‘ನನ್ನ ಮಗನನ್ನು ಕೊಂದವರಾರು?’

Update: 2019-03-23 11:38 GMT
ಕಾಶ್ಮೀರದಲ್ಲಿ ಸಾವನ್ನಪ್ಪಿದ ರಿಝ್ವಾನ್ ಆಝಾದ್‌ನ ತಾಯಿಯನ್ನು ಮಹಿಳೆಯರು ಸಾಂತ್ವನಪಡಿಸುತ್ತಿರುವುದು.

ಕೃಪೆ: ಮನೋರಮಾ ಆನ್‌ಲೈನ್‌

ಶ್ರೀನಗರ: ‘ಮಾರ್ಚ್ 17ರಂದು ರವಿವಾರ. ಬೆಳಗ್ಗೆ ಬೇಗನೇ ಬಿಟ್ಟು ಬಿಡುತ್ತೇವೆ ಎಂದು ಹೇಳಿ ಪೊಲೀಸರು ನನ್ನ ಮಗನನ್ನು ಕರೆದುಕೊಂಡು ಹೋದರು. ಅನಂತರದ ದಿನಗಳಲ್ಲಿ ನಾನು ಅವನಿಗಾಗಿ ಅನ್ನ ಬಡಿಸಿ ಕಾಯುತ್ತಿದ್ದೆ. ಆದರೆ ಬಂದದ್ದು ಮಾತ್ರ ‘ಮಗ ಸತ್ತಿದ್ದಾನೆ’ ಎಂಬ ಪೊಲೀಸರ ದೂರವಾಣಿ ಕರೆ. ಪರಾರಿಯಾಗುವ ಯತ್ನದಲ್ಲಿ ಅವನು ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಹೇಳುತ್ತಾರೆ. ಆದರೆ ಇದು ಕೊಲೆಪಾತಕ. ರವಿವಾರ ರಾತ್ರಿ 10:30ಕ್ಕೆ, ಬಂಧನದ ವಿಷಯ ಯಾರಲ್ಲೂ ಹೇಳಬಾರದು ಎಂಬ ಎಚ್ಚರಿಕೆ ನೀಡಿ ಪೊಲೀಸರು ನನ್ನ ಮಗನನ್ನು ಬಂಧಿಸಿದರು. ಆದರೆ ಎರಡು ದಿನಗಳ ಬಳಿಕ ಅವನ ಮೃತದೇಹ ಕೊಂಡು ಹೋಗಿ ಎಂದು ಒರಟಾಗಿ ಹೇಳಲು ನಿಮಗೆ ಹೇಗೆ ಸಾಧ್ಯವಾಗುತ್ತದೆ’. ರಿಝ್ವಾನ್ ಆಝಾದ್ ಪಂಡಿತ್‌ರ ತಾಯಿ ಕಣ್ಣೀರಿಟ್ಟು ಕೇಳುವ ಪ್ರಶ್ನೆಗಳಿವು.

ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟ ರಿಝ್ವಾನ್ ಫಿಸಿಕ್ಸ್‌ನಲ್ಲಿ ಸ್ನಾತ್ತಕೋತ್ತರ ಪದವಿ ಪಡೆದಿದ್ದ. ಇಸ್ಲಾಮಿಕ್ ಯುನಿವರ್ಸಿಟಿ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿಯಲ್ಲಿ ಅತಿಥಿ ಉಪನ್ಯಾಸಕನಾಗಿದ್ದ. ಜೊತೆಗೆ ಕಾಶ್ಮೀರ ವಿವಿಯಲ್ಲಿ ಪಿಎಚ್‌ಡಿ ಮಾಡಲು ಸಿದ್ಧತೆಯಲ್ಲಿರುವಾಗಲೇ ಆತನನ್ನು ಪೊಲೀಸರು ಬಂಧಿಸಿದ್ದರು. ರಿಝ್ವಾನ್‌ನ ದೇಹದಲ್ಲಿ ಹಿಂಸೆಯಿಂದಾದ ಹಲವು ಗುರುತುಗಳಿದ್ದವು. ತಲೆಯಲ್ಲಿ ಹೊಲಿಗೆಗಳಿದ್ದವು. ಹೊಟ್ಟೆಯಲ್ಲಿ ನೀರು ತುಂಬಿ ಉಬ್ಬಿದ ಸ್ಥಿತಿಯಲ್ಲಿತ್ತು. ತೊಡೆಯಲ್ಲಿ ಹಲವು ಗಾಯಗಳಿದ್ದವು. ಕುಟುಂಬದ ಒಪ್ಪಿಗೆ ಪಡೆಯದೆ ಅವಸರದಲ್ಲಿ ಪೋಸ್ಟ್ ಮಾರ್ಟಂ ಮಾಡಲಾಗಿತ್ತು ಎಂದು ಕುಟುಂಬದ ಸದಸ್ಯರು ದೂರಿದ್ದಾರೆ.

