ರಾಷ್ಟ್ರಪ್ರಭುತ್ವ ಮತ್ತು ಮಾನವತಾವಾದ

Update: 2019-03-26 19:02 GMT

ತನ್ನ ರಾಷ್ಟ್ರ ಮಾತ್ರ ಶ್ರೇಷ್ಠವೆಂಬ ವ್ಯಸನಕ್ಕೆ ಸಿಕ್ಕಿ ನರಳಿದ ಯುರೋಪು ಜಗತ್ತಿನ ಕಣ್ಣು ತೆರೆಸಬೇಕಿತ್ತು. ಹಾಗಾಗಲಿಲ್ಲ ಎಂಬುದು ಇತಿಹಾಸದ ಕ್ರೂರವ್ಯಂಗ್ಯ. 21ನೇ ಶತಮಾನದ ಹೊತ್ತಿಗೆ ರಾಷ್ಟ್ರಭಕ್ತಿಯೆಂಬುದು ಅನೇಕ ದೇಶಗಳ ಮಟ್ಟಿಗೆ ಶ್ರೇಷ್ಠ ರಾಷ್ಟ್ರ ಕಟ್ಟುವ ಸಾಧನವೆಂಬಂತೆ ಬಳಕೆಯಾಗುತ್ತಿರುವುದನ್ನು ನೋಡಿದರೆ ಅಸಂಖ್ಯಾತ ಹಿಟ್ಲರ್‌ಗಳು ಹುಟ್ಟಲು ತವಕಿಸುತ್ತಿರು ವಂತೆ ಕಾಣುತ್ತದೆ. ಇದೇ ಸಮಸ್ಯೆ ಇಂದು ಮನುಕುಲದ ಅಳಿವು ಉಳಿವಿನ ಪ್ರಶ್ನೆಯಾಗಿ ಕಾಡುತ್ತಿದೆ.

ದಶಕದ ಹಿಂದೆ ರಾಷ್ಟ್ರೀಯತೆಗಳ ಕುರಿತು ಪಿಎಚ್.ಡಿ. ಪದವಿಗಾಗಿ ಪ್ರಬಂಧ ಬರೆಯುತ್ತಿದ್ದ ನನಗೆ ಟಾಗೂರರು ಎತ್ತಿದ್ದ ಪ್ರಶ್ನೆಗಳನ್ನು ಬೈಪಾಸು ಮಾಡುವುದು ಸಾಧ್ಯವಾಗಿರಲಿಲ್ಲ. ಹಾಗೆ ಬೈಪಾಸು ಮಾಡಿ ಪ್ರಬಂಧ ಮಂಡಿಸುವುದು ಸಂಶೋಧನೆಯ ದೃಷ್ಟಿಯಿಂದ ಅಪರಾಧವೆಂಬಂತೆ ಗುರುಗಳಾದ ಡಾ.ರಹಮತ್ ತರೀಕೆರೆ ಹೇಳುತ್ತಿದ್ದರು. ರಾಷ್ಟ್ರೀಯತೆಗಳನ್ನು ಸಮರ್ಥಿಸುವ ಹೊಣೆ ಹೊತ್ತವರಂತೆ ವರ್ತಿಸುತ್ತಿದ್ದ ನಮಗೆ, ರಾಷ್ಟ್ರಪ್ರಭುತ್ವಗಳ ಕುರಿತು ಟಾಗೂರರಿಗಿದ್ದ ಆಕ್ರೋಶ ಸುಲಭಕ್ಕೆ ಅರ್ಥವಾಗಿರಲಿಲ್ಲ. ಯೂರೋಪಿನ ಉದಾರವಾದಿ ಚಿಂತಕರ ಪರಿಚಯವಿದ್ದ ಟಾಗೂರರಿಗೆ ಆಧುನಿಕ ರಾಷ್ಟ್ರಗಳು ಮನುಷ್ಯನನ್ನು ಕುಬ್ಜಗೊಳಿಸಿ ವಿನಾಶದೆಡೆಗೆ ಕರೆದೊಯ್ಯಬಹುದೆಂಬ ಎಚ್ಚರ 1916ರ ಹೊತ್ತಿಗೆ ಮೂಡಿದ್ದಂತೆ ಕಾಣುತ್ತದೆ. ಜಪಾನ್ ಪ್ರವಾಸದ ಹೊತ್ತಿನಲ್ಲಿ ಅವರು ಬರೆದ ನ್ಯಾಶನಲಿಸಂ ಕೃತಿ ಗಮನಾರ್ಹ. ರಾಷ್ಟ್ರಪ್ರಭುತ್ವವೆಂಬ ಯುರೋಪಿನ ಆಧುನಿಕ ಅನ್ವೇಷಣೆಯು, ಡಾರ್ವಿನ್ನನ(ವಿಕಾಸವಾದದಲ್ಲಿ ಪ್ರತಿಪಾದಿಸಿದ) ಬಲಿಷ್ಠ ಜೀವಿಗಳು ಮಾತ್ರ ಬದುಕುಳಿಯುತ್ತವೆ ಎಂಬ ಮೃಗತತ್ವದ ಆಧಾರದ ಮೇಲೆ ರೂಪುಗೊಂಡಂತಿದೆ ಎಂಬ ಅಂಶವನ್ನು ಟಾಗೂರ್ ಮನಗಂಡಿದ್ದರು. ಪ್ರತಿ ರಾಷ್ಟ್ರವೂ ಇನ್ನೊಂದು ರಾಷ್ಟ್ರವನ್ನು ಅದುಮಿ ತುಳಿದು ಮೇಲೇರಲು ಪ್ರಯತ್ನಿಸುತ್ತದೆ. ಈ ಪ್ರಯತ್ನದಲ್ಲಿ ಮನುಷ್ಯನೆಂಬ ಜೀವಿ ಪ್ರಭುತ್ವದ ಮುಂದೆ ತೃಣ ಮಾತ್ರನಾಗುತ್ತಾನೆ. ಆಡಳಿತವು ಯಂತ್ರರೂಪಿಯಾಗುತ್ತದೆ ಎಂದು ಭಾವಿಸಿದ್ದರು. ಟಾಗೂರರು ಊಹಿಸಿದಂತೆ, ಮಹಾಯುದ್ಧದ ಕಡೆಯಲ್ಲಿ ಹಿರೋಶಿಮಾದ ಮೇಲೆ ಎರಡು ಬಾಂಬೆಸೆದು ಮನುಷ್ಯ ನಾಗರಿಕತೆಯನ್ನು ಬೆಚ್ಚಿಬೀಳಿಸಿ ದಿಗ್ಭ್ರಮೆಯಲ್ಲಿ ನಿಲ್ಲಿಸಿದ ಅಮೆರಿಕ ಅಂದಿನಿಂದ ಜಗತ್ತನ್ನು ಆಳುತ್ತಿದೆ.ತನ್ನ ವಿಲಾಸಿ ಸಂಸ್ಕೃತಿಯನ್ನು ಜಗತ್ತಿಗೆ ಮಾದರಿಯೆಂಬಂತೆ ಬಿಂಬಿಸಿ ಮನುಕುಲವನ್ನು ನಾಶದ ಕಡೆಗೆ ವೇಗವಾಗಿ ಎಳೆದೊಯ್ಯುತ್ತಿರುವವರ ನಾಯಕತ್ವವನ್ನೂ ವಹಿಸಿಕೊಂಡಿದೆ.

 ಟಾಗೂರರ ಹಿತೈಷಿಯೂ ಆಗಿದ್ದ ಐರಿಷ್ ಮೂಲದ ಕವಿ ಡಬ್ಲ್ಯುಬಿ ಯೇಟ್ಸ್, ರಾಷ್ಟ್ರೀಯತೆಗಳು ರಾಷ್ಟ್ರ ಪ್ರಭುತ್ವಗಳಾಗುವ ಪ್ರಕ್ರಿಯೆಯನ್ನು ರೂಪಕಾತ್ಮಕವಾಗಿ ವಿವರಿಸಿದ್ದಾನೆ. ‘‘ಕುದುರೆಯ ಮೇಲೆ ಕೂತವನು ನೆಲದ ಮೇಲೆ ನಿಂತವನಿಗೆ ಬಾರುಕೋಲಿನಿಂದ ಬಾರಿಸುತ್ತಾನೆ. ನೆಲದ ಮೇಲೆ ನಿಂತು ಹಕ್ಕು ಪ್ರತಿಪಾದಿಸುವವನಿಗೂ ಕುದುರೆಯೇರುವ ಅವಕಾಶ ಬರುತ್ತದೆ, ಆಗ ಆತನ ಕೈಗೂ ಬಾರುಕೋಲು ಬರುತ್ತದೆ’’ ಎನ್ನುತ್ತಾನೆ. ಈ ರೂಪಕ ಪ್ರಜ್ಞೆ ಕೇವಲ ಕಾವ್ಯದ ಅಲಂಕಾರಕ್ಕೆ ಬಳಕೆಯಾಗುತ್ತದೆ ಎಂದು ತರಗತಿಗಳಲ್ಲಿ ಕಲಿಸಲಾಗುತ್ತದೆ. ಆದರೆ ಅದು ಪ್ರಚ್ಛನ್ನರೂಪಿ ರಾಜಕೀಯ ಅಭಿವ್ಯಕ್ತಿಯೂ ಆಗಿರಬಲ್ಲುದು. ಆಳುವ ಅರಸನನ್ನು ವಿಮರ್ಶಾತ್ಮಕವಾಗಿ ನೋಡಲು ಕನ್ನಡ ಕವಿಗಳು ರೂಪಕಗಳನ್ನು ಹೀಗೆ ಬಳಸಿದ್ದಾರೆ. ಕವಿ ಯೇಟ್ಸ್ ಕಣ್ಣಿಗೆ ಬರೀ ಐರ್ಲೆಂಡಿನ ರಾಷ್ಟ್ರೀಯವಾದಿ ಹೋರಾಟಗಾರರಷ್ಟೇ ಹೀಗೆ ಕಂಡಿರಲು ಸಾಧ್ಯವಿಲ್ಲ. ಎಲ್ಲ ರಾಷ್ಟ್ರವಾದಿ ಹೋರಾಟಗಾರರು ಕಂಡಿರಬೇಕು.

