ಲೋಕಸಭಾ ಚುನಾವಣೆ: ಮಹಾರಾಷ್ಟ್ರದ 6 ಹಾಲಿ ಸಂಸದರಿಗೆ ಬಿಜೆಪಿ ಟಿಕೆಟ್ ನಿರಾಕರಣೆ

Update: 2019-03-23 15:10 GMT

ಮುಂಬೈ,ಮಾ.23: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಆಡಳಿತ ವಿರೋಧಿ ಅಲೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನವಾಗಿ ಬಿಜೆಪಿ ಹಾಲಿ ಆರು ಸಂಸದರಿಗೆ ಟಿಕೆಟ್ ನಿರಾಕರಿಸಿದೆ.

ಪುಣೆಯಲ್ಲಿ ಸಂಸದ ಅನಿಲ್ ಶಿರೊಲೆ ಬದಲಾಗಿ ಸಚಿವ ಗಿರೀಶ್ ಬಾಪತ್‌ಗೆ ಟಿಕೆಟ್ ನೀಡಲಾಗಿದೆ. 2014ರ ಲೋಕಸಭಾ ಚುನಾವಣೆಯಲ್ಲೂ ಬಾಪತ್ ಪುಣೆಯಿಂದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಪಕ್ಷ ಅನಿಲ್ ಶಿರೊಲೆಗೆ ಟಿಕೆಟ್ ನೀಡಿತ್ತು. ಈ ಬಾರಿ ಎನ್‌ಸಿಪಿ-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯನ್ನು ಮಣಿಸಲು ಬಾಪತ್ ಉತ್ತಮ ಆಯ್ಕೆ ಎಂದು ತೀರ್ಮಾನಿಸಿರುವ ಪಕ್ಷದ ವರಿಷ್ಠರು ಶಿರೊಲೆಗೆ ಟಿಕೆಟ್ ನಿರಾಕರಿಸಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಸೋಲಾಪುರದಲ್ಲಿ ಸಂಸದ ಶರದದ ಬನ್ಸೊಡೆ ಜಾಗದಲ್ಲಿ ಜೈಸಿದ್ಧೇಶ್ವರ ಸ್ವಾಮಿಗೆ ಟಿಕೆಟ್ ನೀಡಲಾಗಿದೆ. ಬನ್ಸೊಡೆ ಕಳೆದ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಸಚಿವ ಸುಶೀಲ್ ಕುಮಾರ್ ಶಿಂಧೆಯನ್ನು ಬೃಹತ್ ಅಂತರದಿಂದ ಸೋಲಿಸಿದ್ದರು. ಈ ಬಾರಿ ಶಿಂಧೆಗೆ ಸ್ವಾಮಿ ಸವಾಲೊಡ್ಡುತ್ತಿದ್ದಾರೆ. ದಿಂಡೊರಿಯಲ್ಲಿ ಸಂಸದ ಹರಿಶ್ಚಂದ್ರ ಚವಾಣ್ ಬದಲಾಗಿ ಎನ್‌ಸಿಪಿ ತೊರೆದು ಬಿಜೆಪಿ ಸೇರ್ಪಡೆಗೊಂಡಿರುವ ಭಾರತಿ ಪವಾರ್‌ಗೆ ಟಿಕೆಟ್ ನೀಡಲಾಗಿದೆ. 2014ರ ಚುನಾವಣೆಯಲ್ಲಿ ಭಾರತಿ ಬಿಜೆಪಿಯ ಹರಿಶ್ಚಂದ್ರ ಎದುರು ಬೃಹತ್ ಅಂತರದಿಂದ ಪರಾಭವಗೊಂಡಿದ್ದರು. ದಿಂಡೊರಿ ಎಸ್ಟಿ ಮೀಸಲು ಕ್ಷೇತ್ರವಾಗಿದೆ.

ಬಾರಮತಿಯಲ್ಲಿ ಮಿತ್ರಪಕ್ಷ ರಾಷ್ಟ್ರೀಯ ಸಮಾಜ ಪಕ್ಷದ ಶಾಸಕ ರಾಹುಲ್ ಕುಲ್ ಅವರ ಪತ್ನಿ ಕಂಚನ್ ಕುಲ್‌ಗೆ ಟಿಕೆಟ್ ನೀಡಲು ಬಿಜೆಪಿ ನಿರ್ಧರಿಸಿದೆ. ಜಲಗಾಂವ್‌ನಲ್ಲಿ ಎ.ಟಿ ನಾನಾ ಪಾಟೀಲ್ ಬದಲಾಗಿ ಎಂಎಲ್‌ಸಿ ಸ್ಮಿತಾ ಉದಯ್ ವಘ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. 2014ರ ಚುನಾವಣೆಯಲ್ಲಿ ಪಾಟೀಲ್ ಎದುರಾಳಿ ಎನ್ಸಿಪಿಯ ಅಣ್ಣಾಸಾಹಿಬ್ ಸತೀಶ್ ಭಾಸ್ಕರ್‌ ರಾವ್ ಅವರನ್ನು ಮೂರು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಮಣಿಸಿದ್ದರು. ಆದರೆ ಈ ಬಾರಿ ಟಿಕೆಟ್ ಗಿಟ್ಟಿಸುವಲ್ಲಿ ವಿಫಲವಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News