ಚೆನ್ನೈ ಗೆಲುವಿನ ಆರಂಭ

Update: 2019-03-23 18:42 GMT

ಚೆನ್ನೈ, ಮಾ.23: ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ನೇತೃತ್ವದ ಅತ್ಯುತ್ತಮ ಬೌಲಿಂಗ್ ದಾಳಿ ನೆರವಿನಿಂದ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 7 ವಿಕೆಟ್‌ಗಳಿಂದ ಮಣಿಸಿದ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ 12ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಗೆಲುವಿನ ಆರಂಭ ಪಡೆದಿದೆ. ಶನಿವಾರ ಇಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆರ್‌ಸಿಬಿ 17.1 ಓವರ್‌ಗಳಲ್ಲಿ 70 ರನ್ ಗಳಿಸಿ ಆಲೌಟಾಗಿದೆ. ಆರ್‌ಸಿಬಿ ಪರ ಆರಂಭಿಕ ಆಟಗಾರ ಪಾರ್ಥಿವ್ ಪಟೇಲ್ 29 ರನ್(35 ಎಸೆತ, 2 ಬೌಂಡರಿ) ಗಳಿಸಿ ಅಗ್ರ ಸ್ಕೋರರ್ ಎನಿಸಿಕೊಂಡರು. ಗೆಲ್ಲಲು ಸುಲಭ ಸವಾಲು ಪಡೆದ ಚೆನ್ನೈ 17.4 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 71 ರನ್ ಗಳಿಸಿತು. ಕೇದಾರ್ ಜಾಧವ್(ಔಟಾಗದೆ 13) ಹಾಗೂ ರವೀಂದ್ರ ಜಡೇಜ(6)ತಂಡವನ್ನು ಗೆಲುವಿನ ದಡ ಸೇರಿಸಿದರು. ಅಂಬಟಿ ರಾಯುಡು(28)ಹಾಗೂ ಸುರೇಶ್ ರೈನಾ(19) ಎರಡಂಕೆಯ ಸ್ಕೋರ್ ಗಳಿಸಿದರು. ಆರಂಭಿಕ ಆಟಗಾರ ಶೇನ್ ವಾಟ್ಸನ್ ರನ್ ಖಾತೆ ತೆರೆಯಲು ವಿಫಲರಾದರು.

ಆರ್‌ಸಿಬಿ ಪರ ಯಜುವೇಂದ್ರ ಚಹಾಲ್(1-6) ಹಾಗೂ ಸೈನಿ(1-19) ತಲಾ ಒಂದು ವಿಕೆಟ್ ಪಡೆದರು.

ಇದಕ್ಕೆ ಮೊದಲು ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ(6), ಮೊಯಿನ್ ಅಲಿ(9), ಎಬಿಡಿವಿಲಿಯರ್ಸ್(9), ಎಸ್.ದುಬೆ(2),ಗ್ರಾಂಡ್‌ಹೋಮ್(4) ಹಾಗೂ ಸೈನಿ(2)ಒಂದಂಕಿಯ ಸ್ಕೋರ್ ಗಳಿಸಿದರು. ಆಲ್‌ರೌಂಡರ್ ಹೆಟ್ಮೆಯರ್ ಖಾತೆ ತೆರೆಯುವ ಮೊದಲೇ ರನೌಟಾದರು.

ಚೆನ್ನೈ ಪರ ಹರ್ಭಜನ್ ಸಿಂಗ್ 20 ರನ್‌ಗೆ 3 ವಿಕೆಟ್ ಉರುಳಿಸಿದರು. ಇನ್ನೊರ್ವ ಸ್ಪಿನ್ನರ್ ಇಮ್ರಾನ್ ತಾಹಿರ್ 4 ಓವರ್‌ಗಳಲ್ಲಿ 3 ವಿಕೆಟ್ ಪಡೆದು ಕೇವಲ 9 ರನ್ ನೀಡಿ (3-9) ಹರ್ಭಜನ್‌ಗೆ ಉತ್ತಮ ಸಾಥ್ ನೀಡಿದರು. ರವೀಂದ್ರ ಜಡೇಜ 15 ರನ್‌ಗೆ 2 ವಿಕೆಟ್ ಉಡಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News