ಐಸಿಸಿ ವಿಶ್ವಕಪ್: ಮತ್ತೆ ಟಿಕೆಟ್ ಮಾರಾಟ ಆರಂಭ

Update: 2019-03-22 04:48 GMT

ಲಂಡನ್, ಮಾ.21: ಮುಂಬರುವ ಮೇ 30ರಿಂದ ಆರಂಭವಾಗಲಿರುವ ಐಸಿಸಿ ವಿಶ್ವಕಪ್‌ಗಾಗಿ ಗುರುವಾರ ಎಲ್ಲ ಸ್ಟೇಡಿಯಂಗಳಲ್ಲಿ ಮತ್ತೊಮ್ಮೆ ಟಿಕೆಟ್ ಮಾರಾಟ ಆರಂಭಿಸಲಾಗಿದ್ದು, ಮೊದಲ ಬಾರಿ ಟಿಕೆಟ್ ಖರೀದಿಸಲು ಸಾಧ್ಯವಾಗದವರಿಗೆ ಮತ್ತೊಂದು ಅವಕಾಶ ಕಲ್ಪಿಸಲಾಗಿದೆ.

 ಅಧಿಕೃತ ಟಿಕೆಟ್ ವೆಬ್‌ಸೈಟ್‌ನಲ್ಲಿ ಮೊದಲು ಬಂದವರಿಗೆ ಮೊದಲ ಆದ್ಯತೆಯ ಆಧಾರದಲ್ಲಿ ಟಿಕೆಟ್‌ಗಳ ಸಾಮಾನ್ಯ ಮಾರಾಟವನ್ನು ಗುರುವಾರ ಆರಂಭಿಸಲಾಗಿದೆ.

 ‘‘ಆರು ಉಪಖಂಡಗಳ 148 ದೇಶಗಳಿಂದ ಅಂದಾಜು 800,000 ಟಿಕೆಟ್‌ಗಳಿಗಾಗಿ 3 ಮಿಲಿಯನ್‌ಗೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿವೆ. ಟಿಕೆಟ್ ಪಡೆಯುವುದರಿಂದ ವಂಚಿತರಾದ ಕ್ರಿಕೆಟ್ ಅಭಿಮಾನಿಗಳಿಗೆೆ ತಕ್ಷಣವೇ ಟಿಕೆಟ್ ಪಡೆಯಲು ಮತ್ತೊಂದು ಅವಕಾಶ ಕಲ್ಪಿಸಲಾಗಿದೆ. ಎಲ್ಲ ತಂಡಗಳ ಹಾಗೂ ಎಲ್ಲ ಸ್ಥಳಗಳ ಟಿಕೆಟ್‌ಗಳು ಲಭ್ಯವಿದ್ದು, ಆತಿಥೇಯ ಇಂಗ್ಲೆಂಡ್, ಭಾರತ, ಪಾಕಿಸ್ತಾನ ಹಾಗೂ ಆಸ್ಟ್ರೇಲಿಯದಂತಹ ದೇಶಗಳ ಪ್ರಸಿದ್ಧ ತಂಡಗಳು ಸ್ಪರ್ಧಿಸುವ ಪಂದ್ಯಗಳ ಟಿಕೆಟ್‌ಗಳ ಸಂಖ್ಯೆ ಕಡಿಮೆಯಿದೆ’’ ಎಂದು ಆಯೋಜಕರು ತಿಳಿಸಿದ್ದಾರೆ.

‘‘ವಿಶ್ವಕಪ್ ಹತ್ತಿರವಾಗುತ್ತಿದೆ. ಮಿಕ್ಕಿರುವ ಹಾಗೂ ವಾಪಸಾಗಿರುವ ಟಿಕೆಟ್‌ಗಳ ಮಾರಾಟ ಮಾಡಲು ನಮಗೆ ಸಂತೋಷವಾಗುತ್ತಿದೆ. ಮೊದಲ ಬಾರಿ ಟಿಕೆಟ್ ವಂಚಿತರಾದ ಕ್ರಿಕೆಟ್ ಅಭಿಮಾನಿಗಳಿಗೆ ಟೂರ್ನಮೆಂಟ್‌ನಲ್ಲಿ ಆಸನ ಪಡೆಯುವ ಅವಕಾಶವಿದೆ. ಎಲ್ಲ ಸ್ಥಳಗಳ ಹಾಗೂ ತಂಡಗಳ ಟಿಕೆಟ್ ಲಭ್ಯವಿದೆ’’ಎಂದು ಐಸಿಸಿ ಕ್ರಿಕೆಟ್ ವಿಶ್ವಕಪ್‌ನ ಆಡಳಿತ ನಿರ್ದೇಶಕ ಸ್ಟೀವ್ ಎಲ್‌ವರ್ದಿ ಹೇಳಿದ್ದಾರೆ.

ತಮಗೆ ಲಭಿಸಿರುವ ಟಿಕೆಟ್‌ಗಳನ್ನು ಮರು ಮಾರಾಟ ಮಾಡಲು ಬಯಸಿರುವ ಕ್ರಿಕೆಟ್ ಅಭಿಮಾನಿಗಳಿಗಾಗಿ ನಾವು ರೀಸೇಲ್ ವೇದಿಕೆಯನ್ನು ಶೀಘ್ರದಲ್ಲೇ ತೆರೆಯಲಿದ್ದೇವೆ. ಅಧಿಕೃತ ಟಿಕೆಟ್ ಮಾರಾಟಗಾರರಿಂದಲೇ ಟಿಕೆಟ್‌ಗಳನ್ನು ಖರೀದಿಸಬೇಕೆಂದು ಎಚ್ಚರಿಕೆ ನೀಡಲಾಗಿದೆ. ಸಿಡಬ್ಲುಸಿ ಅಕ್ರಮ ಟಿಕೆಟ್ ಮರು ಮಾರಾಟ ಚಟುವಟಿಕೆಗಳ ಮೇಲೆ ನಿಗಾ ವಹಿಸಲಿದ್ದು, ಅನಧಿಕೃತ ಮೂರನೇ ಪಾರ್ಟಿ ವೆಬ್‌ಸೈಟ್‌ಗಳಲ್ಲಿ ಮಾರಾಟವಾಗುವ ಟಿಕೆಟ್‌ಗಳನ್ನು ರದ್ದುಪಡಿಸಲು ಕ್ರಮಕೈಗೊಂಡಿದ್ದೇವೆ ಎಂದು ಐಸಿಸಿ ಅಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News