ಇಷ್ಟಕ್ಕೂ ರಾಷ್ಟ್ರಗಳ ಹುಟ್ಟಿನ ಧಾತುಗಳಿರುವುದೇ ನೆನಪುಗಳನ್ನು ನಿರ್ಮಿಸಿಕೊಳ್ಳುವಲ್ಲಿ. ತನ್ನ ನೆನಪು ಎಷ್ಟು ದೀರ್ಘವಾದುದು ಮತ್ತು ಗಾಢವಾದುದು ಎಂಬುದರ ಆಧಾರದ ಮೇಲೆ ರಾಷ್ಟ್ರ್ಟ್ರೀಯತೆಗಳ ಹೋರಾಟಗಳಿಗೆ ಅಧಿಕೃತತೆ ಸಿಗುತ್ತದೆ.ಭಾಷೆ, ಸಂಸ್ಕೃತಿ, ಬುಡಕಟ್ಟು ಮತ್ತು ಭೌಗೋಳಿಕ ನೆನಪುಗಳನ್ನು ಆಧರಿಸಿ ರಾಷ್ಟ್ರಗಳು ನಿರ್ಮಾಣವಾಗುತ್ತವೆೆ. ಶ್ರೇಷ್ಠ ಹುಟ್ಟನ್ನು ಆರೋಪಿಸಿಕೊಂಡ ನೆನಪುಗಳ ಸಂಸ್ಕೃತಿಗಳು ಸುಲಭವಾಗಿ ಗೋರಾನಂಥವರನ್ನು ಸೃಷ್ಟಿಸುತ್ತವೆ ಎಂಬುದನ್ನು ಟಾಗೂರರು ಪರೋಕ್ಷವಾಗಿ ವಿವರಿಸುತ್ತಾರೆ.ಗೋರಾ ಕಾದಂಬರಿಯು ಕೇವಲ ವ್ಯಕ್ತಿಯೊಬ್ಬನ ಕಥನವಾಗದೆ ರಾಷ್ಟ್ರವೊಂದರ ಕಥನವಾಗಿಯೂ ನಿರೂಪಿತಗೊಳ್ಳುತ್ತದೆ. ನೆನಪು ಆತ್ಮವಿಶ್ವಾಸದ ಬದಲು ಅಹಂಕಾರವನ್ನು ಹುಟ್ಟಿಸುತ್ತದೆ ಮತ್ತು ಅನ್ಯರನ್ನು ರಾಷ್ಟ್ರದ ಹೆಸರಲ್ಲಿ ಕೊಲ್ಲಲು ಪರವಾನಿಗೆ ನೀಡುತ್ತದೆ ಎಂಬುದನ್ನು ಹಿಟ್ಲರ್ ಜಗತ್ತಿಗೆ ತೋರಿಸಿದ. ಗೋರಾನಿಗೆ ತನ್ನ ಹುಟ್ಟು ತಾನು ಭಾವಿಸಿದಂತೆ ಶ್ರೇಷ್ಠತಮವಾದುದಲ್ಲ, ಶ್ರೇಷ್ಠವೆಂದು ಭಾವಿಸುವುದು ಮತ್ತೊಬ್ಬರನ್ನು ಕೀಳರಿಮೆಗೆ ದೂಡಲು ಅಥವಾ ಹಂಗಿಸಿ ಚೈತನ್ಯವನ್ನೇ ನಾಶ ಮಾಡಲು ಎಂಬ ಅರಿವು ಬಹಳ ಬೇಗ ಹುಟ್ಟುತ್ತದೆ. ಒಲಿಂಪಿಕ್ ಕ್ರೀಡಾಳುಗಳ ಸಮೇತ ಅನೇಕರು ಹಿಟ್ಲರನಿಗೂ ಗರ್ವಭಂಗ ಮಾಡುತ್ತಾರೆ. ಆದರೆ ಬಲಿಷ್ಠ ರಾಷ್ಟ್ರಪ್ರಭುತ್ವವೊಂದರ ನಾಯಕನಿಗೆ ಅಷ್ಟು ಸುಲಭಕ್ಕೆ ವಿವೇಕ ಮೂಡುವುದಿಲ್ಲ. ರಾಷ್ಟ್ರವಾದಿ ಅಹಂಕಾರ ಮಣಿಯಲು ಜರ್ಮನಿಯ ಸೋಲು ಮತ್ತು ಹಿಟ್ಲರನ ಆತ್ಮಹತ್ಯೆಗಳು