×
Ad

ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಅಭ್ಯರ್ಥಿಯಿಲ್ಲದೆ ಸಂಕಷ್ಟದಲ್ಲಿ ಜೆಡಿಎಸ್!

Update: 2019-03-24 19:27 IST

ಬೆಂಗಳೂರು, ಮಾ.25: ಕಾಂಗ್ರೆಸ್-ಜೆಡಿಎಸ್ ಮೈತ್ರಿಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಲಾಗಿದೆ. ಈ ಕ್ಷೇತ್ರದಿಂದ ಮೊದಲು ದೇವೇಗೌಡ ಅವರು ಸ್ಪರ್ಧೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ, ಇದೀಗ ದೇವೇಗೌಡರು ತುಮಕೂರಿನಿಂದ ಸ್ಪರ್ಧೆ ಮಾಡುವುದು ಬಹುತೇಕ ಖಚಿತವಾಗಿದ್ದು, ಬೆಂಗಳೂರು ಉತ್ತರದಿಂದ ಸೂಕ್ತ ಅಭ್ಯರ್ಥಿ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದೆ.

ರವಿವಾರ ದೇವೇಗೌಡರ ನಿವಾಸದಲ್ಲಿ ಸಭೆ ನಡೆಸಿದ ಜೆಡಿಎಸ್ ನಾಯಕರು, ಕಾಂಗ್ರೆಸ್‌ನ ಬಿ.ಎಲ್.ಶಂಕರ್‌ರನ್ನು ಕಣಕ್ಕಿಳಿಸಲು ಚಿಂತನೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಿ.ಎಲ್.ಶಂಕರ್ ಜೊತೆಗೆ ದೇವೇಗೌಡ ದೂರವಾಣಿಯಲ್ಲಿ ಮಾತನಾಡಿದ್ದಾರೆ.

ಶಂಕರ್ ಸ್ಪರ್ಧೆಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಮ್ಮತಿ ಸೂಚಿಸಿದ್ದಾರೆ. ಎರಡೂ ಪಕ್ಷದ ಬೆಂಬಲದಲ್ಲಿ ಕಣಕ್ಕಿಳಿಯಲು ಶಂಕರ್ ಒಪ್ಪಿಗೆ ಸೂಚಿಸಿದ್ದಾರೆ. ಆದರೆ, ಕಾಂಗ್ರೆಸ್ ಚಿಹ್ನೆಯಡಿ ಸ್ಪರ್ಧೆ ಮಾಡುವುದಾದರೆ ಮಾತ್ರ ಚುನಾವಣೆಗೆ ಸ್ಪರ್ಧಿಸಲು ಸಿದ್ಧ ಎನ್ನುವ ಮೂಲಕ ಜೆಡಿಎಸ್ ಚಿಹ್ನೆಯಡಿ ಸ್ಪರ್ಧೆಗೆ ಶಂಕರ್ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.

ಬೆಂಗಳೂರು ಉತ್ತರ ಮತ್ತು ತುಮಕೂರು ಎರಡು ಕಡೆ ಸ್ಪರ್ಧಿಸುವಂತೆ ದೇವೇಗೌಡರಿಗೆ ಮನವಿ ಮಾಡಲಾಗಿದೆ. ಆದರೆ, ಎರಡು ಕಡೆ ಸ್ಪರ್ಧೆ ಮಾಡಿದರೆ, ತಪ್ಪು ಸಂದೇಶ ರವಾನೆ ಆಗುತ್ತದೆ. ತುಮಕೂರಿನಲ್ಲಿ ಹಿನ್ನಡೆ ಆಗಬಹುದು. ಬೆಂಗಳೂರಿನಲ್ಲಿ ಕೈ ಶಾಸಕರು ಸಿದ್ದರಾಮಯ್ಯ ಶಿಷ್ಯರು. ಎರಡೂ ಕ್ಷೇತ್ರದಲ್ಲಿ ಪ್ರಚಾರ ಮಾಡೋದು ಕಷ್ಟ. ತುಮಕೂರಿನಲ್ಲಿ ಮುದ್ದಹನುಮೇಗೌಡರ ಸ್ಪರ್ಧೆಯಿಂದ ಹೆದರಿದರು ಎಂಬ ಸಂದೇಶ ಹೋಗುತ್ತದೆ. ಹೀಗಾಗಿ ಕಾಂಗ್ರೆಸ್ ನಾಯಕರ ಮನವೊಲಿಕೆಗೆ ಜೆಡಿಎಸ್ ಕಸರತ್ತು ನಡೆಸಿದೆ. ಶಂಕರ್ ಅವರನ್ನೇ ಜೆಡಿಎಸ್‌ನಿಂದ ಸ್ಪರ್ಧಿಸುವಂತೆ ಮಾಡುವ ಯತ್ನ ನಡೆಸಿದ್ದಾರೆ. ನಾಳೆ ಮಂಡ್ಯ, ತುಮಕೂರಿನಲ್ಲಿ ಜೆಡಿಎಸ್ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಬಳಿಕ ಅಂತಿಮ ನಿರ್ಧಾರ ಆಗಲಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News