ಇಂದು ಜಪಾನ್ ವಿರುದ್ಧ ಭಾರತ ಅಭಿಯಾನ ಆರಂಭ

Update: 2019-03-22 18:40 GMT

ಇಪೋ(ಮಲೇಶ್ಯಾ), ಮಾ.22: ಕಳೆದ ವರ್ಷದ ನಿರಾಶಾದಾಯಕ ಪ್ರದರ್ಶನವನ್ನು ಬದಿಗೊತ್ತಿ ಪುರುಷರ ಹಾಕಿ ತಂಡ ಶನಿವಾರ ಇಲ್ಲಿ ಆರಂಭವಾಗಲಿರುವ 28ನೇ ಆವೃತ್ತಿಯ ಸುಲ್ತಾನ್ ಅಝ್ಲಾನ್ ಶಾ ಕಪ್‌ನ ಮೊದಲ ಪಂದ್ಯದಲ್ಲಿ ಏಶ್ಯನ್ ಗೇಮ್ಸ್ ಚಾಂಪಿಯನ್ ಜಪಾನ್ ತಂಡದ ಸವಾಲು ಎದುರಿಸಲಿದೆ.

ಕೋಚ್ ಮಾರ್ಗದರ್ಶನದ ಕೊರತೆ, ಹಲವು ಆಟಗಾರರ ಗಾಯಾಳು ಸಮಸ್ಯೆ, ಪ್ರಾಕ್ಟೀಸ್ ಪಂದ್ಯದಲ್ಲಿ ಮೂಗಿಗೆ ಗಾಯವಾಗಿ ಗುರ್ಜಂತ್ ಸಿಂಗ್ ಸ್ವದೇಶಕ್ಕೆ ವಾಪಸಾದ ಹೊರತಾಗಿಯೂ ಭಾರತ ತಂಡ ಉತ್ತಮ ಪ್ರದರ್ಶನದ ವಿಶ್ವಾಸದಲ್ಲಿದೆ.

‘‘ಜಪಾನ್, ಕೊರಿಯಾ ಹಾಗೂ ಆತಿಥೇಯ ಮಲೇಶ್ಯಾ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಬಲ್ಲ ತಂಡಗಳು. ಆ ತಂಡಗಳು ಸಂಪೂರ್ಣ ಬಲದೊಂದಿಗೆ ಕಣಕ್ಕಿಳಿಯಲಿದ್ದು, ನಮಗೆ ಕಠಿಣ ಸವಾಲೊಡ್ಡುವುದು ನಿಶ್ಚಿತ’’ ಎಂದು ಮೊದಲ ಪಂದ್ಯಕ್ಕೆ ಮೊದಲು ನಾಯಕ ಮನ್‌ಪ್ರೀತ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಭಾರತೀಯ ಹಾಕಿ ತಂಡ ಸೋಮವಾರ ಮಲೇಶ್ಯಾಕ್ಕೆ ಬಂದಿದ್ದು, ಗುರುವಾರ ಆತಿಥೇಯ ಮಲೇಶ್ಯಾ ವಿರುದ್ಧ ಪ್ರಾಕ್ಟೀಸ್ ಪಂದ್ಯವನ್ನು ಆಡಿದ್ದು, ಟೂರ್ನಿಗೆ ಉತ್ತಮ ತಯಾರಿ ನಡೆಸಿದೆ.

ಭಾರತ ಕಳೆದ ಬಾರಿಯ ಸುಲ್ತಾನ್ ಅಝ್ಲಾನ್ ಶಾ ಕಪ್‌ನಲ್ಲಿ ಐದನೇ ಸ್ಥಾನ ಪಡೆದಿತ್ತು. ಈ ಬಾರಿ ಹಿರಿಯ ಆಟಗಾರರೊಂದಿಗೆ ಯುವ ಆಟಗಾರರು ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿದ್ದಾರೆ.

