ನೀರವ್ ಮೋದಿ ಬಂಧನದ ಸುತ್ತ

Update: 2019-03-21 18:32 GMT

ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಂತೆ ಕೇಂದ್ರದ ನರೇಂದ್ರ ಮೋದಿ ಸರಕಾರ ತಾನು ಸಾಚಾ ಎಂದು ತೋರಿಸಿಕೊಳ್ಳಲು ನಾನಾ ಕಸರತ್ತುಗಳನ್ನು, ಮಸಲತ್ತುಗಳನ್ನು ನಡೆಸಿದೆ. ರಾಷ್ಟ್ರ ಭಕ್ತಿಯನ್ನು ಚುನಾವಣಾ ರಾಜಕಾರಣಕ್ಕೆ ಬಳಸಿಕೊಳ್ಳಲು ಹಿಂಜರಿಯದ ಈ ಸರಕಾರ ರಾಷ್ಟ್ರೀಕೃತ ಬ್ಯಾಂಕುಗಳಿಗೆ ವಂಚನೆ ಮಾಡಿ ವಿದೇಶಕ್ಕೆ ಪಲಾಯನ ಮಾಡಿದ ಉದ್ಯಮಪತಿಗಳ ಬಂಧನದ ಶ್ರೇಯಸ್ಸಿನ ಕಿರೀಟವನ್ನು ಧರಿಸಲು ಸಜ್ಜಾಗಿ ನಿಂತಿದೆ.

ಭಾರತದ ರಾಷ್ಟ್ರೀಕೃತ ಬ್ಯಾಂಕುಗಳಿಗೆ 9,000 ಸಾವಿರ ಕೋಟಿ ರೂಪಾಯಿ ವಂಚನೆ ಮಾಡಿದ ವಿಜಯ ಮಲ್ಯ ಲಂಡನ್‌ನಲ್ಲಿ ಸಿಕ್ಕಿ ಬಿದ್ದರು. ಗುಜರಾತಿನ ವಜ್ರದ ವ್ಯಾಪಾರಿ ನೀರವ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13,500 ಕೋಟಿ ರೂಪಾಯಿ ವಂಚನೆ ಮಾಡಿ ಓಡಿ ಹೋದರು. ಇವರಿಗಿಂತ ಮುಂಚೆ ಇನ್ನೊಬ್ಬ ಉದ್ಯಮಿ ಮಿತ್ತಲ್ ಪರಾರಿಯಾಗಿದ್ದರು. ಇವರೆಲ್ಲ ಸರಕಾರದ ಕಣ್ಣು ತಪ್ಪಿಸಿ ಹೋಗಿದ್ದರೆಂದು ಹೇಳಿದರೆ ನಂಬಲು ಸಾಧ್ಯವಿಲ್ಲ. ಒಂದು ಊರಿನಿಂದ ಇನ್ನೊಂದು ಊರಿಗೆ ಸರಕಾರದ ಕಣ್ಣು ತಪ್ಪಿಸಿ ಹೋಗುವುದು ಸುಲಭವಲ್ಲದ ಈ ದಿನಗಳಲ್ಲಿ ದೇಶದಿಂದ ಇನ್ನೊಂದು ದೇಶಕ್ಕೆ ಪಾಸ್‌ಪೋರ್ಟ್, ವೀಸಾ, ಕಸ್ಟಮ್ಸ್ ಸಿಬ್ಬಂದಿ ಇವರೆಲ್ಲರ ಕಣ್ಣು ತಪ್ಪಿಸಿ ಹೋಗುವುದು ಅಷ್ಟು ಸುಲಭವಲ್ಲ. ಅಧಿಕಾರದಲ್ಲಿದ್ದವರ ಹಸಿರು ನಿಶಾನೆಯಿಂದಲೇ ಇಂತಹ ಪಲಾಯನ ಮಾಡಲು ಸಾಧ್ಯವಾಗುತ್ತದೆ. ಈ ಬ್ಯಾಂಕ್ ವಂಚನೆಯಲ್ಲಿ ಹಿಂದಿನ ಮತ್ತು ಇಂದಿನ ಸರಕಾರಗಳ ಕೈವಾಡವಿದೆ ಎಂಬ ಸಂದೇಹಕ್ಕೆ ಪುರಾವೆಗಳಿವೆ.