ಸಂಭವಿಸಬೇಕಾಗಿತ್ತು. ಯುರೋಪಿನಲ್ಲಿ, ರಾಷ್ಟ್ರಪ್ರಭುತ್ವಗಳ ಮೇಲಾಟದಲ್ಲಿ ಮನುಷ್ಯ ಹುಳವಾಗಿ ನರಳುತ್ತಿದ್ದ ರೀತಿಯನ್ನು, ತನ್ನ ಚೌಕಟ್ಟಿನೊಳಗೆ ಕೂರದ ಸಂಸ್ಕೃತಿಗಳನ್ನು ಅಮಾನುಷವಾಗಿ ಹೊರದಬ್ಬುವ ಅಥವಾ ಇಲ್ಲವಾಗಿಸುವ ಹಿಂಸಾತ್ಮಕ ಪ್ರಕ್ರಿಯೆಯನ್ನು ಟಾಗೂರ್ ಊಹಿಸಿದ್ದಾರೆ. ಹಿಂದಿನ ಮೂರು ಶತಮಾನಗಳಲ್ಲಿ ಬಹುಪಾಲು ಉದಾರವಾದಿ ಚಿಂತಕರು ವಿಶ್ವಮಾನವತೆಯನ್ನು ಮತ್ತು ಸಹಕಾರ ತತ್ವದ ಮೇಲೆ ರೂಪುಗಂಡ ಜಾಗತಿಕ ಆಡಳಿತವನ್ನು ಪ್ರತಿಪಾದಿಸಿದರು.ಲೆನಿನ್ ಅಂತರ್‌ರಾಷ್ಟ್ರೀಯವಾದವನ್ನು ಪ್ರತಿಪಾದಿಸಿದ. ಮೊದಲ ಮಹಾಯುದ್ಧದಿಂದ ಆಘಾತಕ್ಕೊಳಗಾಗಿದ್ದ ಪ್ರಮುಖ ರಾಷ್ಟ್ರಗಳು ಸೇರಿ ಲೀಗ್ ಆಫ್ ನೇಶನ್ ಸ್ಥಾಪಿಸಿಕೊಂಡವು. ಹಿಟ್ಲರನ ಉಗಮದೊಂದಿಗೆ ಇದೂ ಸಹ ದುರ್ಬಲಗೊಂಡಿತು. ಇದಿಷ್ಟು ಪ್ರಕ್ರಿಯೆಗಳನ್ನು ಗಮನಿಸಿದ್ದ ಕುವೆಂಪು ಅವರು ಕನ್ನಡ-ಭಾರತ ಮತ್ತು ವಿಶ್ವದ ಸಂಬಂಧಗಳು ಹೇಗಿರಬೇಕು ಎಂದು ವಿಶ್ಲೇಷಿಸಿದ್ದಾರೆ.ಕುವೆಂಪು ಕನ್ನಡತನವು ವಿಶಿಷ್ಟವಾಗುತ್ತಾ ವಿಶ್ವಾತ್ಮಕವಾಗುವ ಸೂತ್ರಗಳನ್ನು ಮಂಡಿಸಿದ್ದಾರೆ. ಅವರ ‘ಮನುಜಮತ-ವಿಶ್ವಪಥ’ ಸೂತ್ರ ಇದಕ್ಕೆ ಅತ್ಯುತ್ತಮ ಉದಾಹರಣೆ. ‘ಎಲ್ಲಾದರೂ ಇರು, ಎಂತಾದರೂ ಇರು’ ಎಂದು ಕರೆನೀಡುವ ಪದ್ಯವೂ ಇದನ್ನೇ ಹೇಳುತ್ತದೆ.ಅವರ ರಾಷ್ಟ್ರಪ್ರಭುತ್ವದ ಕುರಿತಾದ ಪರಿಕಲ್ಪನೆಯು ವಿಶ್ವಕಲ್ಯಾಣದ ಆಶಯಗಳಿಗೆ ಪೂರಕವಾಗಿದೆ. ತನ್ನತನವನ್ನು ಬಿಟ್ಟುಕೊಡದ, ನೆಲೆಸಿದ ನಾಡುಗಳಿಗೆ ಮಗ್ಗುಲ ಮುಳ್ಳಾಗದೆ ಒಳಗೊಂಡು ಬಾಳ್ವೆ ನಡೆಸುವ ಆರೋಗ್ಯಕರ ರಾಷ್ಟ್ರವೊಂದನ್ನು ಕಟ್ಟುವುದು