ಪಬ್ಲಿಕ್ ಸೇಫ್ಟಿ ಆ್ಯಕ್ಟ್ ಪ್ರಕಾರ ಹಲವು ತಿಂಗಳುಗಳ ಬಂಧನದ ಬಳಿಕ ಇತ್ತೀಚೆಗಷ್ಟೇ ಆತ ಹೊರಬಂದಿದ್ದ. ವಿನಾಕಾರಣ ಅವನನ್ನು ಹಿಂಸಿಸಲಾಯಿತು. ಇದೀಗ ಮತ್ತೆ ಕೊಂದು ಹಾಕಲಾಯಿತು ಎಂದು ರಿಝ್ವಾನ್ ಸಹೋದರ ಮುಬಾಷಿರ್ ಪಂಡಿತ್ ರೋದಿಸುತ್ತಾ ಕಣ್ಣೀರು ಹಾಕುತ್ತಾರೆ.

ಸಾಯುವವರೆಗೆ ಅವನನ್ನು ಅತಿ ಕ್ರೂರವಾಗಿ ಹಿಂಸಿಸಲಾಯಿತು. ತಲೆಯಲ್ಲಿ ಕನಿಷ್ಠ ಐದು ಹೊಲಿಗೆಗಳಿದ್ದವು. ಆಂತರಿಕ ಅಂಗಾಗಳಿಗೆ ಘಾಸಿಯಾಗಿದ್ದರಿಂದ ಹೊಟ್ಟೆಯಲ್ಲಿ ನೀರು ತುಂಬಿ ಉಬ್ಬಿಹೋಗಿತ್ತು. ತೊಡೆಯಲ್ಲಿ ಅನೇಕ ಗಾಯಗಳಿದ್ದವು. ಅವನನ್ನು ಅತಿ ಕ್ರೂರವಾಗಿ ಕೊಲ್ಲಲಾಗಿದೆ. ಪೋಸ್ಟ್ ಮಾರ್ಟಂ ನಡೆಸುವ ಮುಂಚೆ ಒಪ್ಪಿಗೆ ಕೇಳುವ ಸೌಜನ್ಯವನ್ನೂ ಅವರು ತೋರಿಸಲಿಲ್ಲ ಎಂದು ಮುಬಾಷಿರ್ ರೋಷಾಕುಲರಾಗಿ ನುಡಿಯುತ್ತಾರೆ.

ಶ್ರೀನಗರದಲ್ಲಿರುವ ಪೊಲೀಸ್ ಕಂಟ್ರೋಲ್ ರೂಂಗೆ ಬಂದ ರಿಝ್ವಾನ್ನ ಮೃತದೇಹವನ್ನು ಸ್ವೀಕರಿಸಲು ಸಂಬಂಧಿಕರು ಒಪ್ಪಲಿಲ್ಲ. ಅವಂತಿಪುರ ಚೌಕ್‌ನಲ್ಲಿ ರಿಝ್ವಾನ್ನ ಸಂಬಂಧಿಕರು, ಸ್ನೇಹಿತರು ನಡೆಸಿದ ಪ್ರತಿಭಟನೆಯಲ್ಲಿ ಜನಸಾಗರವೇ ನೆರೆದಿತ್ತು. ‘ಯಾರು ನಮ್ಮ ಮಗನನ್ನು ಕೊಂದದ್ದು’ ಎಂಬ ಪ್ಲಕಾರ್ಡ್‌ಗಳು ರಾರಾಜಿಸುತ್ತಿದ್ದವು. ರಿಝ್ವಾನ್ ಸಾವನ್ನಪ್ಪಿದ ಸುದ್ದಿ ಹೊರಬರುತ್ತಿದ್ದಂತೆ ಅತಿ ದೊಡ್ಡ ಪ್ರತಿಭಟನೆಗೆ ಕಾಶ್ಮೀರ ಸಾಕ್ಷಿಯಾಯಿತು. ಅವಂತಿಪುರದಲ್ಲಿ ಭಾರೀ ಪ್ರತಿಭಟನೆ ಹಾಗೂ ಸಂಘರ್ಷ ನಡೆದಿದೆ. ಉಪನ್ಯಾಸಕನ ಸಾವಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ನೂರಾರು ವಿದ್ಯಾರ್ಥಿಗಳು ಬೀದಿಗಿಳಿದಿದ್ದಾರೆ. ಕಾಶ್ಮೀರದಲ್ಲಿ ಮಂಗಳವಾರದಿಂದ ಇಂಟರ್ನೆಟ್ ಸೌಲಭ್ಯ ರದ್ದುಗೊಳಿಸಲಾಗಿದೆ.