ರಾಷ್ಟ್ರೀಕೃತ ಬ್ಯಾಂಕುಗಳ ಇಂದಿನ ದುರವಸ್ಥೆಗೆ ಮಲ್ಯ, ನೀರವ್ ಮೋದಿಯಂತಹ ಉದ್ಯಮಪತಿಗಳ ಕೊಡುಗೆ ಸಾಕಷ್ಟಿದೆ. ಕಾರ್ಪೊರೇಟ್ ಬಂಡವಾಳಶಾಹಿಗಳು ಪಡೆದ ಸುಸ್ತಿ ಸಾಲವೆಂಬ ಸಮಸ್ಯೆಯ ಸುಳಿಗೆ ಸಿಲುಕಿ ಬ್ಯಾಂಕುಗಳು ದಿವಾಳಿಯ ಅಂಚಿಗೆ ಬಂದು ನಿಂತಿವೆ. ಮೋದಿ ಸರಕಾವು ಉದ್ಯಮಿಗಳ ಬ್ಯಾಂಕ್ ಸಾಲ ಸುಮಾರು ಮೂರು ಲಕ್ಷ ಕೋಟಿ ರೂಪಾಯಿಯನ್ನು ಮನ್ನಾ ಮಾಡಿದೆ. ಇನ್ನು ಬ್ಯಾಂಕುಗಳಿಗೆ ಪಂಗನಾಮ ಹಾಕಿ ವಿದೇಶಕ್ಕೆ ಓಡಿ ಹೋದವರ ಸಂಖ್ಯೆ ಸಾಕಷ್ಟಿದೆ. ಈಗ ನೀರವ್ ಮೋದಿಯನ್ನು ಇಂಗ್ಲೆಂಡ್‌ನ ಸ್ಕಾಟ್‌ಲೆಂಡ್ ಯಾರ್ಡ್ ಪೊಲೀಸರು ಬಂಧಿಸಿದ್ದರೂ ಆತನನ್ನು ಭಾರತದ ವಶಕ್ಕೆ ಪಡೆಯುವುದು ಸುಲಭವಲ್ಲ. ಬ್ರಿಟನ್‌ನಲ್ಲಿರುವ ಮಲ್ಯರನ್ನು ಭಾರತಕ್ಕೆ ಗಡಿಪಾರು ಮಾಡಿಸಿಕೊಳ್ಳಲು ಭಾರತ ಸರಕಾರ ಇನ್ನೂ ಪರದಾಡುತ್ತಿದೆ. ಮಲ್ಯ ಲಂಡನ್ ಪ್ರಜೆಯೂ ಆಗಿರುವುದರಿಂದ ವಿಳಂಬವಾಗಿರುವುದು ಸಹಜ. ಆದರೂ ಮಲ್ಯರಿಗೆ ಸಂಬಂಧಿಸಿದ ಕಾನೂನು ಪ್ರಕ್ರಿಯೆಗಳು ಮುಗಿದಿಲ್ಲ. ಇನ್ನು ನೀರವ್ ಮೋದಿ ಗೋಲ್ಡನ್ ವೀಸಾದಡಿಯಲ್ಲಿ ಐದು ವರ್ಷಗಳ ಕಾಲ ಲಂಡನ್ ನಲ್ಲಿ ಉಳಿಯಲು ಅನುಮತಿ ಪಡೆದಿದ್ದಾರೆ. ಹೀಗಾಗಿ ನೀರವ್ ಮೋದಿಯನ್ನು ವಶಕ್ಕೆ ಪಡೆಯಲು ಭಾರತದ ವಿದೇಶಾಂಗ ಇಲಾಖೆ ಹರ ಸಾಹಸ ಮಾಡಬೇಕಾಗಿದೆ.