ಹೇಗೆ ಎಂದು ಸೂತ್ರ ರೂಪಿಸಿದ್ದಾರೆ. ಕನ್ನಡಿಗನೊಬ್ಬ ಬಂಗಾಳಕ್ಕೋ ಅಥವಾ ಹೊರ ದೇಶಕ್ಕೋ ಹೋದರೆ ಅಲ್ಲಿ ಹೊರಗಿನವನಾಗಿ ಬದುಕಬಾರದು ಜೊತೆಗೆ ಕನ್ನಡತ್ವದ ವಿಶಿಷ್ಟತೆಯನ್ನೂ ಬಿಟ್ಟು ಕೊಡಬಾರದು ಎಂದು ಹೇಳುತ್ತಾರೆ. ‘ಮನುಷ್ಯ ಹಕ್ಕಿಗಳ ಹಾಗೆ ನಿರ್ದಿಗಂತವಾಗಿ, ಗೋಡೆಗಳಿಲ್ಲದ ಬಾಳ್ವೆಯನ್ನು ನಡೆಸಲು ಸಾಧ್ಯವಿದೆಯಲ್ಲ’ ಎನ್ನುತ್ತಾರೆ. ಕುವೆಂಪು ರಾಷ್ಟ್ರಪ್ರಭುತ್ವದ ಚಿಂತನೆಯ ವಿರೋಧಿಯೇನೂ ಆಗಿರಲಿಲ್ಲ. ವಸಾಹತು ವಾದದ ವಿರುದ್ಧ ಬಲಿಷ್ಠ ಹೋರಾಟ ಕಟ್ಟಬೇಕಾದರೆ ನಮಗೂ ನೆನಪುಗಳ ಊರುಗೋಲು ಬೇಕು ಎಂದು ಹೇಳಿದವರೆ. ಆದರೆ ಇಂದಲ್ಲ ನಾಳೆ ನಮಗೂ ರಾಷ್ಟ್ರ ಪ್ರಭುತ್ವ ಕಟ್ಟುವ ಅವಕಾಶ ಬರುತ್ತದೆ,ಹಾಗೆ ಗಳಿಸಿಕೊಂಡ ರಾಷ್ಟ್ರವನ್ನು ಯಾವ ನೆಲಗಟ್ಟಿನ ಮೇಲೆ ರೂಪಿಸಬೇಕು ಎಂಬುದು ಮಾತ್ರ ಅವರ ಕಾಳಜಿಯ ವಿಷಯ. ಕುವೆಂಪು, ಗಾಂಧಿ, ಅಂಬೇಡ್ಕರ್, ಟಾಗೂರ್, ನಾರಾಯಣಗುರು, ಭಗತ್‌ಸಿಂಗ್,ವಿವೇಕಾನಂದ ಮುಂತಾದವರ ರಾಷ್ಟ್ರ ಕುರಿತ ಚಿಂತನೆ ಬೇರೆ. ಸಾವರ್ಕರ್ ಮತ್ತು ಗೋಳ್ವಾಲ್ಕರ್ ಮುಂತಾದವರ ಚಿಂತನೆಯ ದಾರಿ ಬೇರೆ. ಸ್ವಾಮಿ ವಿವೇಕಾನಂದರು ಸಹ ಅಧ್ಯಾತ್ಮದ ನೆನಪುಗಳ ಆಧಾರದ ಮೇಲೆ ಜಾಗತಿಕ ಚರಿತ್ರೆಯಲ್ಲಿ ಭಾರತಕ್ಕೆ ವಿಶಿಷ್ಟತೆಯನ್ನು ಗಳಿಸಿಕೊಡಲು ಯತ್ನಿಸಿದರು. ತಪ್ಪಿಯೂ ಕೂಡ ಅನ್ಯರನ್ನು ಗುರುತಿಸಿ ಹೊರಗಿಡುವ ದ್ವೇಷಕಾರಿ ರಾಷ್ಟ್ರೀಯವಾದವನ್ನವರು ಪ್ರತಿಪಾದಿಸಿಯೂ ಇಲ್ಲ. ತಾನು ಮಾತ್ರ ಶ್ರೇಷ್ಠ ಎನ್ನುವ ಅಪಾಯಕಾರಿ ರಾಷ್ಟ್ರವಾದವನ್ನವರು ಹೇಳಲೂ ಇಲ್ಲ. ಇಂಥವೆಲ್ಲ ಸಂಕಥನಗಳು ನಡೆಯುತ್ತಿರುವಾಗಲೇ ಯುರೋಪಿನ ಗರ್ಭದಲ್ಲಿ ಹಿಟ್ಲರ್ ಮತ್ತು ಮುಸ್ಸೋಲಿನಿಗಳು ರೂಪುಗೊಳ್ಳುತ್ತಿದ್ದರು. ರಾಷ್ಟ್ರಗಳು ಹರಳುಗಟ್ಟುವ ಸ್ಥಿತಿಗೆ ಬರುವ ಹೊತ್ತಿಗೆ ಇಟಲಿ ಜರ್ಮನಿಗಳಲ್ಲಿ ನಡೆದ ಭೀಕರ ಹತ್ಯಾಕಾಂಡಗಳು, ನೇಶನ್ ಎಂದ ಕೂಡಲೇ ಬೆಚ್ಚಿ ಬೀಳುವಂತೆ ಮಾಡಿದವು. ಆರ್ಯ ಶ್ರೇಷ್ಠ ಜರ್ಮನಿ ಎಂಬ ಪಿತೃಭೂಮಿ ಪರಿಕಲ್ಪನೆಯ ಜರ್ಮನಿ ಯಹೂದಿ ರಕ್ತದಿಂದ ತೊಯ್ದು ಒಣಗುವ ಹೊತ್ತಿಗೆ ಭಾರತದಲ್ಲಿ ಗಾಂಧೀಜಿ ಹತ್ಯೆಯಾಯಿತು. ಹಿಟ್ಲರನ ನಾಝಿಸಂ ಮತ್ತು ಮುಸ್ಸೊಲೀನಿಯ ಫ್ಯಾಶಿಸಂ ಕುರಿತು ಡಾ. ಬಿ ಆರ್. ಅಂಬೇಡ್ಕರ್ ಹೀಗೆ ಬರೆಯುತ್ತಾರೆ. ‘‘ಫ್ಯಾಶಿಸಂ ಅಥವಾ ನಾಝಿಸಂಗೆ ಹಿಂಸೆ ಅಪಥ್ಯವಲ್ಲ. ರಾಷ್ಟ್ರೀಯ ಉದ್ದೇಶಗಳನ್ನು ಸಾಧಿಸಲೆಂದು ಯಾವುದೇ ಮಾರ್ಗವನ್ನು ಅವಲಂಬಿಸಿದರೂ ಸರಿ. ಇವು ಶಾಂತಿವಾದಿಯಾಗಿರದೆ ಯುದ್ಧವಾದಿಯಾಗಿವೆ. ಜೊತೆಗೆ ಉಗ್ರ ರಾಷ್ಟ್ರವಾದವನ್ನು ಪ್ರತಿಪಾದಿಸುತ್ತವೆ. ಉಗ್ರ ರಾಷ್ಟ್ರವಾದ ಹಾಗೂ ಯುದ್ಧಗಳು ಯಾವಾಗಲೂ ಜೊತೆಯಾಗಿರುತ್ತವೆ’’ ಎನ್ನುತ್ತಾರೆ. ದುರಂತವೆಂದರೆ ತೊಂಬತ್ತರ ಹೊತ್ತಿಗೆ ಭಾರತವೂ ಸೇರಿದಂತೆ ಅನೇಕ ದೇಶಗಳಲ್ಲಿ ಹೊಸ ಹಿಟ್ಲರುಗಳು ಹುಟ್ಟಿಕೊಂಡರು. ಮನುಷ್ಯತ್ವಕ್ಕೆ ಹಿಟ್ಲರ್ ಮಾಡಿದ್ದ ಆಳವಾದ ಅವಮಾನ ಮತ್ತು ಗಾಯಕ್ಕೆ ಔಷಧಿಯೆಂಬಂತೆ ಗಾಂಧೀಜಿಯ ಹೆಂಗರುಳಿನ ಕ್ಲೈಬ್ಯ ರಾಷ್ಟ್ರವಾದ ಯುರೋಪಿಗೆ ಪರ್ಯಾಯವಾಗಿ ಗೋಚರಿಸಹತ್ತಿತು. ಭಾರತದಲ್ಲಿ ನಡೆದ ಗಾಂಧೀಜಿಯ ಸಾವು ಯುರೋಪಿನಲ್ಲಿ ಹೊಸ ರೂಪದಲ್ಲಿ ಹುಟ್ಟಲು ಕಾರಣವಾದಂತೆ ಕಾಣುತ್ತದೆ. ಮನುಷ್ಯವಾದದ ಯುರೋಪಿನ ಚಿಂತಕರು ಕಣ್ಣು