ಆಸ್ಟ್ರೇಲಿಯಕ್ಕೆ ಭರ್ಜರಿ ಜಯ

Update: 2019-03-23 19:06 GMT

ಶಾರ್ಜಾ, ಮಾ.23: ಪಾಕಿಸ್ತಾನ ವಿರುದ್ಧ ಇಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಆ್ಯರೊನ್ ಫಿಂಚ್ ಅವರ ಭರ್ಜರಿ ಶತಕದ ಬಲದಿಂದ ಆಸ್ಟ್ರೇಲಿಯ 8 ವಿಕೆಟ್‌ಗಳ ಜಯ ಗಳಿಸಿ ಬೀಗಿದೆ. ಈ ಮೂಲಕ ಆಸೀಸ್ ಐದು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಪಂದ್ಯದಲ್ಲಿ ಪಾಕಿಸ್ತಾನದ ಗುರಿಯನ್ನು ಚೇಸ್ ಮಾಡಿದ ಆಸ್ಟ್ರೇಲಿಯ ಫಿಂಚ್ ಅವರ 12ನೇ ಏಕದಿನ ಶತಕದ (116, 135 ಎಸೆತ) ನೆರವಿನಿಂದ 49 ಓವರ್‌ಗಳಲ್ಲಿ 2 ವಿಕೆಟ್‌ಗೆ 281 ರನ್ ಗಳಿಸಿ ಗೆಲುವಿನ ನಗೆ ಬೀರಿತು. ತಮ್ಮ ಬ್ಯಾಟಿಂಗ್‌ನಲ್ಲಿ ಒಟ್ಟು 4 ಸಿಕ್ಸರ್ ಹಾಗೂ 8 ಬೌಂಡರಿಗಳನ್ನು ಸಿಡಿಸಿದ ಫಿಂಚ್, ಎರಡನೇ ವಿಕೆಟ್‌ಗೆ ಶಾನ್ ಮಾರ್ಷ್ (ಅಜೇಯ 91, 102 ಎಸೆತ) ಜೊತೆಗೂಡಿ 172 ರನ್‌ಗಳ ಭಾರೀ ಜೊತೆಯಾಟ ಆಡಿದರು. ಮಾರ್ಷ್ ಇನಿಂಗ್ಸ್ ನಲ್ಲಿ ನಾಲ್ಕು ಬೌಂಡರಿ ಹಾಗೂ 2 ಸಿಕ್ಸರ್‌ಗಳಿದ್ದವು. ಪಾಕಿಸ್ತಾನದ ಮುಹಮ್ಮದ್ ಅಬ್ಬಾಸ್ (44ಕ್ಕೆ 1) ಬೌಲಿಂಗ್‌ನಲ್ಲಿ ಮಿಂಚಿದರು.

ಇದಕ್ಕೂ ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನಕ್ಕೆ ಹಾರಿಸ್ ಸೊಹೈಲ್ ಆಸರೆಯಾದರು. ತನ್ನ 27ನೇ ಪಂದ್ಯವಾಡಿದ ಅವರು ಭರ್ಜರಿ ಶತಕ (101) ಸಿಡಿಸುವ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ 1,000 ರನ್ ಪೂರೈಸಿದ ಆಟಗಾರರ ಪಟ್ಟಿಗೆ ಸೇರ್ಪಡೆಯಾದರು. ಅವರಿಗೆ ಉಮರ್ ಅಕ್ಮಲ್ (48) ಉತ್ತಮ ನೆರವು ನೀಡಿದರು. ಅಂತಿಮವಾಗಿ ಪಾಕಿಸ್ತಾನ 50 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 280 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಜಮೆ ಮಾಡಿತು. ಆಸ್ಟ್ರೇಲಿಯ ಪರ ನಥಾನ್ ಕೌಲ್ಟರ್ ನೀಲ್ (61ಕ್ಕೆ 2) ಬೌಲಿಂಗ್‌ನಲ್ಲಿ ಉತ್ತಮರೆನಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News