ನಾಗರಿಕತ್ವ ತಿದ್ದುಪಡಿ ಮಸೂದೆ: ಸರಿಯಾದ ರೋಗ ವಿಶ್ಲೇಷಣೆಗೆ ತಪ್ಪು ಔಷಧಿ

Update: 2019-03-26 07:53 GMT

ನಿಮ್ಮ ಅಸ್ಮಿತೆಯೇ, ಐಡೆಂಟಿಟಿಯೇ ನಿಮ್ಮ ಶತ್ರುವಾಗಿ ನೀವು ಬೋನಿನಲ್ಲಿ ಸಿಕ್ಕಿ ಹಾಕಿಕೊಂಡಿರುವಂತಹ ಸ್ಥಿತಿಯನ್ನು ಊಹಿಸಿಕೊಳ್ಳಬಲ್ಲಿರಾ? ನೀವು ಮಾತನಾಡುವ ಭಾಷೆ ಮತ್ತು ನೀವು ಪ್ರಾರ್ಥಿಸುವ ದೇವರೇ ನೀವು ಮೇಜಿನ ಮೇಲೆ ಆಹಾರ ತಂದಿಡುವುದನ್ನು ನಿರ್ಧರಿಸುವ ಮಾನದಂಡ ಆಗುತ್ತದೆಂದರೆ ನಂಬಲಾದೀತೇ?

ಹೌದು, ಎಂದಾದಲ್ಲಿ ನೀವೀಗ ಅಸ್ಸಾಂ, ಅರುಣಾಚಲ ಪ್ರದೇಶ, ತ್ರಿಪುರ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ಮೇಘಾಲಯದಲ್ಲಿ ವಾಸಿಸುತ್ತಿರುವ ಮಿಲಿಯಗಟ್ಟಲೆ ನಾಗರಿಕರ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬಲ್ಲಿರಿ. ಅವರ ಬದುಕು ಈಗ ತಮ್ಮ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ ಮತ್ತು ಆರ್ಥಿಕ ಅವಕಾಶಗಳ ಹುಡುಕಾಟದ ನಡುವೆ ಹಗ್ಗ ಜಗ್ಗಾಟವಾಗಿದೆ. ಅವರೀಗ ಆರ್ಥಿಕ ವಲಸೆ ಹಾಗೂ ನಿರಾಶ್ರಿತರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಜಾರಿಯಾಗಿರುವುದು ಇದಕ್ಕೆಲ್ಲ ಕಾರಣ. 2016ರ ಈ ಮಸೂದೆಯ ಪ್ರಕಾರ ಅಲ್ಲಿ ಆರು ಅಲ್ಪಸಂಖ್ಯಾತ ಧಾರ್ಮಿಕ ಸಮುದಾಯಗಳಾದ ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿ ಅಥವಾ ಕ್ರಿಶ್ಚಿಯನ್ ಸಮುದಾಯಗಳಿಗೆ ಸೇರಿದವರು ಆರು ವರ್ಷಗಳಿಗಿಂತ ಹೆಚ್ಚು ಸಮಯದಿಂದ ಅಲ್ಲಿಯ ನಿವಾಸಿಗಳಾಗಿದ್ದಲ್ಲಿ ಮಾತ್ರ ಅವರು ಭಾರತೀಯ ನಾಗರಿಕತ್ವಕ್ಕೆ ಅರ್ಜಿ ಸಲ್ಲಿಸಬಹುದು.

ಇಲ್ಲಿರುವ ಸಮಸ್ಯೆಗಳಿವು: ಯಾವುದೇ ಸ್ಪಷ್ಟವಾದ ಸಮರ್ಥನೆ ತರ್ಕ ಇಲ್ಲದೆ ಆರ್ಥಿಕ ವಲಸಿಗರಿಗೆ ದೇಶದ ಒಳಕ್ಕೆ ಬರಲು ಅನುಮತಿ ನೀಡುವುದು. ಧರ್ಮಗಳ ಯಾದಿಯಲ್ಲಿ ಇಸ್ಲಾಂ ಧರ್ಮವನ್ನು ಕೈಬಿಟ್ಟಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಇದು ಭಾರತದ ಸಂವಿಧಾನದ 14ನೇ ಪರಿಚ್ಛೇದದ ಉಲ್ಲಂಘನೆಯಾಗಿದ್ದು ಧರ್ಮವನ್ನು ಆಧರಿಸಿ ನಡೆಸುವ ತಾರತಮ್ಯ ಮತ್ತು ದೇಶವೇ ಇಲ್ಲದ (ಸ್ಟೇಟ್‌ಲೆಸ್) ಪೌರರ ಸೃಷ್ಟಿಯಾಗುತ್ತದೆ.

