ಈ ಶಾಲಾ ಮಕ್ಕಳು ಲೋಕಸಭಾ ಚುನಾವಣೆಗೆ ಥ್ಯಾಂಕ್ಸ್ ಹೇಳುತ್ತಿರುವುದೇಕೆ ಗೊತ್ತೆ?

Update: 2019-03-24 04:08 GMT

ಕೊಯಮತ್ತೂರು, ಮಾ.24: ಅಣ್ಣೈಕಟ್ಟಿ ಬಳಿಯ ತಡಗಾಮ್ ಮೀಸಲು ಅರಣ್ಯಕ್ಕೆ ಹೊಂದಿಕೊಂಡಿರುವ ಧೂಮನೂರು ಸರ್ಕಾರಿ ಮಾಧ್ಯಮಿಕ ಶಾಲೆಗೆ ಹದಿನೇಳು ವರ್ಷಗಳ ಸುದೀರ್ಘ ಕಾಯುವಿಕೆ ಬಳಿಕ ಕೊನೆಗೂ ವಿದ್ಯುತ್ ಭಾಗ್ಯ ದೊರಕಿದೆ. ಇದಕ್ಕೆ ಕಾರಣ ಲೋಕಸಭಾ ಚುನಾವಣೆ!

ಈ ಶಾಲೆಯಲ್ಲಿ ಜಿಲ್ಲಾಡಳಿತ ಮತಗಟ್ಟೆ ಸ್ಥಾಪನೆ ಮಾಡಿರುವುದರಿಂದ ಶಾಲೆಗೆ ಕಳೆದ ಶುಕ್ರವಾರ ವಿದ್ಯುತ್ ಸಂಪರ್ಕ ಒದಗಿಸಲಾಗಿದೆ. ಧೂಮನೂರು, ಚೆಂಬುಕರೈ ಮತ್ತು ಕತ್ತುಸಲೈ ಎಂಬ ಮೂರು ಬುಡಕಟ್ಟು ಉಪಗ್ರಾಮಗಳು ಈ ರಕ್ಷಿತಾರಣ್ಯದಲ್ಲಿವೆ. 150 ಕುಟುಂಬಗಳು ವಾಸವಿದ್ದು, 48 ಮಕ್ಕಳು ಈ ಮಾಧ್ಯಮಿಕ ಶಾಲೆಗಳಲ್ಲಿ ಓದುತ್ತಿದ್ದಾರೆ. 2016ರಲ್ಲಿ ಅರಣ್ಯದೊಳಗಿನ ಈ ಉಪಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿತ್ತು. ಆದರೆ ವಿವಿಧ ಕಾರಣಗಳಿಂದ ಶಾಲೆಗೆ ವಿದ್ಯುತ್ ಸೌಲಭ್ಯ ಇರಲಿಲ್ಲ.

ಈ ಪ್ರದೇಶದ ಜನ ಮತ ಹಾಕಲು 11 ಕಿಲೋಮೀಟರ್ ದೂರದ ಅಣ್ಣೈಕಟ್ಟಿ ಪ್ರೌಢಶಾಲೆಗೆ ಹೋಗಬೇಕಿತ್ತು. ಇದನ್ನು ತಪ್ಪಿಸಲು ಜಿಲ್ಲಾಡಳಿತ ಕಳೆದ ವಿಧಾನಸಭಾ ಚುನಾವಣೆ ವೇಳೆ ಧೂಮನೂರು ಶಾಲೆಯಲ್ಲಿ ಮತಗಟ್ಟೆ ಆರಂಭಿಸಿತ್ತು. ಇಷ್ಟಾಗಿಯೂ ಶಾಲೆಗೆ ವಿದ್ಯುತ್ ಸೌಲಭ್ಯ ಇರಲಿಲ್ಲ. ವಿದ್ಯುನ್ಮಾನ ಮತಯಂತ್ರಗಳಿಗೆ ಜನರೇಟರ್ ಮೂಲಕ ವಿದ್ಯುತ್ ನೀಡಲಾಗಿತ್ತು. ಇದರಿಂದಾಗಿ ಮತದಾನದ ವೇಳೆ ತಾಂತ್ರಿಕ ತೊಂದರೆ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿ ಶಾಲೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಜಿಲ್ಲಾಡಳಿತ ನಿರ್ಧರಿಸಿತು ಎಂದು ತಿಳಿದುಬಂದಿದೆ. ಕಳೆದ 17 ವರ್ಷಗಳಿಂದ ವಿದ್ಯುತ್ ಸಂಪರ್ಕ ಇಲ್ಲದೇ ಈ ಶಾಲೆ ಕಾರ್ಯನಿರ್ವಹಿಸುತ್ತಿದೆ. 2014ರಲ್ಲಿ ಒಂದು ಸೌರ ವಿದ್ಯುತ್ ದೀಪ ವ್ಯವಸ್ಥೆಯನ್ನು ಶಾಲೆಗೆ ಮಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News