ತೆರೆಸಿದ ನಂತರ ಲಿಬರಲ್ ತತ್ವವನ್ನು ಅಳವಡಿಸಿಕೊಂಡಿದ್ದ ಗಾಂಧೀಜಿಯವರನ್ನು ಆ ತತ್ವ ಒಪ್ಪದವರು ಕೊಲೆ ಮಾಡಿದರು. ಹಿಟ್ಲರನ ಅಬ್ಬರದಲ್ಲಿ ಉದಾರವಾದಿ ಮಾನವತಾವಾದ ಮರೆಯಾಗಿದ್ದ ಯುರೋಪಿನ ಕೇಂದ್ರಕ್ಕೆ, ಅಣುಬಾಂಬಿನ ದುರ್ಘಟನೆಯ ಆಘಾತದಿಂದ ಕಂಗೆಟ್ಟಿದ್ದಾಗ ಗಾಂಧೀಜಿ ಅಹಿಂಸೆ ಮೂಲಕ ಹೋರಾಟ ಕಟ್ಟಿ ರಾಷ್ಟ್ರವೊಂದನ್ನು ದಕ್ಕಿಸಿಕೊಂಡದ್ದು ಆಶಾವಾದವಾಗಿ ಕಾಣಿಸಿದಂತಿದೆ. ಎರಡನೆಯ ಮಹಾಯುದ್ಧದ ನಂತರ ಇಡೀ ಯುರೋಪಿನ ವರ್ತನೆಯೇ ಬದಲಾಯಿತು ಎನ್ನುವವರಿದ್ದಾರೆ. ಇಲ್ಲದಿದ್ದರೆ ಏಶ್ಯಾ, ಆಫ್ರಿಕಾಗಳ ರಾಷ್ಟ್ರವಾದಗಳ ಮೇಲಾಟಕ್ಕೆ ಸಿಕ್ಕಿ ಛಿದ್ರಗೊಂಡು ಅಲೆಗಳಂತೆ ಬರುತ್ತಿರುವ ವಲಸಿಗರನ್ನು ಯುರೋಪು ತಾಯಿಯಂತೆ ಅಪ್ಪಿಕೊಳ್ಳುತ್ತಿರಲಿಲ್ಲ.

ತನ್ನ ರಾಷ್ಟ್ರ ಮಾತ್ರ ಶ್ರೇಷ್ಠವೆಂಬ ವ್ಯಸನಕ್ಕೆ ಸಿಕ್ಕಿ ನರಳಿದ ಯುರೋಪು ಜಗತ್ತಿನ ಕಣ್ಣು ತೆರೆಸಬೇಕಿತ್ತು. ಹಾಗಾಗಲಿಲ್ಲ ಎಂಬುದು ಇತಿಹಾಸದ ಕ್ರೂರವ್ಯಂಗ್ಯ. 21ನೇ ಶತಮಾನದ ಹೊತ್ತಿಗೆ ರಾಷ್ಟ್ರಭಕ್ತಿಯೆಂಬುದು ಅನೇಕ ದೇಶಗಳ ಮಟ್ಟಿಗೆ ಶ್ರೇಷ್ಠ ರಾಷ್ಟ್ರ ಕಟ್ಟುವ ಸಾಧನವೆಂಬಂತೆ ಬಳಕೆಯಾಗುತ್ತಿರುವುದನ್ನು ನೋಡಿದರೆ ಅಸಂಖ್ಯಾತ ಹಿಟ್ಲರುಗಳು ಹುಟ್ಟಲು ತವಕಿಸುತ್ತಿರುವಂತೆ ಕಾಣುತ್ತದೆ. ಇದೇ ಸಮಸ್ಯೆ ಇಂದು ಮನುಕುಲದ ಅಳಿವು ಉಳಿವಿನ ಪ್ರಶ್ನೆಯಾಗಿ ಕಾಡುತ್ತಿದೆ. ಈ ಆತಂಕವನ್ನು ರಚನಾತ್ಮಕವಾಗಿ ವಿವರಿಸುತ್ತಿರುವವನು ಇಸ್ರೇಲಿನ ಹಿಬ್ರೂ ವಿಶ್ವವಿದ್ಯಾನಿಲಯದಲ್ಲಿ ಜಾಗತಿಕ ಚರಿತ್ರೆಯನ್ನು ಪಾಠಮಾಡುತ್ತಿರುವ ಯಹೂದಿ ಚಿಂತಕ ಯುವಲ್ ನೋಹ ಹರಾರಿ.

