ಭ್ರಷ್ಟಾಚಾರ ಆರೋಪ ಸುಳ್ಳಿನ ಕಂತೆ: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ

Update: 2019-03-22 13:15 GMT

ಬೆಂಗಳೂರು, ಮಾ. 22: ಕಾಂಗ್ರೆಸ್ ಪಕ್ಷ ಮತ್ತು ಅದರ ನಾಯಕರು ವೈಚಾರಿಕವಾಗಿ ದಿವಾಳಿಯಾಗಿದ್ದು, ರಾಜಕೀಯವಾಗಿ ಲಾಭ ಪಡೆಯುವ ಉದ್ದೇಶ ಬಿಟ್ಟರೆ ನನ್ನ ವಿರುದ್ಧದ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ. ಕಾಂಗ್ರೆಸ್ ನಾಯಕರು ಪ್ರಸ್ತಾಪಿಸಿರುವ ವಿಷಯಗಳು ಅಪ್ರಸ್ತುತ ಮತ್ತು ಸುಳ್ಳಿನ ಕಂತೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಕಾಂಗ್ರೆಸ್ ಆರೋಪವನ್ನು ತಳ್ಳಿ ಹಾಕಿದ್ದಾರೆ.

ಕಾಂಗ್ರೆಸ್ ನಾಯಕರು ಸಾರ್ವಜನಿಕವಾಗಿ ಚರ್ಚಿಸಲು ಯಾವುದೇ ಅಭಿವೃದ್ಧಿಪರ ವಿಷಯಗಳಿಲ್ಲ. ಪ್ರಧಾನಿ ಮೋದಿ ಮತ್ತು ಬಿಜೆಪಿ ಜನಪ್ರಿಯತೆ ದಿನ ಕಳೆದಂತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ತೀವ್ರ ಹತಾಶೆಗೊಂಡಿದ್ದಾರೆ ಎಂದು ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.

2019ರ ಚುನಾವಣೆಯಲ್ಲಿ ಸೋಲು ತಮಗೆ ಕಟ್ಟಿಟ್ಟ ಬುತ್ತಿ ಎನ್ನುವುದು ಕಾಂಗ್ರೆಸ್ ನಾಯಕರಿಗೆ ಸ್ಪಷ್ಟವಾಗಿ ಅರಿವಾಗಿದೆ. ಹೀಗಾಗಿ ಚುನಾವಣೆಗೆ ಮೊದಲೇ ಕಾಂಗ್ರೆಸ್ ಮುಖಂಡರು ಸೋಲೊಪ್ಪಿಕೊಂಡಿದ್ದಾರೆ. ಈಗ ಪ್ರಸ್ತಾಪಿಸುವ ಭ್ರಷ್ಟಾಚಾರ ಆರೋಪದ ಕುರಿತು ಈ ಹಿಂದೆಯೆ ವಿಚಾರಣೆ ನಡೆದಿದ್ದು, ಈ ಸಂಬಂಧದ ದಾಖಲೆಗಳೆಲ್ಲವೂ ನಕಲಿ ಎಂಬುದು ಸಾಬೀತಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಹಿಂದೆಯೇ ಆದಾಯ ತೆರಿಗೆ ಇಲಾಖೆಯು ದಾಖಲೆಗಳನ್ನು ಮತ್ತು ನನ್ನ ಕೈಬರಹ ಹಾಗೂ ಸಹಿಯನ್ನು ತಪಾಸಣೆಗೆ ಒಳಪಡಿಸಿದ್ದು, ಅವೆಲ್ಲವೂ ನಕಲಿ ಎನ್ನುವುದು ದೃಢಪಟ್ಟಿದೆ. ಆದರೆ, ಕಾಂಗ್ರೆಸ್ ನಾಯಕರು ಸುಳ್ಳು ಸುದ್ದಿ ಹರಡುವುದರಲ್ಲಿ ನಿಸ್ಸೀಮರು ಎಂದು ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News