ಚಾಂಪಿಯನ್ ಚೆನ್ನೈಗೆ ಆರ್‌ಸಿಬಿ ಮೊದಲ ಎದುರಾಳಿ

Update: 2019-03-22 18:38 GMT

ಚೆನ್ನೈ, ಮಾ.22: ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಶನಿವಾರ ಇಲ್ಲಿನ ಚಿದಂಬರಂ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುವ ಐಪಿಎಲ್ ಟ್ವೆಂಟಿ-20 ಟೂರ್ನಮೆಂಟ್‌ನ ಉದ್ಘಾಟನಾ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ.

ಈ ಮೂಲಕ ದೇಶೀಯ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಕಲರವ ಶನಿವಾರದಿಂದ ದೇಶದಲ್ಲಿ ಎಲ್ಲೆಡೆ ಕೇಳಿಬರಲಿದೆ.

ಸಿಎಸ್‌ಕೆ ತಂಡದಲ್ಲಿ ಹಿರಿಯ ಆಟಗಾರರ ದಂಡೇ ಇದೆ. 37ರ ಹರೆಯದ ಧೋನಿ ಹಾಗೂ ಶೇನ್ ವಾಟ್ಸನ್, 35ರ ಹರೆಯದ ಡ್ವೇಯ್ನ ಬ್ರಾವೊ, 34ರ ಹರೆಯದ ಎಫ್‌ಡು ಪ್ಲೆಸಿಸ್, 33ರ ಹರೆಯದ ಅಂಬಟಿ ರಾಯುಡು ಹಾಗೂ ಕೇದಾರ್ ಜಾಧವ್, 32ರ ಹರೆಯದ ಸುರೇಶ್ ರೈನಾ ಅವರಿದ್ದಾರೆ. ಯುವ ಆಟಗಾರರಿಗೆ ಹೇಳಿಮಾಡಿಸಿರುವ ಟಿ-20 ಕ್ರಿಕೆಟ್‌ನಲ್ಲಿ ಈ ಹಿರಿಯ ಆಟಗಾರರು ತಮ್ಮ ಕೌಶಲ್ಯ ಪ್ರದರ್ಶಿಸಲು ಕಾತರರಾಗಿದ್ದಾರೆ.

ಸಿಎಸ್‌ಕೆ ತಂಡದಲ್ಲಿ 39ರ ಹರೆಯದ ಇಮ್ರಾನ್ ತಾಹಿರ್ ಹಾಗೂ 38ರ ಪ್ರಾಯದ ಹರ್ಭಜನ್ ಸಿಂಗ್ ಹಿರಿಯ ಸ್ಪಿನ್ನರ್‌ಗಳಾಗಿದ್ದಾರೆ. ಈ ಇಬ್ಬರಿಗೂ ಒಂದೇ ಓವರ್‌ನಲ್ಲಿ ಪಂದ್ಯದ ದಿಕ್ಕು ಬದಲಿಸುವ ಸಾಮರ್ಥ್ಯವಿದೆ.

 ಭಾರತದ ಇನ್ನಿಬ್ಬರು ಆಟಗಾರರಾದ ಲೆಗ್-ಸ್ಪಿನ್ನರ್ ಕರ್ಣ್ ಶರ್ಮಾ(31) ಹಾಗೂ ವೇಗದ ಬೌಲರ್ ಮೋಹಿತ್ ಶರ್ಮಾ(30) ಕೂಡ 30ರ ಆಸುಪಾಸಿನಲ್ಲಿದ್ದಾರೆ.

ಸಿಎಸ್‌ಕೆ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ(ಐಪಿಎಲ್)ಸ್ಥಿರ ಪ್ರದರ್ಶನ ನೀಡುತ್ತಿರುವ ಫ್ರಾಂಚೈಸಿ ಆಗಿದೆ. ಪ್ರತಿ ಸಲವೂ ಅಗ್ರ-4ರಲ್ಲಿ ಸ್ಥಾನ ಪಡೆಯುತ್ತದೆ. ತವರು ಮೈದಾನದಲ್ಲಿ ಯಾವಾಗಲೂ ಬಲಿಷ್ಠ ತಂಡವಾಗಿದೆ.

ಸಿಎಸ್‌ಕೆ ಮೂರು ಬಾರಿ ಐಪಿಎಲ್‌ನಲ್ಲಿ ಚಾಂಪಿಯನ್ ಟ್ರೋಫಿ ಜಯಿಸಿದೆ. ಮತ್ತೊಂದೆಡೆ ಆರ್‌ಸಿಬಿ ತಂಡದಲ್ಲಿ ಘಟಾನುಘಟಿ ಆಟಗಾರರಿದ್ದರೂ ಟೂರ್ನಿಯಲ್ಲಿ ಪ್ರತಿ ಬಾರಿಯೂ ಕಳಪೆ ಪ್ರದರ್ಶನ ನೀಡುತ್ತಾ ಬಂದಿದೆ.

