ಇರಾಕ್: ವಿಹಾರ ನೌಕೆ ಮುಳುಗಿ ಸುಮಾರು 100 ಮಂದಿ ಮೃತ್ಯು

Update: 2019-03-22 04:06 GMT

ಬಾಗ್ದಾದ್, ಮಾ. 22: ಖುರ್ದಿಷ್ ಹೊಸ ವರ್ಷದ ಸಂಭ್ರಮಾಚಣೆಗೆ ತೆರಳುತ್ತಿದ್ದ ವಿಹಾರಿ ನೌಕೆಯೊಂದು ನದಿಯಲ್ಲಿ ಮುಳುಗಿದ ಪರಿಣಾಮ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸುಮಾರು 100 ಮಂದಿ ಜಲಸಮಾಧಿಯಾಗಿದ್ದಾರೆ. 

ಹಿಂದೆ ಉಗ್ರಗಾಮಿಗಳ ಬಿಗಿಹಿಡಿತದಲ್ಲಿದ್ದ ಮೊಸುಲ್ ಪಟ್ಟಣದಲ್ಲಿ ಈ ದುರಂತ ಸಂಭವಿಸಿದ್ದು, ಇತ್ತೀಚಿನ ವರ್ಷಗಳಲ್ಲಿ ನಡೆದ ಅತಿದೊಡ್ಡ ದುರಂತ ಇದಾಗಿದೆ.

ಈ ನತದೃಷ್ಟ ದೋಣಿಯಲ್ಲಿ ಮಹಿಳೆಯರು ಮತ್ತು ಮಕ್ಕಳನ್ನು ಕೂಡಿಕೊಂಡು ಹಲವು ಕುಟುಂಬಗಳು ಸಂಭ್ರಮಾಚರಣೆಗೆ ತೆರಳುತ್ತಿದ್ದವು. ಈ ನಗರವನ್ನು ಐಸಿಸ್ ಉಗ್ರರ ಹಿಡಿತದಿಂದ ಮುಕ್ತಗೊಳಿಸಿದ ಬಳಿಕ ನಾಗರಿಕರು ಇದೇ ಮೊದಲ ಬಾರಿಗೆ ಟೈಗ್ರಿಸ್ ನದಿದಂಡೆಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಹಮ್ಮಿಕೊಂಡಿದ್ದರು.

ದುರಂತ ಸ್ಥಳಕ್ಕೆ ಭೇಟಿ ನೀಡಿದ ಪ್ರಧಾನಿ ಅದೆಲ್ ಅಬ್ದುಲ್ ಮಹದಿ ಮೂರು ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಿಸಿದ್ದಾರೆ. ಟೈಗ್ರಿಸ್ ನದಿಯಾಚೆಗೆ ಇರುವ ಪ್ರಸಿದ್ಧ ವಿಹಾರತಾಣಕ್ಕೆ ನೌರುರ್ (ಖುರ್ದಿಷ್ ಹೊಸ ವರ್ಷ) ಆಚರಣೆಗಾಗಿ ಈ ದೋಣಿಯಲ್ಲಿ ಹಲವು ಮಂದಿ ಕುಟುಂಬದೊಂದಿಗೆ ತೆರಳುತ್ತಿದ್ದರು. ಹೊಸ ವರ್ಷದ ಆರಂಭಕ್ಕೆ ದೇಶಾದ್ಯಂತ ರಜೆ ಇರುತ್ತದೆ.

ಇದುವರೆಗೆ 94 ಮಂದಿ ಮೃತಪಟ್ಟಿದ್ದು, 55 ಮಂದಿಯನ್ನು ರಕ್ಷಿಸಲಾಗಿದೆ ಎಂದು ಇರಾಕ್‌ನ ಒಳಾಡಳಿತ ಸಚಿವಾಲಯ ಪ್ರಕಟಿಸಿದೆ. ಇದರಲ್ಲಿ ಕನಿಷ್ಠ 19 ಮಕ್ಕಳು ಸೇರಿದ್ದಾರೆ ಎಂದು ವಕ್ತಾರ ಸಾದ್ ಮಾನ್ ಹೇಳಿದ್ದಾರೆ. 61 ಮಂದಿ ಮಹಿಳೆಯರು ಮೃತಪಟ್ಟಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಯುದ್ಧ ಮತ್ತು ಉಗ್ರರ ದಾಳಿಯಿಂದ ಸಾವಿರಾರು ಮಂದಿ ಇರಾಕ್‌ನಲ್ಲಿ ಜೀವ ಕಳೆದುಕೊಂಡಿದ್ದರೂ, ಇಂಥ ಭೀಕರ ದುರಂತ ಸಂಭವಿಸಿರುವುದು ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲು. "ಇದು ಯಾರೂ ಊಹಿಸಲೂ ಅಸಾಧ್ಯವಾದ ದುರಂತ" ಎಂದು ಸುರಕ್ಷಿತವಾಗಿ ದಡ ಸೇರಿರುವ ಯುವಕನೊಬ್ಬ ಹೇಳಿದ್ದಾನೆ.

ದೋಣಿಯ ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರನ್ನು ಒಯ್ಯುತ್ತಿದ್ದುದೇ ದುರಂತಕ್ಕೆ ಕಾರಣ ಎಂದು ಮೊಸುಲ್ ಭದ್ರತಾ ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News