ಬಿಜೆಪಿ ಮೊದಲ ಪಟ್ಟಿಯ ಅಚ್ಚರಿ : ಪಕ್ಷದ ಪಿತಾಮಹ ಅಡ್ವಾಣಿಗಿಲ್ಲ ಗಾಂಧಿನಗರದ ಟಿಕೆಟ್

Update: 2019-03-21 14:49 GMT

ಹೊಸದಿಲ್ಲಿ, ಮಾ.21: ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿರುವ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಗುರುವಾರ ಸಂಜೆ ಬಿಡುಗಡೆ ಮಾಡಿದ್ದು ಪಕ್ಷದ ವರಿಷ್ಠ ನಾಯಕ, ಮಾಜಿ ಉಪಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಅವರ ಕ್ಷೇತ್ರ ಗುಜರಾತಿನ ಗಾಂಧಿನಗರದಿಂದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸ್ಪರ್ಧಿಸಲಿದ್ದಾರೆ ಎಂದು ಪ್ರಕಟಿಸಿರುವುದು ಅಚ್ಚರಿ ಮೂಡಿಸಿದೆ.

ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರು ಪ್ರಕಟಿಸಿರುವ ಪಟ್ಟಿಯಲ್ಲಿ ಗಾಂಧಿನಗರದಿಂದ ಅಮಿತ್ ಶಾ ಸ್ಪರ್ಧಿಸುತ್ತಾರೆ ಎಂದು ಹೇಳಿದ್ದಾರೆ . ಮೋದಿ ಬಳಿಕ ಎರಡನೇ ಹೆಸರೇ ಅಮಿತ್ ಶಾ ಅವರದ್ದಾಗಿದೆ.

ಎಲ್ ಕೆ ಅಡ್ವಾಣಿ 1998–99 ರಿಂದ ಸತತ ಐದು ಚುನಾವಣೆಗಳಲ್ಲಿ ಗಾಂಧಿನಗರದಿಂದ ಆಯ್ಕೆಯಾಗುತ್ತಾ ಬಂದಿದ್ದಾರೆ. 1991–96ರವರೆಗೂ ಅವರು ಗಾಂಧಿನಗರದಿಂದ ಸಂಸದರಾಗಿದ್ದು ಒಟ್ಟು ಆರು ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ.

2014 ರಲ್ಲಿ ಈ ಕ್ಷೇತ್ರವನ್ನು ಅಡ್ವಾಣಿ ಅವರು ಗೆದ್ದಿದ್ದರೂ ಮೋದಿ ಸರಕಾರದಲ್ಲಿ ಅವರಿಗೆ ಯಾವುದೇ ಪ್ರಮುಖ ಹುದ್ದೆ ಸಿಕ್ಕಿರಲಿಲ್ಲ. ಸ್ಪೀಕರ್ ಸ್ಥಾನದ ಮೇಲೆ ಅವರು ಕಣ್ಣಿಟ್ಟಿದ್ದರೂ ಅದು ಅವರಿಗೆ ಸಿಗಲಿಲ್ಲ. ಬಳಿಕ ರಾಷ್ಟ್ರಪತಿ ಹುದ್ದೆಗೆ ಅವರನ್ನು ಪರಿಗಣಿಸುತ್ತಾರೆ ಎಂದು ಹೇಳಲಾಗಿತ್ತಾದರೂ ಅದೂ ರಮಾನಾಥ್ ಕೋವಿಂದ್ ಅವರ ಪಾಲಾಯಿತು. ಈಗ ಅಡ್ವಾಣಿ ಅವರಿಗೆ ನೆಚ್ಚಿನ ಗಾಂಧಿನಗರ ಲೋಕಸಭಾ ಕ್ಷೇತ್ರವೂ ಕೈಕೊಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News