ಹಿರಿಯ ನಟಿ ಎಲ್.ವಿ.ಶಾರದ ನಿಧನ

Update: 2019-03-21 15:31 GMT

ಬೆಂಗಳೂರು, ಮಾ.21: ಫಣಿಯಮ್ಮ ಸಿನೆಮಾ ಖ್ಯಾತಿಯ ಹಿರಿಯ ನಟಿ ಎಲ್.ವಿ.ಶಾರದ(79) ಗುರುವಾರ ಬೆಳಗ್ಗೆ ಅನಾರೋಗ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ರಾಜ್ಯ ರಾಜಕಾರಣದಲ್ಲಿ ಹೆಸರು ಮಾಡಿದ್ದ ಎಲ್.ಎಸ್.ವೆಂಕಾಜಿರಾವ್ ಅವರ ಪುತ್ರಿ ಎಲ್.ವಿ.ಶಾರದ, ವಂಶವೃಕ್ಷ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದು, ನಟಿಸಿದ ಮೊದಲ ಚಿತ್ರಕ್ಕೇ ರಾಜ್ಯ ಸರಕಾರದ ಶ್ರೇಷ್ಠನಟಿ ಪ್ರಶಸ್ತಿ ಪಡೆದಿದ್ದರು. ಬಿ.ವಿ.ಕಾರಂತ್, ಪ್ರೇಮಾ ಕಾರಂತ್, ಜಿ.ವಿ.ಅಯ್ಯರ್‌ರವರ ನಿರ್ದೇಶನದ ಚಿತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದ ನಟಿ ಶಾರದಾ, ಸಿದ್ದಲಿಂಗಯ್ಯ ನಿರ್ದೇಶನದ ಭೂತಯ್ಯನ ಮಗ ಅಯ್ಯು ಎಂಬ ವ್ಯಾಪಾರಿ ಚಿತ್ರದಲ್ಲೂ ನಟಿಸಿ, ಸೈ ಎನಿಸಿಕೊಂಡಿದ್ದರು.

ಎಸ್.ಎಲ್.ಭೈರಪ್ಪನವರ ಕಾದಂಬರಿ ಆಧರಿಸಿದ ವಂಶವೃಕ್ಷ ಚಿತ್ರವನ್ನು ಬಿ.ವಿ.ಕಾರಂತ್ ನಿರ್ದೇಶಿಸಿದ್ದು, ಶಾರದಾ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಎಂ.ಕೆ.ಇಂದಿರಾ ಅವರ ಕಾದಂಬರಿ ಆಧಾರಿತ ಫಣಿಯಮ್ಮ ಚಿತ್ರವನ್ನು ಪ್ರೇಮಾ ಕಾರಂತ್ ನಿರ್ದೇಶಿಸಿದ್ದರು, ಇದು ಶಾರದರಿಗೆ ಹೆಸರು ತಂದುಕೊಟ್ಟ ಚಿತ್ರವಾಗಿತ್ತು. ವ್ಯಾಪಾರಿ ಚಿತ್ರಗಳ ಬಗ್ಗೆ ಆಸಕ್ತಿ ತೋರದ ಅವರು, ಕತೆಗೆ, ಪಾತ್ರಕ್ಕೆ, ಪ್ರತಿಭಾ ಪ್ರದರ್ಶನಕ್ಕೆ, ಅಭಿವ್ಯಕ್ತಿಗೆ ಅವಕಾಶ ನೀಡುವ ಕಲಾತ್ಮಕ ಚಿತ್ರಗಳಿಗೆ ತಮ್ಮನ್ನು ಸೀಮಿತಗೊಳಿಸಿಕೊಂಡಿದ್ದರು. ವಾತ್ಸಲ್ಯ ಚಿತ್ರದ ಅಭಿನಯಕ್ಕಾಗಿ ಅವರಿಗೆ ಶ್ರೇಷ್ಠ ಪೋಷಕ ನಟಿ ರಾಜ್ಯ ಪ್ರಶಸ್ತಿ ದೊರಕಿತ್ತು.

ಆದಿ ಶಂಕರಾಚಾರ್ಯ, ಮಧ್ವಾಚಾರ್ಯ, ನಕ್ಕಳಾ ರಾಜಕುಮಾರಿ, ಒಂದು ಪ್ರೇಮದ ಕಥೆ ಅವರು ನಟಿಸಿದ ಇತರ ಕೆಲವು ಸಿನಿಮಾಗಳು. ನಟನೆಯಿಂದ ವಿಮುಖರಾದ ನಂತರ ಶಾರದಾ ಸಾಕ್ಷ್ಯಚಿತ್ರ ನಿರ್ಮಾಣ, ನಿರ್ದೇಶನದಲ್ಲಿ ತೊಡಗಿಸಿಕೊಂಡಿದ್ದರು. ಬೆಂಗಳೂರು ಕೆರೆಗಳ ಬಗ್ಗೆ ಅವರು ತಯಾರಿಸಿದ ಕೆರೆ ಹಾಡು ವಿಶೇಷ ಮನ್ನಣೆಗೆ ಪಾತ್ರವಾಗಿತ್ತು. ಮೈಸೂರು ವೀಣೆ ಕುರಿತ ಸಾಕ್ಷಚಿತ್ರವೂ ಸೇರಿದಂತೆ ದೂರದರ್ಶನಕ್ಕಾಗಿ ಅವರು ಕೆಲವು ಸಾಕ್ಷಚಿತ್ರಗಳನ್ನು ತಯಾರಿಸಿದ್ದರು. ದಶಕಗಳ ಹಿಂದೆ ತ್ರಿವೆಂಡ್ರಮ್‌ನಲ್ಲಿ ನಡೆದ ಅಂತರ್‌ರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅವರು ಜ್ಯೂರಿ ಸದಸ್ಯೆಯಾಗಿಯೂ ಕಾರ್ಯನಿರ್ವಹಿಸಿದ್ದರು. ಎಲ್.ವಿ.ಶಾರದಾ ರಾವ್ ನಿಧನಕ್ಕೆ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘವು ಸಂತಾಪ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News