ನಿರುದ್ಯೋಗ ಸಮಸ್ಯೆಯ ಬಗ್ಗೆ ಹೆಚ್ಚಿನ ಗಮನ ನೀಡಲಾಗುತ್ತಿಲ್ಲ

Update: 2019-03-26 11:26 GMT

ಹೊಸದಿಲ್ಲಿ, ಮಾ.26: ನಿರುದ್ಯೋಗ ಸಮಸ್ಯೆಯ ಬಗ್ಗೆ ದೇಶದಲ್ಲಿ ಹೆಚ್ಚಿನ ಗಮನ ನೀಡಲಾಗುತ್ತಿಲ್ಲದೇ ಇರುವುದು ಕಳವಳಕಾರಿ ಎಂದು ತಮ್ಮ ಹೊಸ ಕೃತಿ `ದಿ ಥರ್ಡ್ ಪಿಲ್ಲರ್' ಬಗ್ಗೆ ಎನ್‍ಡಿಟಿವಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಗವರ್ನರ್  ರಘುರಾಮ್ ರಾಜನ್ ಹೇಳಿದ್ದಾರೆ.

“ಉನ್ನತ  ಶಿಕ್ಷಣ ಸಂಸ್ಥೆಗಳಾದ ಐಐಎಂ ಮುಂತಾದವುಗಳಲ್ಲಿ ಶಿಕ್ಷಣ ಪಡೆದವರಿಗೆ ದೊಡ್ಡ ಉದ್ಯೋಗಗಳು ಲಭಿಸುತ್ತವೆ. ಆದರೆ ಹೈಸ್ಕೂಲ್, ಕಾಲೇಜು ಶಿಕ್ಷಣ ಪಡೆದವರಿಗಲ್ಲ'' ಎಂದು ಹೇಳಿದ ರಘುರಾಮ್ ರಾಜನ್, ದೇಶದ ನಿರುದ್ಯೋಗ ಸಮಸ್ಯೆಯ ಬಗ್ಗೆ ಪರಾಮರ್ಶಿಸಲು ತಜ್ಞರ ಸ್ವತಂತ್ರ ಸಮಿತಿಯೊಂದರ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ದೇಶದಲ್ಲಿನ ಉದ್ಯೋಗ ಕುರಿತಾದ ಅಂಕಿಅಂಶಗಳಲ್ಲಿ ಇನ್ನಷ್ಟು ಸುಧಾರಣೆ ತರುವ ಬಗ್ಗೆಯೂ ಅವರು ಒತ್ತಿ ಹೇಳಿದರು.

ರಾಷ್ಟ್ರೀಯತೆಯ ಭಾವನೆ ಕೆರಳಿಸುವ ಆಂದೋಲನಗಳು ದೇಶದಲ್ಲಿ ಉದ್ವಿಗ್ನತೆ ಸೃಷ್ಟಿಸುವುದರ ಇತರ ದೇಶಗಳೊಂದಿಗೂ ಉದ್ವಿಗ್ನತೆಗೆ ಕಾರಣವಾಗಬಹುದು ಎಂದು ಅವರು ಎಚ್ಚರಿಸಿದರು.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ನೀಡಿರುವ ಕನಿಷ್ಠ ಆದಾಯದ ಭರವಸೆ ಬಗ್ಗೆ ಪ್ರತಿಕ್ರಿಯಿಸಿದ ರಘುರಾಮ್ ರಾಜನ್, ಇಲ್ಲಿ ಹೆಚ್ಚಿನ ವಿವರಗಳು ಅಗತ್ಯವಿದೆ, ಇದು ಬೇರೆಯೇ ಯೋಜನೆಯೇ ಅಥವಾ ಈಗಿನ ಕೆಲವೊಂದು ಯೋಜನೆಗಳಿಗೆ ಪರ್ಯಾಯವೇ ಎಂಬ ಬಗ್ಗೆ ಮಾಹಿತಿ ಬೇಕಿದೆ ಎಂದರು ``ಬಡವರಿಗೆ ನೇರವಾಗಿ ಹಣ ನೀಡುವುದು ಅವರನ್ನು ಸಬಲೀಕರಣಗೊಳಿಸುವ ಒಂದು ವಿಧಾನ ಎಂದು  ನಾವು ಈ ಹಿಂದೆ ಕೂಡ ನೋಡಿದ್ದೇವೆ. ಆ ಹಣವನ್ನು ಅವರು ತಮ್ಮ ಅಗತ್ಯತೆಗಳಿಗೆ ಬಳಸಬಹುದು ಆದರೆ ಈ ಯೋಜನೆ  ಯಾವ ಇತರ ಯೋಜನೆಗಳಿಗೆ ಪರ್ಯಾಯವಾಗುವುದು ಎಂದು ತಿಳಿಯಬೇಕಿದೆ,'' ಎಂದರು.

ನಮ್ಮ ದೇಶೀಯ ಆರ್ಥಿಕತೆ ಉತ್ತಮವಾಗಬೇಕು. ಇದೇ ನಮ್ಮ ಚುನಾವಣೆಯಲ್ಲಿ ಮುಖ್ಯ ವಿಷಯವಾಗಬೇಕು. ಚೀನಾ ಕೂಡ ಬಲಿಷ್ಠ ಆರ್ಥಿಕತೆಗೆ ಮೊದಲು ಒತ್ತು ನೀಡಿತ್ತು. ಈಗ ಅವರ ಸೇನೆ ಮತ್ತು ರಕ್ಷಣಾ ವ್ಯವಸ್ಥೆಯೂ ಬಲಗೊಂಡಿದೆ ಎಂದು ರಘುರಾಮ್ ರಾಜನ್ ಹೇಳಿದರು.

ಅಮಾನ್ಯೀಕರಣ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಅವರು ಹಿಂದಕ್ಕೆ ಹೋಗಿ ಆ ನಿರ್ಧಾರ ಹೇಗೆ ಕೈಗೊಳ್ಳಲಾಯಿತು, ಅದರಿಂದ  ಸರಕಾರವೇನು ಪಾಠ ಕಲಿತಿದೆ ಎಂಬ ಆತ್ಮಾವಲೋಕನ  ನಡೆಯಬೇಕಿದೆ ಎಂದರು.

ಸರಕಾರ ಮತ್ತು ಖಾಸಗಿ ರಂಗದ ನಡುವಿನ ವ್ಯವಹಾರಗಳಲ್ಲಿ ಪಾರದರ್ಶಕತೆ ಆಗತ್ಯವಿದೆ ಎಂದೂ ರಘುರಾಮ್ ರಾಜನ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News