ಸಾಂವಿಧಾನಿಕವಾಗಿ ಸಿಂಧುವಾಗಬೇಕಿದ್ದಲ್ಲಿ ಒಂದು ಕಾನೂನು ಎರಡು ಅಂಶಗಳನ್ನು ಪರಿಗಣಿಸಲೇಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ: ಯಾವ ನೆಲೆಯಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಸ್ಪಷ್ಟಪಡಿಸಬೇಕು. ಅದು ಕೃತಕ ಅಥವಾ ಬೇಕಾಬಿಟ್ಟಿಯಾಗಿರದೆ ತಾರ್ಕಿಕವಾಗಿರಬೇಕು. 2016ರ ಪೌರತ್ವ ತಿದ್ದುಪಡಿ ಮಸೂದೆ (ಸಿಟಿಜನ್ ಶಿಪ್ ಅಮೆಂಡ್ಮೆಂಟ್ ಬಿಲ್-ಸಿಎಬಿ)ಯ ವಿವರಗಳನ್ನು ಓದಿದಾಗ ಮುಸ್ಲಿಂ ಸಮುದಾಯವನ್ನು ಯಾದಿಯಿಂದ ಹೊರಗಿಟ್ಟಿರುವುದು ಉದ್ದೇಶಪೂರ್ವಕವಾಗಿ ಮತ್ತು ಇದೊಂದು ರಾಜಕೀಯ ಕಾರ್ಯಸೂಚಿ(ಅಜೆಂಡಾ)ಯ ಭಾಗ ಎಂದು ಸ್ಪಷ್ಟವಾಗುತ್ತದೆ.

ಇನ್ನೊಂದು ಮುಖ್ಯ ವಿಷಯವೆಂದರೆ ವಲಸಿಗರ ವಾಸದ ಅವಧಿಗೆ 2014ರ ಡಿಸೆಂಬರ್ 31 ಎಂದು ಬೇಕಾಬಿಟ್ಟಿಯಾಗಿ ಕಟ್-ಆಫ್ ದಿನಾಂಕವನ್ನು ನಿರ್ಧರಿಸಿರುವುದು. ಇದರಿಂದಾಗಿ ತನ್ನನ್ನು ಮುಸ್ಲಿಂ ಎಂದು ಹೇಳಿಕೊಳ್ಳುವ ಯಾವುದೇ ವ್ಯಕ್ತಿಗೆ ದೇಶವೇ ಇಲ್ಲದ ನಾಗರಿಕ (ಸ್ಟೇಟ್‌ಲೆಸ್ ಸಿಟಿಜನ್) ಆಗುವ ಅಪಾಯ ಎದುರಾಗುತ್ತದೆ.

ರಾಜಕೀಯ ಪರಿಣಾಮ
ಸರಕಾರ ಸಿಎಬಿಯ ಕರಡನ್ನು ಸಿದ್ಧಪಡಿಸುವಾಗ ತಮ್ಮ ಜೊತೆ ಸಮಾಲೋಚನೆ ನಡೆಸಲಿಲ್ಲವೆಂಬ ಭಾವನೆ ಈಶಾನ್ಯ ರಾಜ್ಯಗಳ ಜನತೆಗೆ ಇದೆ. ವಲಸೆಯ ಪ್ರಶ್ನೆ ಅಲ್ಲಿ ಈಗಾಗಲೇ ಸಾಮಾಜಿಕ ವೈಷಮ್ಯದ ಬೀಜಗಳನ್ನು ಬಿತ್ತಲು ಆರಂಭಿಸಿದೆ; ಬ್ರಹ್ಮಪುತ್ರ ಕಣಿವೆಯಲ್ಲಿ ಅಸ್ಸಾಮಿ ಸ್ಥಳೀಯ ಹಿಂದೂಗಳು ಮತ್ತು ಅಸ್ಸಾಮಿ ಮುಸ್ಲಿಮರ ನಡುವೆ ಸಾಮಾಜಿಕ ಬಿಗಿತ ಕಾಣಿಸಿಕೊಳ್ಳುತ್ತಿದೆ. ಇದು ವಲಸೆ ವಿರೋಧಿ ಚಳವಳಿಯೊಂದಕ್ಕೆ ಹಾದಿ ಮಾಡಿಕೊಟ್ಟಿದೆ. ನೌಕರಿಗಳಿಗಾಗಿ ಹಾಗೂ ಸಂಪನ್ಮೂಲಗಳಿಗಾಗಿ ನಡೆಯುತ್ತಿರುವ ಸ್ಪರ್ಧೆ ಸಾಮಾಜಿಕ ಸಾಮರಸ್ಯವನ್ನು ಹಾಳುಗೆಡವದೆ ಇರುವುದಿಲ್ಲ. ಮುಸ್ಲಿಂ ವಲಸಿಗರ ವಿರುದ್ಧ ಹುಟ್ಟು ಹಾಕಲಾಗುತ್ತಿರುವ ಭಾರೀ ದ್ವೇಷದ ಅಭಿಯಾನವು ದಮನಿತ (ಮುಸ್ಲಿಂ) ಸಮುದಾಯದಿಂದ ಪ್ರತಿ ದಾಳಿ ನಡೆಯುವುದಕ್ಕೆ ಕಾರಣವಾಗಬಹುದು.