ನೀರವ್ ಮೋದಿ ಮಾತ್ರವಲ್ಲ, ಆತನ ಚಿಕ್ಕಪ್ಪಮೆಹುಲ್ ಚೋಕ್ಸಿ ಕೂಡ ಭಾರತಕ್ಕೆ ಬೇಕಾಗಿದ್ದಾರೆ. ಆತ ಎಲ್ಲಿದ್ದಾರೆ ಎಂಬುದು ಪತ್ತೆ ಇಲ್ಲ. ಅವರನ್ನು ಪತ್ತೆ ಹಚ್ಚಿ ಹಿಡಿಯುವ ಕಾರ್ಯಾಚರಣೆಯನ್ನು ಭಾರತ ತೀವ್ರಗೊಳಿಸಬೇಕಾಗಿದೆ.

ಕಳೆದ ನಾಲ್ಕೂವರೆ ವರ್ಷಗಳ ಮೋದಿ ನಾಯಕತ್ವದ ಸಂಘ ಪರಿವಾರ ನಿಯಂತ್ರಿತ ಬಿಜೆಪಿ ಆಡಳಿತದಲ್ಲಿ ದೇಶ ಆರ್ಥಿಕವಾಗಿ ದಿವಾಳಿಯ ಅಂಚಿಗೆ ಬಂದು ನಿಂತಿದೆ. ಸುಳ್ಳು ಅಂಕಿ ಸಂಖ್ಯೆಗಳನ್ನು ನೀಡುವ ಮೂಲಕ ಭಾರತದ ಆರ್ಥಿಕತೆ ಸುಭದ್ರವಾಗಿದೆ ಎಂದು ಮೋದಿ ಸರಕಾರ ಎಷ್ಟೇ ಹೇಳಿದರೂ ವಾಸ್ತವ ಸಂಗತಿ ಭಿನ್ನವಾಗಿದೆ. ರಿಸರ್ವ್ ಬ್ಯಾಂಕಿಗೆ ಗೊತ್ತಿಲ್ಲದೆ ಮಾಡಿದ ನೋಟು ಅಮಾನ್ಯೀಕರಣದ ಬಳಿಕ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ.

ರಫೇಲ್ ಯುದ್ಧ ವಿಮಾನ ಖರೀದಿ ಹಗರಣದಲ್ಲಿ ಮೋದಿ ಸರಕಾರದ ನಡೆ ಸಂದೇಹಾಸ್ಪದವಾಗಿದೆ. ಮೋದಿ ಸರಕಾರದ ತಪ್ಪಿಲ್ಲ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದರೂ ‘ಹಿಂದೂ’ ಪತ್ರಿಕೆ ಸಾಕ್ಷ್ಯಾಧಾರಗಳ ಸಹಿತ ವರದಿ ಪ್ರಕಟಿಸಿದಾಗ ಸರಕಾರ ದಿಗಿಲುಗೊಂಡಿತು. ರಕ್ಷಣಾ ಇಲಾಖೆಯ ರಹಸ್ಯ ದಾಖಲೆಗಳು ಕಳ್ಳತನವಾಗಿವೆ ಎಂದು ಅಟಾರ್ನಿ ಜನರಲ್ ಹೇಳಿ ಅಪಹಾಸ್ಯಕ್ಕೀಡಾದರು. ಕೊನೆಗೆ ಬಿದ್ದರೂ ಮೀಸೆಗೆ ಮಣ್ಣು ಹತ್ತ ಬಾರದೆಂಬಂತೆ ರಕ್ಷಣಾ ಇಲಾಖೆಯ ರಹಸ್ಯ ದಾಖಲೆಗಳನ್ನು ಜೆರಾಕ್ಸ್ ಮಾಡಿಕೊಳ್ಳಲಾಗಿದೆ ಎಂದು ಇನ್ನೊಂದು ಹೇಳಿಕೆ ನೀಡಿದರು.

ಜನತೆಗೆ ನೀಡಿದ ಯಾವ ಭರವಸೆಗಳನ್ನೂ ಮೋದಿ ಸರಕಾರ ಈಡೇರಿಸಲಿಲ್ಲ, ಹಣದುಬ್ಬರ, ಬೆಲೆ ಏರಿಕೆ ಕಡಿಮೆಯಾಗಲಿಲ್ಲ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆಯೂ ಈಡೇರಲಿಲ್ಲ. ತನ್ನ ಈ ವೈಫಲ್ಯಗಳನ್ನು ಮುಚ್ಚಿಕೊಳ್ಳುವ ಸಲುವಾಗಿ ಮೋದಿ ಸರಕಾರ ಲಂಡನ್‌ನಲ್ಲಿ ನಡೆದ ನೀರವ್ ಮೋದಿ ಬಂಧನ ಪ್ರಕರಣವನ್ನು ಬಳಸಿಕೊಳ್ಳಲು ಹೊರಟಿದೆ.

