ಭಾರತಕ್ಕೆ 350ಕ್ಕೂ ಅಧಿಕ ಪದಕಗಳ ಗೊಂಚಲು

Update: 2019-03-21 19:01 GMT

ಹೊಸದಿಲ್ಲಿ, ಮಾ.21: ಇಡೀ ದೇಶ ಚುನಾವಣೆಯ ಗುಂಗಿನಲ್ಲಿರುವ ಹೊತ್ತಲ್ಲಿ ಯುಎಇಯ ಅಬುಧಾಬಿಯಲ್ಲಿ ನಡೆದ ವಿಶೇಷ ಒಲಿಂಪಿಕ್ಸ್ ವಿಶ್ವ ಬೇಸಿಗೆ ಕ್ರೀಡಾಕೂಟದಲ್ಲಿ ಭಾರತ ಗರಿಷ್ಠ ಪ್ರಮಾಣದ ಪದಕಗಳನ್ನು ಗೆದ್ದು ಸ್ವದೇಶಕ್ಕೆ ಮರಳಿದೆ. ಮಾ.14-21ರ ಅವಧಿಯಲ್ಲಿ ನಡೆದ ಈ ಕ್ರೀಡಾಕೂಟದಲ್ಲಿ ಭಾರತ 85 ಚಿನ್ನ ಸಹಿತ ಒಟ್ಟು 368 ಪದಕಗಳ ಬೇಟೆಯಾಡಿದೆ.

ಪ್ರತಿಷ್ಠಿತ ಟೂರ್ನಿಯಲ್ಲಿ 284 ಅಥ್ಲೀಟ್‌ಗಳನ್ನು ಹೊಂದಿದ್ದ ಭಾರತ ತಂಡ 154 ಬೆಳ್ಳಿ ಹಾಗೂ 129 ಕಂಚಿನ ಪದಕಗಳನ್ನು ತನ್ನದಾಗಿಸಿಕೊಂಡು ಕ್ರೀಡಾಕೂಟಕ್ಕೆ ಯಶಸ್ವಿಯಾಗಿ ತೆರೆ ಎಳೆದಿದೆ. ಈ ಪದಕಗಳಲ್ಲಿ ಭಾರತದ ಪವರ್‌ಲಿಫ್ಟರ್‌ಗಳದ್ದು ಸಿಂಹಪಾಲು. ಅವರು 20 ಬಂಗಾರ, 33 ಬೆಳ್ಳಿ ಹಾಗೂ 43 ಕಂಚಿನ ಪದಕಗಳ ಒಡೆಯರಾಗಿದ್ದಾರೆ. ರೋಲರ್ ಸ್ಕೇಟಿಂಗ್‌ನಲ್ಲಿ ಭಾರತ 49 ಪದಕಗಳನ್ನು ಪಡೆದಿದ್ದು 13 ಬಂಗಾರ, 20 ಬೆಳ್ಳಿ ಹಾಗೂ 16 ಕಂಚಿನ ಪದಕಗಳನ್ನು ಒಳಗೊಂಡಿದೆ.

ಸೈಕ್ಲಿಂಗ್‌ನಲ್ಲಿ ಭಾರತಕ್ಕೆ 11 ಸ್ವರ್ಣ, 14 ರಜತ ಹಾಗೂ 20 ಕಂಚು ಸಹಿತ 45 ಪದಕಗಳು ಬಂದಿವೆ. ಇನ್ನು ದೇಶದ ಟ್ರಾಕ್ ಆ್ಯಂಡ್ ಫೀಲ್ಡ್ ವಿಭಾಗದ ಅಥ್ಲೀಟ್‌ಗಳು 39 ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಅದರಲ್ಲಿ 5 ಬಂಗಾರ, 24 ಬೆಳ್ಳಿ ಹಾಗೂ 10 ಕಂಚಿನ ಪದಕಗಳಿವೆ.

ಭಾರತ 9ನೇ ಬಾರಿ ವಿಶೇಷ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದೆ. ಸ್ಪೆಷಲ್ ಒಲಿಂಪಿಕ್ಸ್ ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುತ್ತದೆ. ಎಲ್ಲ ಅಥ್ಲೀಟ್‌ಗಳನ್ನು ಸಮಾನವಾಗಿ ಕಾಣುವ ದೃಷ್ಟಿಯಿಂದ ವಿಶೇಷ ಒಲಿಂಪಿಕ್ಸ್ ಸ್ಪರ್ಧೆಯನ್ನು ಆರಂಭಿಸಲಾಗಿದ್ದು, ಈ ಸ್ಪರ್ಧೆಯು ದೈಹಿಕ ಮಾತ್ರವಲ್ಲ ಬೌದ್ದಿಕ ಅಸಾಮರ್ಥ್ಯದಿಂದ ಬಳಲುತ್ತಿರುವವರಿಗೂ ಯಾವುದೇ ಕ್ರೀಡೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News