ಜೊಕೊವಿಕ್, ಒಸಾಕಾ, ಸೆರೆನಾಗೆ ಮುನ್ನಡೆ

Update: 2019-03-23 19:03 GMT

ಮಿಯಾಮಿ, ಮಾ.23: ಇಂಡಿಯನ್ ವೆಲ್ಸ್ ಟೂರ್ನಿಯಲ್ಲಿನ ನಿರಾಸೆಯನ್ನು ಹಿಂದಿಕ್ಕಿದ ಸರ್ಬಿಯದ ಸ್ಟಾರ್ ಆಟಗಾರ ನೊವಾಕ್ ಜೊಕೊವಿಕ್ ಮಿಯಾಮಿ ಓಪನ್ ಟೂರ್ನಿಯ ಎರಡನೇ ಸುತ್ತಿನ ಪಂದ್ಯದಲ್ಲಿ ಆಸ್ಟ್ರೇಲಿಯದ ಬರ್ನಾರ್ಡ್ ಟಾಮಿಕ್ ಅವರನ್ನು 7-6(7/2), 6-2 ಸೆಟ್‌ಗಳ ಅಂತರದಿಂದ ಮಣಿಸಿ ಮೂರನೇ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ.

ವಿಶ್ವದ ನಂ.1 ಆಟಗಾರ ಜೊಕೊವಿಕ್ ಇಂಡಿಯನ್ ವೆಲ್ಸ್ ಟೂರ್ನಿಯಲ್ಲಿ ಜರ್ಮನಿಯ ಫಿಲಿಪ್ ಕೋಲ್‌ಸ್ಕ್ರೈಬರ್ ವಿರುದ್ಧ ಸೋಲುಂಡು ಟೂರ್ನಿಯಿಂದ ನಿರ್ಗಮಿಸಿದ್ದರು. ಮಿಯಾಮಿ ಓಪನ್ ಟೂರ್ನಿಯಲ್ಲಿ ಅವರು 7ನೇ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದಾರೆ.

ವಿಶ್ವ ನಂ.81 ಆಟಗಾರ ಟಾಮಿಕ್ ಅವರು ಜೊಕೊವಿಕ್‌ಗೆ ಕೆಲವೊತ್ತು ಪೈಪೋಟಿ ನೀಡಿದರೂ ಅಂತಿಮವಾಗಿ ಒಂದು ತಾಸು 13 ನಿಮಿಷಗಳ ಪಂದ್ಯದಲ್ಲಿ ಮಣಿಯಬೇಕಾಯಿತು.

 ದಿನದ ಇತರ ಪಂದ್ಯಗಳಲ್ಲಿ ವಿಶ್ವದ ಅಗ್ರ ರ್ಯಾಂಕಿನ ಆಟಗಾರ್ತಿ ನವೊಮಿ ಒಸಾಕಾ, ಅಮೆರಿಕದ ಸೆರೆನಾ ವಿಲಿಯಮ್ಸ್ ತಮ್ಮ ಪಂದ್ಯಗಳನ್ನು ಜಯಿಸಿ ಮುಂದಿನ ಸುತ್ತು ಪ್ರವೇಶಿಸಿದ್ದಾರೆ. ಒಸಾಕಾ ತಮ್ಮ ಗೆಲುವಿನ ಓಟ ಮುಂದುವರಿಸಿ ಯಾನಿನಾ ವಾಕ್‌ಮೆಯರ್ ಅವರನ್ನು ಮಣಿಸಿ ಎರಡನೇ ಸುತ್ತು ಪ್ರವೇಶಿಸಿದರೆ, ಸೆರೆನಾ ವಿಲಿಯಮ್ಸ್ ಅವರು ಸ್ವೀಡನ್‌ನ ರೆಬೆಕ್ಕಾ ಪೀಟರ್ಸ್ ನ್ ವಿರುದ್ಧ 6-3, 1-6, 6-1 ಸೆಟ್‌ಗಳ ಜಯ ಗೆಲುವಿನ ತೋರಣ ಕಟ್ಟಿದರು.

ಸೆರೆನಾರ ಅಕ್ಕ ವೀನಸ್ ವಿಲಿಯಮ್ಸ್ ಕೂಡ 7-6 (7/4), 6-1ರಿಂದ ಸ್ಪೇನ್‌ನ ಕಾರ್ಲಾ ಸ್ವಾರೆಝ್ ನವಾರೊ ಅವರನ್ನು ಮಣಿಸಿ ಮುಂದಿನ ಸುತ್ತಿಗೆ ಪ್ರವೇಶಿಸಿದ್ದಾರೆ.

ಥೀಮ್, ನಿಶಿಕೊರಿಗೆ ನಿರಾಸೆ  

ಇಂಡಿಯನ್ ವೆಲ್ಸ್ ಮಾಸ್ಟರ್ಸ್‌ನ ಪುರುಷರ ಸಿಂಗಲ್ಸ್ ನಲ್ಲಿ ಚಾಂಪಿಯನ್ ಆಗಿದ್ದ ಡೊಮಿನಿಕ್ ಥೀಮ್ 4-6, 4-6 ನೇರ ಸೆಟ್‌ಗಳಿಂದ ಪೋಲೆಂಡ್‌ನ ಹ್ಯುಬರ್ಟ್ ಹರ್ಕಝ್ ವಿರುದ್ಧ ನಿರಾಸೆ ಅನುಭವಿಸಿದರು. ಮತ್ತೊಂದು ಪಂದ್ಯದಲ್ಲಿ ಜಪಾನ್ ಕಿ ನಿಶಿಕೊರಿ ಕೂಡ ಸರ್ಬಿಯದ ಡುಸಾನ್ ಲಾಜೊವಿಕ್ ವಿರುದ್ಧ 6-2, 2-6, 3-6 ಸೆಟ್‌ಗಳಿಂದ ಸೋತು ಹೊರ ನಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News