ಯಾರೂ ವಾಯುಪಡೆ ದಾಳಿಯ ರಾಜಕೀಯಗೊಳಿಸಬಾರದು, ಲಾಭ ಪಡೆಯಬಾರದು: ಕೇಂದ್ರ ಸಚಿವ ಗಡ್ಕರಿ

Update: 2019-03-25 16:34 GMT

ಹೊಸದಿಲ್ಲಿ, ಮಾ.25: ಪಾಕಿಸ್ತಾನದ ಬಾಲಕೋಟ್ ಮೇಲೆ ವಾಯುಪಡೆ ನಡೆಸಿದ ದಾಳಿಯನ್ನು ಲೋಕಸಭಾ ಚುನಾವಣೆಗೆ ಸಂಪರ್ಕಿಸಬಾರದು ಮತ್ತು ಅದನ್ನು ರಾಜಕೀಯಗೊಳಿಸಬಾರದು ಹಾಗು ಯಾರೂ ಅದರ ಲಾಭ ಪಡೆಯಬಾರದು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಐಎಎನ್ ಎಸ್ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ಕೇಂದ್ರ ಸಚಿವರು, “ನಾನು ಪ್ರಧಾನ ಮಂತ್ರಿ ಹುದ್ದೆಯ ಅಭ್ಯರ್ಥಿಯೂ ಅಲ್ಲ, ಆ ರೇಸ್ ನಲ್ಲೂ ನಾನಿಲ್ಲ” ಎಂದರು.

ಇನ್ನೊಂದು ಬಾರಿಯೂ ನರೇಂದ್ರ ಮೋದಿಯೇ ಪ್ರಧಾನಿಯಾಗಲಿದ್ದಾರೆ ಮತ್ತು ಈ ಬಾರಿ 2014ರಲ್ಲಿ ಸಿಕ್ಕ ಫಲಿತಾಂಶಕ್ಕಿಂತಲೂ ಉತ್ತಮ ಫಲಿತಾಂಶ ಸಿಗಲಿದೆ ಎಂದರು.

ಪಾಕ್ ವಿರುದ್ಧದ ಸರ್ಜಿಕಲ್ ದಾಳಿಯನ್ನು ಚುನಾವಣಾ ವಿಷಯವನ್ನಾಗಿ ಮಾಡಬಾರದು,ಅದರ ಹೆಗ್ಗಳಿಕೆಯನ್ನೂ ಯಾರೂ ಪಡೆದುಕೊಳ್ಳಬಾರದು ಎಂದ ಅವರು,ದಾಳಿಯ ಕುರಿತು ಪ್ರತಿಪಕ್ಷಗಳು ಸಂಶಯ ವ್ಯಕ್ತಪಡಿಸುತ್ತಿದ್ದರೆ ಅದು ಅವುಗಳ ಸಮಸ್ಯೆ ಎಂದರು. ಆದರೆ ಆ ಬಗ್ಗೆ ರಾಜಕೀಯ ನಡೆಸದಂತೆ ತಾನು ಅವುಗಳನ್ನು ಕೋರುತ್ತೇನೆ ಎಂದರು.

ಆಡಳಿತ ಪಕ್ಷವೇಕೆ ತನ್ನ ಚುನಾವಣಾ ಪ್ರಚಾರದಲ್ಲಿ ದಾಳಿಯನ್ನು ಪ್ರಸ್ತಾಪಿಸುತ್ತಿದೆ ಎಂಬ ಪ್ರಶ್ನೆಗೆ ಅವರು,ಭದ್ರತೆಯು ನಮಗೆ ಪರಮೋಚ್ಚವಾಗಿದೆ. ಈ ವಿಷಯವನ್ನು ರಾಜಕೀಯಗೊಳಿಸಬೇಕಿಲ್ಲ. ಭಾರತದಲ್ಲಿಯ ಯಾರಾದರೂ ನಮ್ಮ ಯೋಧರ ಬಲಿದಾನದ ಬಗ್ಗೆ ಶಂಕೆ ವ್ಯಕ್ತಪಡಿಸಿದರೆ,ಯಾರಾದರೂ ಪಾಕಿಸ್ತಾನವು ಮಾತನಾಡುವ ರೀತಿಯಲ್ಲಿ ಮಾತನಾಡಿದರೆ ಇವೆಲ್ಲ ದೇಶದ ಹಿತಾಸಕ್ತಿಗೆ ವಿರುದ್ಧವಾಗುತ್ತವೆ. ಇವೆಲ್ಲ ರಾಷ್ಟ್ರೀಯ ಭದ್ರತೆಯ ವಿಷಯಗಳಾಗಿವೆ ಮತ್ತು ಪ್ರತಿಯೊಬ್ಬರೂ ಒಂದೇ ಧ್ವನಿಯಲ್ಲಿ ಮಾತನಾಡಬೇಕು. ಇಂತಹ ವಿಷಯಗಳಲ್ಲಿ ರಾಜಕೀಯವಿರಬಾರದು ಎಂದು ಉತ್ತರಿಸಿದರು.

ಚುನಾವಣೆಗಳ ಬಳಿಕ ಸರಕಾರ ರಚಿಸಲು ಬಿಜೆಪಿಗೆ ಇತರ ಪಕ್ಷಗಳ ಬೆಂಬಲ ಅಗತ್ಯವಾಗುವ ಸಂದರ್ಭದಲ್ಲಿ ತನ್ನನ್ನು ಮುಂದಿನ ಪ್ರಧಾನಿ ಎಂದು ಬಿಂಬಿಸಬಹುದು ಎಂಬ ಊಹಾಪೋಹಗಳ ಕುರಿತಂತೆ ಅವರು,ತನಗೆ ಅಂತಹ ಮಹತ್ವಾಕಾಂಕ್ಷೆಯಿಲ್ಲ,ಆರೆಸ್ಸೆಸ್‌ಗೂ ಅಂತಹ ಯೋಜನೆಯಿಲ್ಲ. ತಾನು ಯಾವುದೇ ಹುದ್ದೆಗೆ ಸ್ಪರ್ಧಿಯಲ್ಲ,ಹುದ್ದೆಗೆ ಪೈಪೋಟಿಯಲ್ಲೂ ತಾನಿಲ್ಲ ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ಭಾರೀ ಬಹುಮತ ಗಳಿಸುತ್ತದೆ ಮತ್ತು ಮೋದಿ ಮತ್ತೆ ಪ್ರಧಾನಿಯಾಗುತ್ತಾರೆ ಎಂಬ ವಿಶ್ವಾಸದ ಹಿಂದಿನ ಕಾರಣಗಳ ಕುರಿತು ಪ್ರಶ್ನೆಗೆ ಗಡ್ಕರಿ ಅವರು,ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆ,ವಾರ್ಷಿಕ ಐದು ಲ.ರೂ.ವರೆಗೆ ಆದಾಯವಿರುವವರಿಗೆ ಪೂರ್ಣ ತೆರಿಗೆ ವಿನಾಯಿತಿ,ಅಸಂಘಟಿತ ಕ್ಷೇತ್ರಗಳ ಕಾರ್ಮಿಕರಿಗೆ ಖಚಿತ ಮಾಸಿಕ ಪಿಂಚಣಿ ಮತ್ತು ಸಾಮಾನ್ಯ ವರ್ಗಗಳ ಬಡವರಿಗೆ ಶೇ.10 ಮೀಸಲಾತಿಯಂತಹ ಕ್ರಮಗಳನ್ನು ಉಲ್ಲೇಖಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News