ಆಡಳಿತದ ಭೀತಿ; ಜಾಲತಾಣಗಳಲ್ಲಿ ರಾಜಕೀಯ ಅನಿಸಿಕೆಗೆ ಭಾರತೀಯರ ಹಿಂದೇಟು

Update: 2019-03-25 18:07 GMT

► ಮರೀಚಿಕೆಯಾದ ಅಭಿವ್ಯಕ್ತಿ ಸ್ವಾತಂತ್ರ

ಹೊಸದಿಲ್ಲಿ, ಮಾ.25: ಅಂತರ್ಜಾಲ ತಾಣದಲ್ಲಿ ತಮ್ಮ ರಾಜಕೀಯ ನಿಲುವುಗಳನ್ನು ವ್ಯಕ್ತಪಡಿಸಲು ತಾವು ಭಯಪಡುತ್ತಿರುವುದಾಗಿ ಸಮೀಕ್ಷೆಯೊಂದರಲ್ಲಿ ಪಾಲ್ಗೊಂಡ ಅರ್ಧಾಂಶಕ್ಕಿಂತಲೂ ಅಧಿಕ ಮಂದಿ ಭಾರತೀಯರು ತಿಳಿಸಿದ್ದಾರೆಂದು ಅಂತಾರಾಷ್ಟ್ರೀಯ ಸುದ್ದಿಸಂಸ್ಥೆ ರಾಯ್ಟರ್ಸ್‌ ಇನ್ಸ್‌ಟಿಟ್ಯೂಟ್ ಪ್ರಕಟಿಸಿದ ವರದಿ ಹೇಳಿದೆ.

ಆಡಳಿತದ ಕೆಂಗಣ್ಣಿಗೆ ಗುರಿಯಾಗಿ, ತೊಂದರೆಗೆ ಸಿಕ್ಕಿಹಾಕಿಕೊಳ್ಳಬಹುದೆಂಬ ಭಯ ದಿಂದ ತಾವು ಇಂಟರ್‌ನೆಟ್‌ನಲ್ಲಿ ತಮ್ಮ ರಾಜಕೀಯ ಅನಿಸಿಕೆಗಳನ್ನು ವ್ಯಕ್ತಪಡಿಸಲು ಹಿಂದೇಟು ಹಾಕುತ್ತಿರುವುದಾಗಿ ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ.55ರಂದು ಮಂದಿ ತಿಳಿಸಿದ್ದಾರೆಂದು ವರದಿಯು ಬಹಿರಂಗಪಡಿಸಿದೆ.

ಭಾರತೀಯ ಅಂತರ್ಜಾಲ ಬಳಕೆದಾರರು ಸುದ್ದಿ,ವರದಿಗಳ ಬಗ್ಗೆ ಉನ್ನತ ಮಟ್ಟದಲ್ಲಿ ಸ್ಪಂದಿಸುತ್ತಿರುವರಾದರೂ,ಅದೇ ವೇಳೆ ತಮ್ಮ ರಾಜಕೀಯ ಅಭಿಪ್ರಾಯಗಳನ್ನು ಇಂಟರ್‌ನೆಟ್‌ನಲ್ಲಿ ವ್ಯಕ್ತಪಡಿಸುವುದರಿಂದ ಉಂಟಾಗಬಹುದಾದ ಸಂಭಾವ್ಯ ಪರಿಣಾಮಗಳ ಬಗ್ಗೆಯೂ ಆತಂಕಿತರಾಗಿದ್ದಾರೆಂದು ಸಮೀಕ್ಷೆ ತಿಳಿಸಿದೆ.

ತಾವು ತಮ್ಮ ರಾಜಕೀಯ ನಿಲುವುಗಳನ್ನು ವ್ಯಕ್ತಪಡಿಸಿದಲ್ಲಿ ಕುಟುಂಬಿಕರು ಹಾಗೂ ಸ್ನೇಹಿತರು, ತಮ್ಮನ್ನು ವಿಮರ್ಶಿಸುವ ಸಾಧ್ಯತೆಯಿದೆಯೆಂದು ಸಮೀಕ್ಷೆಯಲ್ಲಿ ಪಾಲ್ಗೊಂಡವರ ಪೈಕಿ ಶೇ.49 ಮಂದಿ,ಆತಂಕ ಹೊಂದಿದ್ದರೆ, ಶೇ.50ರಷ್ಟು ಮಂದಿಗೆ ಸಹೋದ್ಯೋಗಿಗಳು ಹಾಗೂ ಇತರ ಪರಿಚಯಸ್ಥರು ತಮ್ಮ ಬಗ್ಗೆ ಏನು ಯೋಚಿಸಿ ಯಾರೆಂದು ಚಿಂತೆಯನ್ನು ವ್ಯಕ್ತಪಡಿಸಿದ್ದಾರೆ.