ಕಳೆದ ನಾಲ್ಕೂವರೆ ವರ್ಷಗಳಲ್ಲಿ ಮೋದಿ ಎಂದೂ ಸಂಸತ್ತನ್ನು ನೇರವಾಗಿ ಎದುರಿಸಲಿಲ್ಲ. ಒಂದೇ ಒಂದು ಪತ್ರಿಕಾಗೋಷ್ಠಿಯನ್ನೂ ನಡೆಸಲಿಲ್ಲ, ಈಗ ಒಮ್ಮೆಲೇ ‘ಮೈ ಬಿ ಚೌಕಿದಾರ’ ಎಂಬ ಪ್ರಹಸನ ನಡೆಸಿದ್ದಾರೆ. ಮತ್ತೆ ಚುನಾವಣೆಯಲ್ಲಿ ಗೆದ್ದು ಬರಲು ನಾನಾ ಸರ್ಕಸ್ ಮಾಡುತ್ತಿದ್ದಾರೆ. ಈ ನೀರವ್ ಮೋದಿ, ಮಲ್ಯ ಬಂಧನವೂ ಇಂತಹ ಕಸರತ್ತುಗಳಲ್ಲಿ ಒಂದು.

ಒಂದೆಡೆ ಇಂತಹ ಕಸರತ್ತುಗಳನ್ನು ಮಾಡುತ್ತಲೇ ಇನ್ನೊಂದೆಡೆ ಆರೆಸ್ಸೆಸ್ ಅಜೆಂಡಾ ಜಾರಿಗೂ ಯತ್ನಿಸಲಾಗುತ್ತದೆ. ಸಂಜೋತಾ ರೈಲು ಸ್ಫೋಟ ಪ್ರಕರಣದಲ್ಲಿ ಹಿಂದೆ ತಪ್ಪೊಪ್ಪಿಗೆ ಮಾಡಿಕೊಂಡಿದ್ದ ಸ್ವಾಮಿ ಅಸೀಮಾನಂದರನ್ನು ದೋಷಮುಕ್ತರನ್ನಾಗಿ ಮಾಡಿರುವುದು ಅನೇಕ ಸಂದೇಹಗಳಿಗೆ ಕಾರಣವಾಗಿದೆ.

ಹೀಗೆ ತಪ್ಪುಗಳನ್ನು ಸರಣಿಯೋಪಾದಿಯಲ್ಲಿ ಮಾಡುತ್ತ ಬಂದ ಮೋದಿ ಸರಕಾರ ಸಿಬಿಐ, ಆರ್‌ಬಿಐನಂತಹ ಸಾಂವಿಧಾನಿಕ ಸಂಸ್ಥೆಗಳನ್ನು ನಿಷ್ಕ್ರಿಯಗೊಳಿಸುತ್ತ ಬಂದುದು ಅನೇಕರ ಆಕ್ರೋಶಕ್ಕೆ ಕಾರಣವಾಗಿದೆ

ಲಂಡನ್‌ನಲ್ಲಿ ಬಂಧನಕ್ಕೊಳಗಾದ ನೀರವ್ ಮೋದಿಯನ್ನು ಭಾರತಕ್ಕೆ ತರಲು ಕೆಲವು ಕಾನೂನಾತ್ಮಕ ಅಡ್ಡಿ ಆತಂಕಗಳಿವೆ. ಅವುಗಳನ್ನು ನಿವಾರಿಸಿ ಕರೆತರುವುದು ಸುಲಭವಲ್ಲ. ಆದರೆ ಇದನ್ನು ಬಿಜೆಪಿ ಕಾರ್ಯಕರ್ತರು ಚುನಾವಣಾ ಉದ್ದೇಶಕ್ಕೆ ಬಳಸಿಕೊಳ್ಳಲು ಅವಕಾಶ ನೀಡಬಾರದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News