ಇಡಾಯಿ ಚಂಡಮಾರುತ: ಭಾರತದಿಂದ ಮೊಝಾಂಬಿಕ್‌ಗೆ ನಾಲ್ಕನೇ ಹಡಗು

Update: 2019-03-24 18:33 GMT

ಹೊಸದಿಲ್ಲಿ, ಮಾ. 23: ಚಂಡಮಾರುತ ಇಡಾಯಿ ಪೀಡಿತ ಮೊಝಾಂಬಿಕ್‌ನಲ್ಲಿ ಪರಿಹಾರ ಕಾರ್ಯಾಚರಣೆಗೆ ನೆರವು ನೀಡಲು ಭಾರತ ತನ್ನ ನಾಲ್ಕನೇ ಹಡಗನ್ನು ಕಳುಹಿಸಿಕೊಡಲಿದೆ. ಪರಿಹಾರ ವಸ್ತುಗಳನ್ನು ಹೇರಿಕೊಂಡ ಹಡಗು ಐಎನ್‌ಎಸ್ ಮಾಗರ್ (ಎಂಎಜಿಎಆರ್) ಇನ್ನೆರೆಡು ದಿನಗಳಲ್ಲಿ ಮೊಝಾಂಬಿಕ್‌ಗೆ ತೆರಳುವ ನಿರೀಕ್ಷೆ ಇದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಶನಿವಾರ ಹೇಳಿದೆ.

ಚಂಡಮಾರುತ ಇಡಾಯಿಯಿಂದ ಮೊಝಾಂಬಿಕ್, ಝಿಂಬಾಬ್ವೆ ಹಾಗೂ ಮಾಲಾವಿ ತೀವ್ರ ಪೀಡಿತವಾಗಿದೆ. ಈ ಮೂರು ದೇಶಗಳಲ್ಲಿ ಕನಿಷ್ಠ 732 ಜನರು ಸಾವನ್ನಪ್ಪಿದ್ದಾರೆ. ಮೊಝಾಂಬಿಕ್‌ನಲ್ಲಿ 417, ಝಿಂಬಾಬ್ವೆಯಲ್ಲಿ 259 ಹಾಗೂ ಮಾಲಾವಿಯಲ್ಲಿ 56 ಮಂದಿ ಮೃತಪಟ್ಟಿದ್ದಾರೆ. ಅಲ್ಲದೆ ಈ ಮೂರು ದೇಶಗಳಲ್ಲಿ ಸಾವಿರಾರು ಜನರು ಮನೆಮಾರು ಕಳೆದುಕೊಂಡಿದ್ದಾರೆ.

ಐಎನ್‌ಎಸ್ ಮಾಗರ್ ಔಷಧ, ಶುಷ್ಕ ವಸ್ತುಗಳು, ಸಿದ್ಧ ಆಹಾರ, ದಿನನಿತ್ಯದ ಅವಶ್ಯಕತೆಗೆ ಬೇಕಾಗಿರುವ ವಸ್ತುಗಳು ಹಾಗೂ ಬಟ್ಟೆ ಬರೆಗಳನ್ನು ಕೊಂಡೊಯ್ಯಲಿದೆ. ‘‘ಆಹಾರ ವಸ್ತುಗಳಿಂದ ಸರಿಸುಮಾರು 1000 ಜನರಿಗೆ 7 ದಿನಗಳ ಕಾಲ ಅಡುಗೆ ಮಾಡಬಹುದು’’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ. ‘‘ಹೆಚ್ಚುವರಿಯಾಗಿ ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದ 500 ಕಿ.ಗ್ರಾಂ. ಔಷಧ ಹಾಗೂ 400 ಟನ್ ಅಕ್ಕಿಯನ್ನು ಕೂಡಾ ಹಡಗಿಗೆ ಹೇರಿಸಲಾಗಿದೆ’’ ಎಂದು ಅವರು ತಿಳಿಸಿದ್ದಾರೆ. ಭಾರತೀಯ ನೌಕಾ ಪಡೆ ಈಗಾಗಲೇ ಮೂರು ಹಡಗುಗಳನ್ನು ಕಳುಹಿಸಿಕೊಟ್ಟಿದೆ. ಐಎನ್‌ಎಸ್ ಸುಜಾತ, ಐಸಿಜಿಎಸ್ ಸಾರಥಿ ಹಾಗೂ ಐಎನ್‌ಎಸ್ ಶಾರ್ದೂಲ್ ಈ ಮೂರು ಹಡಗುಗಳು. ಇದಲ್ಲದೆ 192 ಮಂದಿಯನ್ನು ರಕ್ಷಿಸಿದೆ. ವೈದ್ಯಕೀಯ ಶಿಬಿರದ 1,381 ಜನರಿಗೆ ನೆರವು ಒದಗಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News