ಭಾರತೀಯ ಭಾಷೆಯಲ್ಲಿಯೇ ಸಾಹಿತ್ಯ ರಚನೆಯಾಗಲಿ: ಚಂದ್ರಶೇಖರ ಕಂಬಾರ

Update: 2019-03-21 15:38 GMT

ಬೆಂಗಳೂರು, ಮಾ.21: ಭಾರತೀಯ ಭಾಷೆಗಳಲ್ಲಿಯೇ ಬಹುಪಾಲು ಸಾಹಿತ್ಯ ರಚನೆಯಾಗುವ ವಾತಾವರಣ ನಿರ್ಮಿಸಬೇಕು ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಕಂಬಾರ ಹೇಳಿದರು.

ಗುರುವಾರ ನಗರದ ಸೆಂಟ್ರಲ್ ಕಾಲೇಜಿನ ಕೆನರಾ ಬ್ಯಾಂಕ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ಸಭಾಂಗಣದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಏರ್ಪಡಿಸಿದ್ದ, ವಿಶ್ವ ಕಾವ್ಯ ದಿನದ ಅಂಗವಾಗಿ ‘ಪೃಥ್ವಿ; ಕಾವೋತ್ಸವ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತೀಯ ಭಾಷೆಗಳಲ್ಲಿ ಬಹುಪಾಲು ಸಾಹಿತ್ಯ ರಚನೆಯಾಗಬೇಕು. ಆದರೆ, ಪಾಶ್ಚಿಮಾತ್ಯದ ಚಿಂತನೆಯಲ್ಲಿ ಮುಳುಗುವುದು ಸರಿಯಲ್ಲ. ನೆಲ ಸಂವೇದನೆ ಕಾಪಾಡಿಕೊಂಡು ಪಾಶ್ಚಿಮಾತ್ಯಕ್ಕೆ ಪರ್ಯಾಯ ಸಾಹಿತ್ಯ ರಚಿಸುವಲ್ಲಿ ಯಶಸ್ವಿ ಕಾಣಬೇಕು ಎಂದು ಅಭಿಪ್ರಾಯಪಟ್ಟರು.

ಗುಜರಾತಿ ಭಾಷೆಯ ಹಿರಿಯ ಕವಿ ಸೀತಾಂಶು ಯಶಸ್ಚಂದ್ರ ಮಾತನಾಡಿ, ಭೂಮಿ ಒಂದು ಭೋಗದ ವಸ್ತುವಲ್ಲ. ಅದಕ್ಕೆ ತನ್ನದೇ ಆದ ಅಸ್ತಿತ್ವವಿದೆ. ತಾಯಿ ಮತ್ತು ಮಾತೃ ಭೂಮಿ ಸ್ವರ್ಗಕ್ಕೆ ಸಮಾನವಾದದ್ದು ಎಂದರು.

ರಾಜರ ಆಳ್ವಿಕೆಯಲ್ಲಿ ಭೂಮಿಯನ್ನು ಒಂದು ಭೋಗದ ವಸ್ತುವಿನ ರೀತಿಯಲ್ಲಿ ನೋಡಲಾಗುತ್ತಿತ್ತು. ಭೂಪತಿ, ಭೂಮಿಯ ಒಡೆಯ ಎಂದು ಅಹಂಕಾರದಿಂದ ಜಂಭಪಟ್ಟುಕೊಳ್ಳುತ್ತಿದ್ದ ರಾಜರನ್ನು ವಿಮರ್ಶಕರು ತಾಯಿಗಂಡರು ಎಂಬ ಕಾರವಾದ ಪದ ಬಳಕೆಯಿಂದ ಕರೆದಿದ್ದಾರೆ ಎಂದು ನುಡಿದರು.

ರಾಜರ ಪ್ರಭುತ್ವ ಕೊನೆಗೊಳ್ಳುತ್ತಿದ್ದಂತೆ ಭೂಮಿ ಎಂಬ ಪದಕ್ಕೆ ವಿಶಾಲವಾದ ಅರ್ಥ ಬಂದಿತು. ರೈತನನ್ನು ಭೂಮಿ ತಾಯಿಯ ಚೊಚ್ಚಲ ಮಗ, ಮಣ್ಣಿನ ಮಗ ಎಂದೆಲ್ಲ ಕರೆಯಲಾಯಿತು. ಭೂಮಿಯನ್ನು ಪೂಜನೀಯ ಭಾವನೆಯಿಂದ ಕಾಣಲಾಯಿತು. ಜನಪದ ಸಾಹಿತ್ಯದಲ್ಲೂ ಭೂಮಿ ತಾಯಿಯೇ ಮೂಲ ದೇವತೆ ಎಂದು ಹೇಳಿದರು.

ತಾಯಿ ಎಂದರೆ ಮಹತ್ವವಾದ ಸಂಬಂಧ, ಅಮ್ಮ ಎನ್ನುವ ಪದಕ್ಕೆ ಎಲ್ಲಾ ಭಾಷಾ ಸಾಹಿತ್ಯದಲ್ಲೂ ಗಂಭೀರವಾದ ಚಿಂತನೆ ನಡೆಸಲಾಗಿದೆ. ಹಲವು ಕಾವ್ಯಗಳಲ್ಲಿ ತಾಯಿಯನ್ನು ಕಂಡುಕೊಂಡಿದ್ದಾರೆ, ಮೊದಲನೆಯವರಾಗಿ ಭೂಮಿ ತಾಯಿ, ವಿಶ್ವಮಾತೆ, ಭಾರತ ಮಾತೆ, ಮಾತೃಭಾಷೆ ಹಾಗೂ ಜನ್ಮ ನೀಡಿದ ತಾಯಿ ಎಂಬ ವಿಶಾಲವಾದ ಆರ್ಥ ನೀಡಿದ್ದಾರೆ ಎಂದು ಅಭಿಪ್ರಾಯಿಸಿದರು.

ಕಾವೋತ್ಸವದಲ್ಲಿ ಸಾಹಿತ್ಯ ಅಕಾಡೆಮಿ ಕಾರ್ಯದರ್ಶಿ ಕೆ.ಶ್ರೀನಿವಾಸರಾವ್, ಪ್ರಾದೇಶಿಕ ಕಾರ್ಯದರ್ಶಿ ಎಸ್.ಪಿ.ಮಹಾಲಿಂಗೇಶ್ವರ ಭಟ್, ಹಿರಿಯ ಸಾಹಿತಿ ಡಾ.ಸಿದ್ದಲಿಂಗಯ್ಯ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News