ಭಾರತದಲ್ಲಿನ ಜನರು ಹೊಂದಿರುವ ಈ ರೀತಿಯ ಆತಂಕದ ಪ್ರಮಾಣವು, ಬ್ರೆಝಿಲ್ ಹಾಗೂ ಟರ್ಕಿಯ ಜನತೆ ಹೊಂದಿರುವ ಇದೇ ರೀತಿಯ ಕಳವಳಗಳಿಗೆ ಸರಿಸಮವಾಗಿದೆ. ಆದರೆ ಅಮೆರಿಕದ ಪ್ರಜೆಗಳಿಗೆೆ ಹೋಲಿಸಿದಲ್ಲಿ, ಇದು ಗಣನೀಯವಾಗಿ ಅಧಿಕವಾಗಿದೆಯೆಂದು ಸಮೀಕ್ಷಾ ವರದಿ ಹೇಳಿದೆ.

ತನ್ನ ಸಮೀಕ್ಷಾ ವರದಿಗೆ ಪೂರಕವಾಗಿ ರಾಯ್ಟರ್ಸ್‌, 2012ರಲ್ಲಿ ರಾಜಕಾರಣಿಯೊಬ್ಬರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಲಾದ, ನಿಂದನಾತ್ಮಕ ಅಥವಾ ಬೆದರಿಕೆಯದ್ದೆಂದು ಪರಿಗಣಿಸಲಾದ ಬರಹಗಳನ್ನು ಪ್ರಸಾರ ಮಾಡಿದ್ದಕ್ಕಾಗಿ 17 ಮಂದಿಯನ್ನು ಬಂಧಿಸಿದ ಘಟನೆಯನ್ನು ಉದಾಹರಿಸಿದೆ. ಕಾಂಗ್ರೆಸ್ ಅಧ್ಯಕ್ಷ ಮನಮೋಹನ್‌ಸಿಂಗ್, ಪ್ರಧಾನಿ ನರೇಂದ್ರ ಮೋದಿ ಹಾಗೂ ಯೋಗಿ ಆದಿತ್ಯನಾಥ್ ಹಾಗೂ ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ನಾಯಕರ ವಿರುದ್ಧ ಬರಹಗಳನ್ನು ಪ್ರಸಾರ ಮಾಡಿದ್ದಕ್ಕಾಗಿ ಜನಸಾಮಾನ್ಯರು ಕಾನೂನು ಕ್ರಮ ಎದುರಿಸಿದ ನಿದರ್ಶನಗಳನ್ನು ಕೂಡಾ ಎಂದು ಸಮೀಕ್ಷಾ ವರದಿ ಉಲ್ಲೇಖಸಿದೆ.

ಸಮೀಕ್ಷೆಯಲ್ಲಿ ಇಂಗ್ಲೀಷ್ ಭಾಷೆಯನ್ನು ಮಾತನಾಡಬಲ್ಲವರಷ್ಟೇ ಪಾಲ್ಗೊಂಡಿದ್ದರಿಂದ ಇದೊಂದು ಹೆಚ್ಚು ವಿಸ್ತೃತವಾದ ಪ್ರಾತಿನಿಧಿಕವಾದ ಸಮೀಕ್ಷೆಯೆಂದು ಪರಿಗಣಿಸಲಾಗದೆಂದು ಅದು ಹೇಳಿದೆ.

ಅಂತರ್ಜಾಲ ತಾಣಗಳಲ್ಲಿ ಪ್ರಸಾರವಾಗುವ ಸುದ್ದಿಗಳ ಬಗ್ಗೆ ಕಾಂಗ್ರೆಸ್ ಬೆಂಬಲಿಗರಿಗಿಂತ ಬಿಜೆಪಿ ಬೆಂಬಲಿಗರು ಹೆಚ್ಚು ವಿಶ್ವಾಸವಿರಿಸಿದ್ದಾರೆಂಬ ಅಂಶ ಕೂಡಾ ಈ ಸಮೀಕ್ಷೆಯಿಂದ ಬೆಳಕಿಗೆ ಬಂದಿದೆ.

