ಪನಾಮಾ ವಿರುದ್ಧ ಡ್ರಾ ಸಾಧಿಸಿದ ಬ್ರೆಝಿಲ್

Update: 2019-03-24 18:41 GMT

ಪೊರ್ಟೊ (ಪೋರ್ಚು ಗಲ್), ಮಾ.24: ನೀರಸ ಪ್ರದರ್ಶನ ತೋರಿದ ಐದು ಬಾರಿಯ ವಿಶ್ವ ಚಾಂಪಿಯನ್ ಬ್ರೆಝಿಲ್ ಶನಿವಾರ ಇಲ್ಲಿ ಪನಾಮಾ ವಿರುದ್ಧ ನಡೆದ ಸ್ನೇಹಯುತ ಫುಟ್ಬಾಲ್ ಪಂದ್ಯದಲ್ಲಿ 1-1ರ ಡ್ರಾ ಸಾಧಿಸಿದೆ.

ಈ ಹಿಂದೆ ಬ್ರೆಝಿಲ್ ವಿರುದ್ಧ ಪನಾಮಾ ಯಾವತ್ತೂ ಗೋಲು ಗಳಿಸಿರಲಿಲ್ಲ. ಬ್ರೆಝಿಲ್ ವಿರುದ್ಧ ತಾನಾಡಿದ ಎಲ್ಲ 4 ಪಂದ್ಯಗಳಲ್ಲಿ 16 ಗೋಲುಗಳನ್ನು ಬಿಟ್ಟುಕೊಟ್ಟು ಸೋಲಿನ ಕಹಿ ಅನುಭವಿಸಿತ್ತು.

ಪಂದ್ಯದ 31ನೇ ನಿಮಿಷದಲ್ಲಿ ಬ್ರೆಝಿಲ್ ಮಿಡ್‌ಫೀಲ್ಡರ್ ಲುಕಾಸ್ ಪಕ್ವೆಟಾ ಗೋಲು ಗಳಿಸುವ ಮೂಲಕ ತಂಡಕ್ಕೆ ಮುನ್ನಡೆ ಒದಗಿಸಿಕೊಟ್ಟರು. ಆದರೆ ಈ ಸಂಭ್ರಮ ಬಹಳ ಹೊತ್ತು ಉಳಿಯಲಿಲ್ಲ. 35ನೇ ನಿಮಿಷದಲ್ಲಿ ಎದುರಾಳಿ ಪನಾಮಾ ಪರ ಅಡಾಲ್ಫೊ ಮಚಾಡೊ ಹೆಡರ್ ಮೂಲಕ ಗೋಲು ಬಾರಿಸಿ ಸಮಬಲಗೊಳಿಸಿದರು.

ಇದಾದ ಬಳಿಕ ಬ್ರೆಝಿಲ್ ಪರ ರಿಚರ್ಲಿಸನ್ ಹಾಗೂ ಕೇಸ್‌ಮಿರೊ ದ್ವಿತೀಯಾರ್ಧದಲ್ಲಿ ಗೋಲು ಗಳಿಸುವ ಯತ್ನ ನಡೆಸಿದರೂ ಸಫಲವಾಗಲಿಲ್ಲ. ಜೂನ್ ವೇಳೆ ಬ್ರೆಝಿಲ್‌ನಲ್ಲಿ ನಡೆಯಲಿರುವ ಕೋಪಾ ಅಮೆರಿಕ ಫುಟ್ಬಾಲ್ ಟೂರ್ನಿಯ ಮೇಲೆ ಕಣ್ಣಿಟ್ಟಿರುವ ಮ್ಯಾನೇಜರ್ ಟೈಟ್ ನೇತೃತ್ವದ ಬ್ರೆಝಿಲ್ ಈ ಪಂದ್ಯದಲ್ಲಿ ಸಾಕಷ್ಟು ಯುವ ಆಟಗಾರರಿಗೆ ಅವಕಾಶ ಕಲ್ಪಿಸಿತ್ತು. ಮೂರನೇ ಪಂದ್ಯವಾಡಿದ ಪಕ್ವೆಟಾ, ಎರಡನೇ ಪಂದ್ಯವಾಡಿದ ರಕ್ಷಣಾ ಆಟಗಾರ ಈಡರ್ ಮಿಲಿಟಾವೊ ಹಾಗೂ ಚೊಚ್ಚಲ ಪಂದ್ಯವಾಡಿದ ಅಲೆಕ್ಸ್ ಟೆಲ್ಲೆಸ್ ಯುವಕರು.

ಮಂಗಳವಾರ ಝೆಕ್ ಗಣರಾಜ್ಯ ತಂಡದ ವಿರುದ್ಧ ಆಡಲು ಬ್ರೆಝಿಲ್ ಪ್ರಾಗ್‌ಗೆ ಪ್ರಯಾಣ ಬೆಳೆಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News