ಜೆಎನ್‌ಯು ಕುಲಪತಿ ಮನೆಗೆ ನುಗ್ಗಿ ಅವರ ಪತ್ನಿಗೆ ಮುತ್ತಿಗೆ ಹಾಕಿದ ವಿದ್ಯಾರ್ಥಿಗಳು: ಆರೋಪ

Update: 2019-03-26 05:05 GMT

ಹೊಸದಿಲ್ಲಿ, ಮಾ.26: ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯ(ಜೆಎನ್‌ಯು)ದ ಕುಲಪತಿ ಎಂ.ಜಗದೀಶ್ ಕುಮಾರ್ ನಿವಾಸಕ್ಕೆ ಸೋಮವಾರ ಸಂಜೆ ವಿದ್ಯಾರ್ಥಿಗಳು ಮುತ್ತಿಗೆ ಹಾಕಿದ್ದು, ಕುಮಾರ್ ಅವರ ಪತ್ನಿಯನ್ನು ಹಲವು ಗಂಟೆಗಳ ಕಾಲ ಕೂಡಿ ಹಾಕಿದ್ದಾರೆ ಎಂದು ಆಪಾದಿಸಲಾಗಿದೆ.

ಈ ಶೈಕ್ಷಣಿಕ ವರ್ಷದಿಂದ ಆರಂಭಿಸಿರುವ ಆನ್‌ಲೈನ್ ಪ್ರವೇಶ ಪರೀಕ್ಷೆ ಪದ್ಧತಿಯ ವಿರುದ್ಧ ಏಳು ವಿದ್ಯಾರ್ಥಿಗಳು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಆದರೆ ವಿದ್ಯಾರ್ಥಿ ಬೇಡಿಕೆಗಳನ್ನು ಈಡೇರಿಸುವ ಕುರಿತು ಮಾತುಕತೆಗೆ ಆಹ್ವಾನಿಸುತ್ತಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿಗಳ ಗುಂಪು ಕುಲಪತಿಯವರ ನಿವಾಸಕ್ಕೆ ತೆರಳಿತ್ತು ಎನ್ನಲಾಗಿದೆ. ಕಳೆದ ವಾರ ಕುಲಪತಿ ಭೇಟಿಗೆ ತೆರಳಿದ್ದಾಗ, ಸಮಸ್ಯೆ ಆಲಿಸುವ ಬದಲು ಸಿಹಿ ವಿತರಿಸಿ ವಿದ್ಯಾರ್ಥಿಗಳನ್ನು ಕಳುಹಿಸಿಕೊಟ್ಟಿದ್ದರು ಎಂದು ತಿಳಿದುಬಂದಿದೆ.

ಸೋಮವಾರ ಸಂಜೆ ಕುಲಪತಿ ನಿವಾಸದಲ್ಲಿ ಇಲ್ಲದಿದ್ದಾಗ ವಿದ್ಯಾರ್ಥಿಗಳು ಮನೆಗೆ ನುಗ್ಗಿ ಕುಲಪತಿ ಪತ್ನಿಗೆ ಮುತ್ತಿಗೆ ಹಾಕಿದರು ಎನ್ನಲಾಗಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಬಳಿಕ ಪೊಲೀಸರು ಹಾಗೂ ವಿವಿಯ ಇತರ ಪ್ರೊಫೆಸರ್‌ಗಳ ಪತ್ನಿಯರು ಇವರ ನೆರವಿಗೆ ಬಂದರು ಎಂದು ಪ್ರಾಧ್ಯಾಪಕರೊಬ್ಬರು ಹೇಳಿದ್ದಾರೆ. ಈ ಅನಿರೀಕ್ಷಿತ ಮುತ್ತಿಗೆಯಿಂದ ಆಘಾತಗೊಂಡಿರುವ ಕುಮಾರ್ ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

"ಸೋಮವಾರ ಸಂಜೆ ನೂರಾರು ಮಂದಿ ವಿದ್ಯಾರ್ಥಿಗಳು ಜೆಎನ್‌ಯು ನಿವಾಸಕ್ಕೆ ನುಗ್ಗಿ, ಪತ್ನಿಯನ್ನು ಮನೆಯೊಳಗೆ ಹಲವು ಗಂಟೆ ಕಾಲ ಕೂಡಿಹಾಕಿದರು. ನಾನು ಸಭೆಯೊಂದರ ಸಂಬಂಧ ಹೊರಗೆ ಹೋಗಿದ್ದೆ. ಇದು ಪ್ರತಿಭಟನೆಯ ವಿಧಾನವೇ? ಮನೆಯಲ್ಲಿ ಒಂಟಿ ಮಹಿಳೆಯನ್ನು ಭೀತಿಪಡಿಸುವುದೇ? ಎಂದು ಕುಮಾರ್ ಟ್ವಿಟ್ಟರ್‌ನಲ್ಲಿ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News