ಬಿಜೆಪಿ ಬೆಂಬಲಿಗರ ಪೈಕಿ ಶೇ.45ರಷ್ಟು ಅಂತರ್ಜಾಲತಾಣದ ಸುದ್ದಿಯಲ್ಲಿ ವಿಶ್ವಾಸವಿರಿಸಿದ್ದರೆ, ಯುಪಿಎ ಮೈತ್ರಿಕೂಟವನ್ನು ಬೆಂಬಲಿಸುವ ಶೇ.36 ಮಂದಿ ಮಾತ್ರ ಅನ್ನು ನಂಬುತ್ತಾರೆ. ಆದರೆ ತಾವು ಯಾವುದೇ ಪಕ್ಷದ ಒಲವನ್ನು ಹೊಂದಿಲ್ಲವೆಂದು ಹೇಳಿದವರ ಪೈಕಿ ಶೇ.26 ಮಂದಿ, ಈ ಸುದ್ದಿಗಳಲ್ಲಿ ನಂಬಿಕೆಹೊಂದಿದ್ದಾರೆ.

ಸಮೀಕ್ಷೆಯಲ್ಲಿ ಪಾಲ್ಗೊಂಡವರಲ್ಲಿ ಶೇ.39 ಮಂದಿ, ತಾವು ಹೆಚ್ಚಿನ ಸಮಯ ಬಳಸುವ ಜಾಲತಾಣದಲ್ಲಿನ ಸುದ್ದಿಯಲ್ಲಿ ವಿಶ್ವಾಸವಿರಿಸಿರುವುದಾಗಿ ಹೇಳಿಕೊಂಡರೆ, ಶೇ.36 ಮಂದಿ ಸಾಮಾನ್ಯವಾಗಿ ಹೆಚ್ಚಿನ ಸಂದರ್ಭಗಳಲ್ಲಿ ಜಾಲತಾಣದ ಸುದ್ದಿಗಳನ್ನು ನಂಬುವುದಾಗಿ ಹೇಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುವ ಸುದ್ದಿಗಳ ಬಗ್ಗೆ ಶೇ.34 ಮಂದಿ ವಿಶ್ವಾಸವಿರಿಸಿದ್ದಾರೆ. ಆದರೆ ಶೇ.45ರಷ್ಟು ಮಂದಿ ತಾವು ಜಾಲತಾಣಗಳಲ್ಲಿ ಶೋಧಿಸಿದ ಸುದ್ದಿಗಳನ್ನು ನಂಬುತ್ತಾರೆಂದು ಸಮೀಕ್ಷಾ ವರದಿ ಹೇಳಿದೆ.

ಟೈಮ್ಸ್ ಆಫ್ ಇಂಡಿಯಾ, ಹಿಂದೂಸ್ತಾನ್ ಟೈಮ್ಸ್, ಇಂಡಿಯನ್ ಎಕ್ಸ್‌ಪ್ರೆಸ್, ಸರಕಾರಿ ನಿಯಂತ್ರಣದ ಡಿಡಿ ನ್ಯೂಸ್ ಹಾಗೂ ಎನ್‌ಡಿಟಿವಿ, ಇಂಟರ್‌ನೆಟ್‌ನಲ್ಲಿನ ಅತ್ಯಧಿಕ ವಿಶ್ವಸನೀಯ ಸುದ್ದಿಜಾಲತಾಣಗಳೆಂದು ಸಮೀಕ್ಷಾ ವರದಿ ತಿಳಿಸಿದೆ.

ರಿಪಬ್ಲಿಕ್ ಟಿವಿನಂತಹ ನೂತನ ಸುದ್ದಿತಾಣಗಳ ಬಗ್ಗೆ ಕಡಿಮೆ ಮಟ್ಟದ ವಿಶ್ವಾಸವಿರುವುದಾಗಿ ಸಮೀಕ್ಷೆ ತಿಳಿಸಿದೆ. ಆದಾಗ್ಯೂ ಎನ್‌ಡಿಟಿವಿ ಹಾಗೂ ದಿ ವೈರ್ ಸುದ್ದಿತಾಣಗಳ ಬಗ್ಗೆ ವಿಶ್ವಾಸವಿರುವುದಾಗಿ ಬಿಜೆಪಿ ಹಾಗೂ ಯುಪಿಎ ಬೆಂಬಲಿಗರು ಒಂದೇ ರೀತಿಯಾಗಿ ಒಪ್ಪಿಕೊಂಡಿದ್ದಾರೆಂದು ಸಮೀಕ್ಷಾ ವರದಿಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News