ಯಾವ ತಂಡ ಉತ್ತಮ ಬೌಲಿಂಗ್ ಮಾಡುತ್ತದೋ ಅದರ ಮೇಲೆ ಶನಿವಾರದ ಫಲಿತಾಂಶ ನಿಂತಿದೆ. ಉಭಯ ತಂಡಗಳಲ್ಲಿ ಪಂದ್ಯವನ್ನು ತನ್ನತ್ತ ಸೆಳೆಯುವ ಆಟಗಾರರಿದ್ದಾರೆ. ಸಿಎಸ್‌ಕೆ ತಂಡದ ಅಂಬಟಿ ರಾಯುಡು ಹಾಗೂ ರವೀಂದ್ರ ಜಡೇಜ ಈಗಾಗಲೇ ಉತ್ತಮ ಪ್ರದರ್ಶನದ ಮೂಲಕ ಮುಂಬರುವ ವಿಶ್ವಕಪ್‌ಗೆ ಭಾರತೀಯ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಆರ್‌ಸಿಬಿ ವೇಗದ ಬೌಲರ್ ಉಮೇಶ್ ಯಾದವ್ ಐಪಿಎಲ್‌ನಲ್ಲಿ ಮಿಂಚುವುದರೊಂದಿಗೆ ಇಂಗ್ಲೆಂಡ್‌ಗೆ ತೆರಳಲಿರುವ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಲು ಎದುರು ನೋಡುತ್ತಿದ್ದಾರೆ. ಕಳೆದ ಋತುವಿನಲ್ಲಿ ಯಾದವ್ ಪವರ್ ಪ್ಲೇ ವೇಳೆ ಅತ್ಯುತ್ತಮ ಬೌಲರ್ ಆಗಿದ್ದು, 14 ವಿಕೆಟ್‌ಗಳನ್ನು ಕಬಳಿಸಿದ್ದರು. ಸಿಎಸ್‌ಕೆ ತಂಡ ಆರ್‌ಸಿಬಿ ವಿರುದ್ಧ ಅತ್ಯುತ್ತಮ ದಾಖಲೆ ಹೊಂದಿದೆ. ಆರ್‌ಸಿಬಿ ವಿರುದ್ಧ 15 ಪಂದ್ಯಗಳಲ್ಲಿ ಜಯ ಸಾಧಿಸಿ, 7ರಲ್ಲಿ ಸೋತಿದೆ. ಒಂದು ಪಂದ್ಯದಲ್ಲಿ ಫಲಿತಾಂಶ ಬಂದಿಲ್ಲ. ಆರ್‌ಸಿಬಿ 2014ರಿಂದ ಚೆನ್ನೈ ವಿರುದ್ಧ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ. ಚೆನ್ನೈ ಕ್ರಿಕೆಟ್ ಸ್ಟೇಡಿಯಂನಲ್ಲಿ ಆರ್‌ಸಿಬಿ ಕಳಪೆ ದಾಖಲೆ ಹೊಂದಿದ್ದು, 6 ಬಾರಿ ಸೋತಿದೆ. ಇದರಲ್ಲಿ 2011ರಲ್ಲಿ ನಡೆದ ಐಪಿಎಲ್ ಫೈನಲ್ ಹಾಗೂ ಚಾಂಪಿಯನ್ಸ್ ಲೀಗ್ ಟಿ-20 ಲೀಗ್ ಫೈನಲ್ ಕೂಡ ಸೇರಿದೆ.

ಸಿಎಸ್‌ಕೆ ತಂಡ ಸಮತೋಲಿತವಾಗಿದ್ದರೆ, ಆರ್‌ಸಿಬಿ ತಂಡದಲ್ಲಿ ಕೆಲವು ವಿದೇಶಿ ಆಟಗಾರರು ಟೂರ್ನಮೆಂಟ್‌ನ ನಿರ್ದಿಷ್ಟ ಹಂತದಲ್ಲಿ ಲಭ್ಯವಿರದೇ ಇರುವುದು ತಲೆನೋವಾಗಿ ಕಾಡುತ್ತಿದೆ. ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಾಲ್ ಮತ್ತೊಮ್ಮೆ ಆರ್‌ಸಿಬಿಯ ಪ್ರಮುಖ ಅಸ್ತ್ರವಾಗಿದ್ದಾರೆ. ಅವರಿಗೆ ಉಳಿದ ಆಟಗಾರರಿಂದ ಬೆಂಬಲದ ಅಗತ್ಯವಿದೆ.

ಕೊಹ್ಲಿ ಯಾವಾಗಲೂ ತಂಡವನ್ನು ಮುಂಚೂಣಿಯಲ್ಲಿ ನಿಂತು ಮುನ್ನಡೆಸುತ್ತಾರೆ. ಐಪಿಎಲ್ ಟೂರ್ನಿಯಲ್ಲಿ ಕೊಹ್ಲಿ ಫಾರ್ಮ್ ಆರ್‌ಸಿಬಿಗೆ ಅತ್ಯಂತ ಮುಖ್ಯವಾಗಿದೆ. ಎಬಿಡಿವಿಲಿಯರ್ಸ್ ಕೂಡ ತಂಡದ ಸ್ಟಾರ್ ಆಟಗಾರನಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News