ಪ್ರಯತ್ನ ಪುನಾರಂಭಿಸಿದ ದಕ್ಷಿಣ ಅಮೆರಿಕ ಒಕ್ಕೂಟ

Update: 2019-03-22 03:34 GMT

ಬ್ಯೂನಸ್ ಐರಿಸ್, ಮಾ.21: 2030ರ ಫುಟ್ಬಾಲ್ ವಿಶ್ವಕಪ್ ಆತಿಥ್ಯ ವಹಿಸುವ ವಿಶ್ವಾಸ ಹೊಂದಿರುವ ದಕ್ಷಿಣ ಅಮೆರಿಕ ಒಕ್ಕೂಟ ಬುಧವಾರ ತನ್ನ ಪ್ರಯತ್ನವನ್ನು ಮುಂದುವರಿಸಿದೆ. ಈಗ ಚಿಲಿಯನ್ನು ತನ್ನ ಒಕ್ಕೂಟಕ್ಕೆ ಅದು ಸೇರಿಸಿಕೊಂಡಿದೆ.

ಈ ಕುರಿತು ಬ್ಯೂನಸ್ ಐರಿಸ್‌ನಲ್ಲಿ ಅರ್ಜೆಂಟೀನ, ಉರುಗ್ವೆ ಹಾಗೂ ಪರಾಗ್ವೆ ದೇಶಗಳ ಅಧ್ಯಕ್ಷರೊಂದಿಗೆ ನಡೆದ ಸಭೆಯಲ್ಲಿ ದ. ಅಮೆರಿಕ ಫುಟ್ಬಾಲ್ ಮಂಡಳಿಯ (ಸಿಒಎನ್‌ಎಮ್‌ಇಬಿಒಎಲ್)ಅಧ್ಯಕ್ಷ ಅಲೆಜಾಂಡ್ರೊ ಡೊಮಿಂಗ್ವೆಝ್ ಈ ವಿಷಯವನ್ನು ಪ್ರಕಟಿಸಿದರು.

ಅರ್ಜೆಂಟೀನ ಅಧ್ಯಕ್ಷ ಮಾರಿಷಿಯೊ ಮರ್ಸಿ ಮಾತನಾಡಿ ‘‘ದಕ್ಷಿಣ ಅಮೆರಿಕದ ಪ್ರಯತ್ನಕ್ಕೆ ಪ್ರಬಲ ಸ್ಪರ್ಧಿಗಳು ಎದುರಾಗಿದ್ದಾರೆ. ಹಾಗಾಗಿ ಈ ಕೆಲಸವನ್ನು ಆದಷ್ಟು ಬೇಗ ಮುಗಿಸುವುದು ಅಗತ್ಯವಾಗಿದೆ’’ ಎಂದು ಹೇಳಿದ್ದಾರೆ.

ಅರ್ಜೆಂಟೀನ-ಉರುಗ್ವೆ-ಪರಾಗ್ವೆಯ ಆತಿಥ್ಯದ ಬಿಡ್‌ನ್ನು ಅಕ್ಟೋಬರ್ 2017ರಲ್ಲಿ ಬ್ಯೂನಸ್ ಐರಿಸ್‌ಗೆ ತೆರಳಿದ್ದ ವೇಳೆ ಫಿಫಾ ಅಧ್ಯಕ್ಷ ಗಿಯಾನಿ ಇನ್ಫಾಂಟಿನೊ ಖಚಿತಪಡಿಸಿದ್ದರು. ಆದರೆ ಅರ್ಜೆಂಟೀನದಲ್ಲಿ ಆರ್ಥಿಕ ಸಮಸ್ಯೆ ಎದುರಾದ ಕಾರಣ ಈ ಬಿಡ್ ಮಹತ್ವ ಕಳೆದುಕೊಂಡಿತ್ತು.

ತಮ್ಮ ಬಿಡ್ ಯಶಸ್ಸು ಕಂಡರೆ ಉದ್ಘಾಟನಾ ಪಂದ್ಯ ಹಾಗೂ ಫೈನಲ್ ಪಂದ್ಯಗಳನ್ನು ಭಿನ್ನ ಸ್ಥಳಗಳಲ್ಲಿ ಆಡಿಸಲು ಹಾಗೂ ಈ ಪಂದ್ಯಗಳನ್ನು ಆಡಿಸಲಾಗದ ದೇಶಗಳು ಎರಡು ಸೆಮಿಫೈನಲ್ ಪಂದ್ಯಗಳ ಆತಿಥ್ಯ ವಹಿಸಲು ಎಂದು ದಕ್ಷಿಣ ಅಮೆರಿಕ ಒಕ್ಕೂಟದ ಅಧ್ಯಕ್ಷರುಗಳು ಒಪ್ಪಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News