ಕಳೆದ ಆವೃತ್ತಿಯ ಟೂರ್ನಿಯಲ್ಲಿ ಭಾರತ ಆಡಿದ 5 ಪಂದ್ಯಗಳ ಪೈಕಿ 3ರಲ್ಲಿ ಸೋಲು, 1ರಲ್ಲಿ ಗೆಲುವು, ಮತ್ತೊಂದರಲ್ಲಿ ಡ್ರಾ ಸಾಧಿಸಿತ್ತು. ತನ್ನ ಮೊದಲ ಪಂದ್ಯದಲ್ಲಿ ಒಲಿಂಪಿಕ್ಸ್ ಚಾಂಪಿಯನ್ ಅರ್ಜೆಂಟೀನ ವಿರುದ್ಧ 2-3 ಅಂತರದಿಂದ ಸೋತಿತ್ತು. ಇಂಗ್ಲೆಂಡ್ ವಿರುದ್ಧ 1-1ರಿಂದ ಡ್ರಾ ಸಾಧಿಸಿತ್ತು. ಚಾಂಪಿಯನ್ ಆಸ್ಟ್ರೇಲಿಯಕ್ಕೆ 2-4 ಅಂತರದಿಂದ ಸೋತಿದ್ದ ಭಾರತ ತಂಡ ಮಲೇಶ್ಯಾವನ್ನು 5-1 ಅಂತರದಿಂದ ಮಣಿಸಿತ್ತು. ರೌಂಡ್ ರಾಬಿನ್ ಹಂತದಲ್ಲಿ ಐರ್ಲೆಂಡ್‌ಗೆ 2-3 ಅಂತರದಿಂದ ಸೋತಿದ್ದ ಭಾರತ ಐದನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಐರ್ಲೆಂಡ್‌ಗೆ 4-1 ರಿಂದ ಸೋಲುಣಿಸಿ ಸೇಡು ತೀರಿಸಿಕೊಂಡಿತ್ತು. ಟೂರ್ನಿಯಲ್ಲಿ 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.

‘‘ಇಲ್ಲಿ ಸ್ಮರಣೀಯ ಪ್ರದರ್ಶನ ನೀಡಲು ಯುವಕರು ಯಾವಾಗಲೂ ಈ ವೇದಿಕೆಯನ್ನು ಬಳಸಿಕೊಳ್ಳಬೇಕು. ಹಿರಿಯ ಆಟಗಾರರು ಎಲ್ಲ ಯುವಕರ ಬೆಂಬಲಕ್ಕೆ ನಿಲ್ಲುವುದು ಅತ್ಯಂತ ಮುಖ್ಯ. ಇದರೊಂದಿಗೆ ಅವರಿಗೆ ಮಾರ್ಗದರ್ಶನ ನೀಡಿ ಟೂರ್ನಿಯಲ್ಲಿ ಅವರಿಂದ ಉತ್ತಮ ಪ್ರದರ್ಶನ ಹೊರ ಹೊಮ್ಮಲು ನೆರವಾಗಬೇಕು’’ ಎಂದು ನಾಯಕ ಮನ್‌ಪ್ರೀತ್ ಹೇಳಿದ್ದಾರೆ.

ಭಾರತ 1985,1991, 1995, 2009ರಲ್ಲಿ ಚಾಂಪಿಯನ್ ಕಿರೀಟ ಧರಿಸಿತ್ತು. 2010ರಲ್ಲಿ ದಕ್ಷಿಣ ಕೊರಿಯಾದೊಂದಿಗೆ ಪ್ರಶಸ್ತಿ ಹಂಚಿಕೊಂಡಿತ್ತು. ಭಾರತ ಇತ್ತೀಚೆಗೆ 2016ರಲ್ಲಿ ಆಸ್ಟ್ರೇಲಿಯಕ್ಕೆ ಶರಣಾಗಿ ಬೆಳ್ಳಿ ಪದಕ ಜಯಿಸಿತ್ತು. 2017ರಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News