೆಹಿಡಿದು ಅವುಗಳನ್ನು ದುಡ್ಡಿಗಾಗಿ ನೇರ ಪ್ರಸಾರ ಮಾಡುತ್ತಿದ್ದರು. ಡಿಜಿಟಲ್ ಟೆಲಿವಿಷನ್ ಬಾಕ್ಸ್‌ಗಳು, ಗೋಡೆಗಳ ಸಾಕೆಟ್‌ಗಳು, ಹೇರ್ ಡ್ರೈಯರ್‌ಗಳು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಅಡಗಿಸಡಲಾದ ಕ್ಯಾಮರಾಗಳಿಂದ ಖಾಸಗಿ ದೃಶ್ಯಗಳನ್ನು ಸೆರೆಹಿಡಿಯಲಾಗುತ್ತಿತ್ತು. ಹೊಟೇಲ್ ಕೊಠಡಿಗಳಲ್ಲಿರುವ ಅತಿಥಿಗಳ ಖಾಸಗಿ ಸಂಭಾಷಣೆಗಳು, ಸ್ನಾನದಕೊಠಡಿಯ ದೃಶ್ಯಗಳು, ಲೈಂಗಿಕ ದೃಶ್ಯಗಳು, ಪ್ರಾಥಮಿಕ ಕ್ರಿಯೆಗಳ ದೃಶ್ಯಗಳನ್ನು ಕೂಡ ಆರೋಪಿಗಳು ಗ್ರಾಹಕರ ಕಂಪ್ಯೂಟರ್‌ಗಳಿಗೆ ನೇರ ಪ್ರಸಾರ ಮಾಡುತ್ತಿದ್ದರು.

44.95 ಡಾಲರ್‌ಗಳನ್ನು ನೀಡಿ ಸದಸ್ಯತ್ವ ಹೊಂದಿದ 4000 ಮಂದಿಗೆ ದೃಶ್ಯಗಳನ್ನು ಕಳಿಸಲಾಗಿದೆ. ಕಳೆದ ಆಗಸ್ಟ್‌ನಲ್ಲಿ ದಕ್ಷಿಣ ಕೊರಿಯಾದಲ್ಲಿ 30ರಷ್ಟು ಹೊಟೇಲ್‌ಗಳಿಂದ ಖಾಸಗಿ ದೃಶ್ಯಗಳನ್ನು ಸೆರೆಹಿಡಿಯಲಾಗಿತ್ತು. ನವೆಂಬರ್‌ನಲ್ಲಿ ಆರೋಪಿಗಳು ಒಂದು ವೆಬ್‌ಸೈಟ್ ಸ್ಥಾಪಿಸಿ ಖಾಸಗಿ ದೃಶ್ಯಗಳನ್ನು ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಿದ್ದರು. ಆರೋಪಿಗಳು ಇದುವರೆಗೆ ಸುಮಾರು 800 ವೀಡಿಯೊ ದೃಶ್ಯಗಳನ್ನು ಅಪ್‌ಲೋಡ್ ಮಾಡಿದ್ದರು. ವೆಬ್‌ಸೈಟ್ ನಿರ್ಮಾಣದ ಹೆಸರಿನಲ್ಲಿ ಆರೋಪಿಗಳು 97 ಮಂದಿಯಿಂದ ಹಣ ಸಂಗ್ರಹಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ತಮ್ಮ ಹೊಟೇಲ್‌ಗೆ ಬರುವ ಅತಿಥಿಗಳ ಖಾಸಗಿ ದೃಶ್ಯಗಳನ್ನು ಸೆರೆಹಿಡಿಯುವುದು ಮಾಲಕರ ಗಮನಕ್ಕೆ ಬಂದಿದ್ದರೂ ಅವರು ವೌನ ಪಾಲಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣವು ದಕ್ಷಿಣ ಕೊರಿಯಾದಲ್ಲಿ ಭಾರೀ ಕೋಲಾಹಲವನ್ನೆಬ್ಬಿಸಿದೆ. ಪ್ರಕರಣ ಬಹಿರಂಗವಾದ ಬೆನ್ನಲ್ಲೇ ‘‘ನನ್ನ ಬದುಕು ನಿಮಗೆ ನೀಲಿ ಚಿತ್ರ ಮಾಡುವುದಕ್ಕಲ್ಲ’’ ಎಂಬ ಘೋಷಣೆಯಡಿ ಸಾವಿರಾರು ಯುವತಿಯರು ಪ್ರತಿಭಟನೆ ನಡೆಸಿದ್ದರು.ರಹಸ್ಯ ಕ್ಯಾಮರಾಗಳಿಂದ ಇತರರ ರಹಸ್ಯಗಳನ್ನು ಸೆರೆಹಿಡಿಯುವ ಪ್ರಕರಣಗಳು ಈ ಹಿಂದೆ ದಕ್ಷಿಣ ಕೊರಿಯಾದಲ್ಲಿ ವಿವಾದವನ್ನೆಬ್ಬಿಸಿದ್ದರೂ, ದೃಶ್ಯಗಳನ್ನು ಇಂಟರ್‌ನೆಟ್‌ನಲ್ಲಿ ನೇರಪ್ರಸಾರ ಮಾಡಿದ್ದು ಇದೇ ಮೊದಲಾಗಿದೆ. ಈ ಬಗ್ಗೆ 2017ರಲ್ಲಿ 6,400 ದೂರುಗಳು ಬಂದಿದ್ದವು. ಜನವರಿಯಲ್ಲಿ ಅಶ್ಲೀಲ ಸೈಟ್‌ಗಳ ಸಹ ಮಾಲಕನನ್ನು ದಂಡ ಹಾಗೂ ನಾಲ್ಕು ವರ್ಷಗಳ ಜೈಲು ಶಿಕ್ಷೆಗೆ ಗುರಿಪಡಿಸಲಾಗಿತ್ತು. ಲೈಂಗಿಕಾಸಕ್ತಿಯನ್ನೊಳಗೊಂಡ ವೀಡಿಯೊ ನಿರ್ಮಾಣ ಹಾಗೂ ಪ್ರಚಾರವನ್ನು ದಕ್ಷಿಣ ಕೊರಿಯದಲ್ಲಿ ನಿಷೇಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News