ಮೊದಲ ಪಂದ್ಯದಲ್ಲಿ ಚಾಂಪಿಯನ್ ಕ್ರೊಯೇಶಿಯ-ರಶ್ಯ ಮುಖಾಮುಖಿ

Update: 2019-03-22 04:54 GMT

ಮ್ಯಾಡ್ರಿಡ್, ಮಾ.21: ಮೊದಲ ಆವೃತ್ತಿಯ ಡೇವಿಸ್ ಕಪ್ ಫೈನಲ್ಸ್ ನ.18 ರಂದು ಆರಂಭವಾಗಲಿದ್ದು ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕ್ರೊಯೇಶಿಯ ತಂಡ ಮ್ಯಾಡ್ರಿಡ್ ತಂಡವನ್ನು ಎದುರಿಸಲಿದೆ ಎಂದು ಅಂತರ್‌ರಾಷ್ಟ್ರೀಯ ಟೆನಿಸ್ ಒಕ್ಕೂಟ ಗುರುವಾರ ಘೋಷಿಸಿದೆ.

ವರ್ಲ್ಡ್ ಗ್ರೂಪ್ ಬದಲಿಗೆ ನೂತನ ಮಾದರಿಯ ಡೇವಿಸ್ ಕಪ್ ಫೈನಲ್ಸ್‌ನಲ್ಲಿ 18 ತಂಡಗಳು ಭಾಗವಹಿಸಲಿದೆ. 119 ವರ್ಷ ಹಳೆಯ ಟೂರ್ನಮೆಂಟ್‌ನೊಂದಿಗೆ ಬಾರ್ಸಿಲೋನದ ಫುಟ್ಬಾಲ್ ಸ್ಟಾರ್ ಗೆರಾರ್ಡ್ ಪಿಕ್ ಅವರ ಕಾಸ್ಮೊಸ್ ಇನ್‌ವೆಸ್ಟ್‌ಮೆಂಟ್ ಕಂಪೆನಿ 25 ವರ್ಷಗಳ ಒಪ್ಪಂದ ಮಾಡಿಕೊಂಡಿದ್ದು 3 ಬಿಲಿಯನ್ ಡಾಲರ್ ಬಂಡವಾಳ ಹೂಡಿದೆ.

ಟೂರ್ನಿಯಲ್ಲಿ ಭಾಗವಹಿಸಲಿರುವ 18 ರಾಷ್ಟ್ರಗಳನ್ನು ಮೂರು ತಂಡಗಳ ಗುಂಪುಗಳಾಗಿ ವಿಭಜಿಸಲಾಗಿದ್ದು ವಿಜೇತರು ಹಾಗೂ ಇಬ್ಬರು ಬೆಸ್ಟ್ ರನ್ನರ್ಸ್ ಅಪ್ ತಂಡಗಳು ಕ್ವಾರ್ಟರ್ ಫೈನಲ್‌ಗೆ ತಲುಪುತ್ತವೆ.

ಮಾರ್ಟಿನ್ ಸಿಲಿಕ್ ನೇತೃತ್ವದ ಕ್ರೊಯೇಶಿಯ ತಂಡ ಕಳೆದ ವರ್ಷದ ಫೈನಲ್‌ನಲ್ಲಿ ಫ್ರಾನ್ಸ್ ತಂಡವನ್ನು ಸೋಲಿಸಿ ಪ್ರಶಸ್ತಿ ಜಯಿಸಿತ್ತು. ಈ ಬಾರಿ ಸೆಂಟರ್‌ಕೋರ್ಟ್‌ನಲ್ಲಿ ರಶ್ಯದ ವಿರುದ್ದ ಮೊದಲ ಪಂದ್ಯವನ್ನು ಆಡಲಿದೆ. ರಶ್ಯ ಅರ್ಹತಾ ಸುತ್ತಿನ ಮೂಲಕ ಟೂರ್ನಿ ಪ್ರವೇಶಿಸಿದೆ.

ಎರಡು ಸೆಮಿ ಫೈನಲ್ ಪಂದ್ಯಗಳು ನ.23 ರಂದು ಶನಿವಾರ ನಡೆಯಲಿದೆ. ಫೈನಲ್ ಪಂದ್ಯ ನ.24ಕ್ಕೆ ನಿಗದಿಯಾಗಿದೆ. ನಾಲ್ಕು ಸೆಮಿ ಫೈನಲ್ ತಂಡಗಳು 2020ರ ಫೈನಲ್ಸ್‌ಗೆ ಸ್ವಯಂ ಅರ್ಹತೆ ಪಡೆಯುತ್ತವೆ. ಗ್ರೂಪ್‌ಹಂತದಲ್ಲಿ ಕಳಪೆ ಪ್ರದರ್ಶನ ನೀಡುವ ಎರಡು ತಂಡಗಳೂ ವಲಯ ಗ್ರೂಪ್ ಪಂದ್ಯಾವಳಿಯಲ್ಲಿ ಇತರ 12 ತಂಡಗಳೊಂದಿಗೆ ಅರ್ಹತಾ ಪಂದ್ಯ ಆಡುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News