ಬೆಂಗಳೂರು: ಭೂಮಿಗಾಗಿ ನಾದಿನಿಗೆ ಬೆಂಕಿ ಹಚ್ಚಿ ಕೊಲೆ

Update: 2019-03-24 15:13 GMT

ಬೆಂಗಳೂರು, ಮಾ.24: ನಾದಿನಿಯ ಹೆಸರಿನಲ್ಲಿದ್ದ 2 ಎಕರೆ ಭೂಮಿಗಾಗಿ ಆಕೆಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆಗೈದಿರುವ ಘಟನೆ ಇಲ್ಲಿನ ಬೆಂಗಳೂರು ಹೊರವಲಯದ ಬಿಡದಿಯಲ್ಲಿ ನಡೆದಿರುವುದಾಗಿ ವರದಿಯಾಗಿದೆ.

ಅಂಬುಜಮ್ಮ (52) ಎಂಬಾಕೆ ಮೃತ ಮಹಿಳೆಯಾಗಿದ್ದು, ರಾಮಯ್ಯ ಎಂಬಾತ ಈ ಕೃತ್ಯವೆಸಗಿರುವ ಆರೋಪಿ ಎಂದು ಬಿಡದಿ ಠಾಣಾ ಪೊಲೀಸರು ಗುರುತಿಸಿದ್ದಾರೆ.

ಏನಿದು ಪ್ರಕರಣ?: ಮೃತ ಅಂಬುಜಮ್ಮ ಪತಿ ನಾಗಣ್ಣ 20 ವರ್ಷಗಳ ಹಿಂದೆ ನಿಧನರಾಗಿದ್ದರು. ಆ ಬಳಿಕ ಕುಟುಂಬದವರ ಹೆಸರಿನಲ್ಲಿ ಇದ್ದ 20 ಎಕರೆ ಭೂಮಿಯಲ್ಲಿ 2 ಎಕರೆ ಅಂಬುಜಮ್ಮ ಹೆಸರಿಗೆ ನೀಡಲಾಗಿತ್ತು. ಈ ಭೂಮಿ ತಮಗೆ ನೀಡುವಂತೆ ನಾಗಣ್ಣ ಸಹೋದರ ಆರೋಪಿ ರಾಮಯ್ಯ ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ. ರಾಮಯ್ಯನ ಹಿಂಸೆಯಿಂದ ನೊಂದ ಅಂಬುಜಮ್ಮ ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಿದ್ದರು. ಆದರೆ, ಶನಿವಾರ ಮಾತನಾಡುವ ನೆಪದ ಮೇಲೆ ಅಂಬುಜಮ್ಮರನ್ನು ಮನೆಯಿಂದ ಹೊರಗೆ ಕರೆದು ರಾಮಯ್ಯ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ ಎಂದು ಹೇಳಲಾಗುತ್ತಿದೆ.

ಬೆಂಕಿ ತೀವ್ರತೆಯಿಂದ ಸುಟ್ಟು ಹೋಗಿದ್ದ ಅಂಬುಜಮ್ಮರನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News