ಫ್ರೆಂಚ್ ಓಪನ್ ಪ್ರಶಸ್ತಿ ನಗದು ಹೆಚ್ಚಳ

Update: 2019-03-22 03:32 GMT

ಪ್ಯಾರಿಸ್, ಮಾ.21: ಫ್ರೆಂಚ್ ಓಪನ್ ಟೆನಿಸ್ ಸಂಘಟಕರು 2019ರ ಟೂರ್ನಿಗೆ ಗುರುವಾರ ಬಹುಮಾನದ ನಗದು ಮೊತ್ತವನ್ನು ಶೇ.8ರಷ್ಟು ಏರಿಕೆ ಮಾಡಿದ್ದಾರೆ. ಇದರೊಂದಿಗೆ ಪುರುಷರ ಹಾಗೂ ಮಹಿಳಾ ಸಿಂಗಲ್ಸ್ ನಲ್ಲಿ ಪ್ರಶಸ್ತಿ ವಿಜೇತರು 2.3 ಮಿಲಿಯನ್ ಯುರೋಸ್‌ನ್ನು (ಅಂದಾಜು 18 ಕೋಟಿ ರೂ.) ತಮ್ಮ ಜೇಬಿಗಿಳಿಸಲಿದ್ದಾರೆ.

ಅದಾಗ್ಯೂ ಫ್ರೆಂಚ್ ಓಪನ್ ಟೂರ್ನಿಯ ನಗದು ಬಹುಮಾನವು ಯುಎಸ್ ಓಪನ್ ಚಾಂಪಿಯನ್‌ಶಿಪ್‌ಗಿಂತ (3.8 ಮಿಲಿಯನ್ ಡಾಲರ್) ಕಡಿಮೆಯಾಗಿದೆ. ಆದರೆ ಚಾಂಪಿಯನ್ಸ್ ಹಾಗೂ ಮೊದಲ ವಾರದಲ್ಲೇ ಹೊರ ನಡೆಯುವ ಆಟಗಾರರ ಬಹುಮಾನ ಮೊತ್ತದ ನಡುವಿನ ಅಂತರವನ್ನು ಕಡಿಮೆಗೊಳಿಸಲು ಬಯಸಿರುವುದಾಗಿ ಫ್ರೆಂಚ್ ಓಪನ್ ಟೂರ್ನಿಯ ನಿರ್ದೇಶಕ ಗಾಯ್ ಫಾರ್ಗೆಟ್ ಹೇಳಿದ್ದಾರೆ. ಪ್ರಥಮ ಸುತ್ತಿನಲ್ಲಿ ಸೋತ ಆಟಗಾರರಿಗೆ ದೊರೆಯುವ ಮೊತ್ತದಲ್ಲಿ ಶೇ.15ರಷ್ಟು ಏರಿಕೆ ಮಾಡಲಾಗಿದ್ದು ಅವರು 46,000 ಯುರೋ ಪಡೆಯಲಿದ್ದಾರೆ.

ಪ್ರಧಾನ ಸುತ್ತಿಗೆ ಪ್ರವೇಶಿಸುವ ಮೊದಲು ಅರ್ಹತಾ ಸುತ್ತಿನ ಕೊನೆಯ ಪಂದ್ಯದಲ್ಲಿ ಸೋಲನುಭವಿಸುವ ಆಟಗಾರರ ನಗದು ಬಹುಮಾನದಲ್ಲೂ ಗಮನಾರ್ಹ ಏರಿಕೆ ಮಾಡಿದ್ದು ಅವರು 24,000 ಯುರೋ ಮೊತ್ತವನ್ನು ಜೇಬಿಗಿಳಿಸಲಿದ್ದಾರೆ.

ಈ ವರ್ಷದ ಫ್ರೆಂಚ್ ಓಪನ್ ಟೂರ್ನಿಯು ಮೇ 26ರಿಂದ ಆರಂಭವಾಗಲಿದ್ದು ಜೂ.9ರಂದು ಪುರುಷರ ಫೈನಲ್ ಪಂದ್ಯ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News