ಸಾಮರಸ್ಯ ಸಹಬಾಳ್ವೆ ಸಾಧ್ಯವಾಗಬೇಕಾದರೆ ಮೊದಲನೆಯದಾಗಿ ಸಿಎಬಿ ಸರಿಯಾಗಿ ರಚಿತವಾಗಿಲ್ಲವೆಂದು ನಾವು ಒಪ್ಪಿಕೊಳ್ಳಬೇಕು. ಈಗ ಇರುವ ರೂಪದಲ್ಲಿ ಮಸೂದೆಯಲ್ಲಿ ಒಂದು ಸಮುದಾಯ ವನ್ನು ಅವರ ನ್ಯಾಯಬದ್ಧವಾದ ನಿರಾಶ್ರಿತರ ಹಕ್ಕುಗಳಿಂದ ವಂಚಿಸಲಾಗಿದೆ. ಭಾರತೀಯ ಸಂದರ್ಭದಲ್ಲಿ ಓರ್ವ ನಿರಾಶ್ರಿತ ಎಂದರೆ ಯಾರು ಎಂಬುದನ್ನು ಸ್ಪಷ್ಟವಾಗಿ ನಮೂದಿಸಿ ನಿರಾಶ್ರಿತರ ಒಂದು ಯೋಜನೆಯನ್ನು ರಚಿಸಬೇಕು. ಇದನ್ನು ಸರಿಪಡಿಸಿದ ಬಳಿಕ ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ಬಲಪಡಿಸಬೇಕು. ಈಗಾಗಲೇ ದೇಶದಲ್ಲಿ ಅಕ್ರಮವಾಗಿ ನೆಲೆಸಿರುವ ವಲಸಿಗರ ಪುನರ್ವಸತಿಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಒಂದೊಂದಾಗಿ ಪ್ರಕರಣಗಳನ್ನು ಕೈಗೆತ್ತಿಕೊಂಡು ವಲಸಿಗರಿಗೆ ಸಂಬಂಧಿಸಿದ ದೇಶಗಳ ಸರಕಾರಗಳೊಂದಿಗೆ ಮಾತುಕತೆ ನಡೆಸಿ ಅವರನ್ನು ಮರಳಿ ಅವರ ದೇಶಕ್ಕೆ ಕಳುಹಿಸಲು ಕ್ರಮಗಳನ್ನು ತೆಗೆದು ಕೊಳ್ಳಬೇಕು. ತಮ್ಮ ಮಾತೃಭೂಮಿಯೊಂದಿಗೆ ಎಲ್ಲ ಸಂಬಂಧಗಳನ್ನು ಕಡಿದುಕೊಂಡಿರುವ ವಲಸಿಗರಿಗೆ ಭಾರತೀಯ ಪೌರತ್ವ ನೀಡಲು ಬೇಕಾದ ಕ್ರಮಗಳನ್ನು ತೆಗೆದುಕೊಳ್ಳಬೇಕು. ಈಶಾನ್ಯ ಹಾಗೂ ವಾಯುವ್ಯ ರಾಜ್ಯಗಳ ಗಡಿಗಳಲ್ಲಿ ಸೂಕ್ತ ತಡೆಬೇಲಿಗಳನ್ನು ನಿರ್ಮಿಸಿ ಇನ್ನು ಮುಂದಕ್ಕೆ ಅಕ್ರಮ ವಲಸಿಗರು ದೇಶದೊಳಕ್ಕೆ ನುಸುಳದಂತೆ ನೋಡಿಕೊಂಡಲ್ಲಿ ವಲಸಿಗರ ಪ್ರವಾಹ ತಡೆಯಲು ಸಾಧ್ಯವಾಗಬಹುದು. ವಲಸಿಗ ನಿರಾಶ್ರಿತರನ್ನು ಮಾನವತೆಯ ಪಗಡೆಯಾಟದಲ್ಲಿ ದಾಳಗಳಂತೆ ಬಳಸದೆ ನಮ್ಮ ಸಂಸ್ಕೃತಿಗಳ ವಿವಿಧತೆಯನ್ನು ಸಂಭ್ರಮಿಸುವುದು ನಮ್ಮ ಎಲ್ಲ ಪ್ರಯತ್ನಗಳ ಕೇಂದ್ರ ಬಿಂದುವಾಗಲಿ.

ಕೃಪೆ: countercurrents   

Writer - ಗೌತಮ್ ಜಯಸೂರ್ಯ

contributor

Editor - ಗೌತಮ್ ಜಯಸೂರ್ಯ

contributor

Similar News