ರಿಝ್ವಾನ್ ಹಾಗೂ ಆತನ ತಂದೆ ಜಮಾಅತೆ ಇಸ್ಲಾಮಿನ ಕಾರ್ಯಕರ್ತರಾಗಿದ್ದು, ಪುಲ್ವಾಮದಲ್ಲಿ ಉಗ್ರರ ದಾಳಿಯ ಬಳಿಕ ಸಂಘಟನೆಯನ್ನು ಕಾಶ್ಮೀರದಲ್ಲಿ ನಿಷೇಧಿಸಲಾಗಿತ್ತು. 2015 ಹಾಗೂ 2017ರಲ್ಲೂ ರಿಝ್ವಾನ್ ಪೊಲೀಸರ ಹಿಂಸೆಗೆ ಬಲಿಯಾಗಿದ್ದ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಆಗಸ್ಟ್‌ನಲ್ಲೂ ರಿಝ್ವಾನ್ ಬಂಧನವಾಗಿತ್ತು. ಕಥ್‌ವಾದ ಜೈಲಲ್ಲಿ ಆರು ತಿಂಗಳುಗಳ ಕಾಲ ಇದ್ದು, ಫೆಬ್ರವರಿಯಲ್ಲಿ ಬಿಡುಗಡೆ ಮಾಡಲಾಗಿತ್ತು.ಕಳೆದ ಮಂಗಳವಾರ ರಾತ್ರಿ 8:30ರ ಸುಮಾರಿಗೆ ರಿಝ್ವಾನ್ನ ಮೃತದೇಹವನ್ನು ಅವಂತಿಪುರ ಸ್ಟೇಷನ್‌ಗೆ ತಲುಪಿಸಿದ ಬಳಿಕ ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು. ಮಂಗಳವಾರ ರಾತ್ರಿ 10 ಗಂಟೆಯ ಸುಮಾರಿಗೆ ರಿಝ್ವಾನ್ನ ಮೃತದೇಹದ ಅಂತ್ಯಸಂಸ್ಕಾರ ನಡೆಸಲಾಯಿತು. ರಿಝ್ವಾನ್‌ನ ವಿದ್ಯಾರ್ಥಿಗಳು, ಸಾವಿರಾರು ಜನರು ಭಾಗವಹಿಸಿದ್ದರು. ರಿಝ್ವಾನ್‌ನ ಸಾವಿಗೆ ಪ್ರತಿಭಟಿಸಿ ಪಶ್ಚಿಮ ಕಾಶ್ಮೀರದಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಯಿತು. ರಿಝ್ವಿನ್‌ನ ಸಾವಿನಿಂದಾಗಿ ಕಾಶ್ಮೀರದಲ್ಲಿ ಪ್ರತಿಭಟನೆಯ ಕಾವು ಹೆಚ್ಚುತ್ತಿದೆ. ರಿಝ್ವಾನ್‌ನ ಸಾವಿನ ಬಗ್ಗೆ ಮಾಜಿಸ್ಟ್ರೇಟ್ ಮಟ್ಟದಲ್ಲಿ ತನಿಖೆ ನಡೆಸುವ ಬಗ್ಗೆ ಘೋಷಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News