ಇದಕ್ಕಿಂತ ಮೊದಲು ಆಂಟನಿ ಗಿಡ್ಡನ್ಸ್ ಎಂಬ ಬ್ರಿಟಿಷ್ ಸಮಾಜಶಾಸ್ತ್ರಜ್ಞ ಜಾಗತೀಕರಣ ತೀವ್ರಗೊಂಡಿರುವ ಹೊತ್ತಿನಲ್ಲಿ ರಾಷ್ಟ್ರಪ್ರಭುತ್ವಗಳ ಆರ್ಭಟ ಕೇವಲ ಸಾಂಕೇತಿಕವಾಗುತ್ತಿರುವುದನ್ನು ವಿವರಿಸುತ್ತಾನೆ. ಜೊತೆಗೆ ಬೇಟೆ ಮಾಡಲಾಗದ ಅಸಹಾಯಕ ಹುಲಿ ಮನುಷ್ಯನ ಮೇಲೆ ಎರಗಿ ಕೊಲ್ಲುವಂತೆ ರಾಷ್ಟ್ರಗಳು ವರ್ತಿಸುತ್ತಿವೆ ಎನ್ನುತ್ತಾನೆ. ರಾಷ್ಟ್ರ ಪ್ರಭುತ್ವಗಳ ಮೇಲಾಟದಲ್ಲಿ ಜಗತ್ತು ಭೀಕರ ಅಪಾಯದ ಕಡೆಗೆ ಚಲಿಸುತ್ತಿದೆ ಎನ್ನುವ ಹರಾರಿ ಇನ್ನು ಕೆಲವೇ ವರ್ಷಗಳಲ್ಲಿ ಮನುಷ್ಯಕುಲವೇ ವಿನಾಶವಾಗುತ್ತದೆಂದು ಭವಿಷ್ಯ ನುಡಿಯುತ್ತಾನೆ. ಇತಿಹಾಸಕಾರ ಕಣಿ ನುಡಿಯಬಾರದೆಂಬುದು ಅಲಿಖಿತ ನಿಯಮವಾದರೂ, ನುಡಿಯುತ್ತಾನೆ.

ಜೊತೆಗೆ ಪ್ರತಿಭಾವಂತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ತಾನು ಸಾಯುವ ಕೆಲವೇ ದಿನಗಳ ಮೊದಲು ‘‘ಮನುಷ್ಯ ಸಂಕುಲದ ವಿನಾಶ ಒಂದೆರಡು ಶತಮಾನಗಳ ಹತ್ತಿರಕ್ಕೆ ಸಮೀಪಿಸಿರುವುದರಿಂದ ಅನ್ಯ ಗ್ರಹಗಳಲ್ಲಿ ನೆಲೆಸುವ ಸಾಧ್ಯತೆಗಳ ಕುರಿತು ಶೀಘ್ರ ಪ್ರಯತ್ನಿಸಬೇಕು’’ ಎಂದು ಹೇಳಿ ಹರಾರಿ ಚಿಂತನೆಯನ್ನು ಎಂಡಾರ್ಸ್‌ ಮಾಡುತ್ತಾನೆ. ಇದರಿಂದಾಗಿ ಹರಾರಿಯ ಚಿಂತನೆಗೆ ಅಧಿಕೃತತೆ ಲಭಿಸಿದೆ.

ಹರಾರಿ ಹೇಳುವುದಿಷ್ಟು: ರಾಷ್ಟ್ರಪ್ರಭುತ್ವಗಳು ಶ್ರೇಷ್ಠತೆಯ ವ್ಯಸನಕ್ಕೆ ಸಿಲುಕಿವೆ. ಅನೇಕವು ತನ್ನ ರಾಷ್ಟ್ರದ ಸದಸ್ಯರಲ್ಲಿ ಅನ್ಯರು ಅಪಾಯಕಾರಿಗಳೆಂದು ಭೀತಿ ಹುಟ್ಟಿಸಿ ನಿಧಾನಕ್ಕೆ ದ್ವೇಷವನ್ನು ಉತ್ಪಾದಿಸುತ್ತಿವೆೆ. ಅದಕ್ಕಾಗಿ ತಾನು ಮಾತ್ರ ಬಲಿಷ್ಠವಾಗಬೇಕೆಂಬ ಹಪಾಹಪಿಗೆ ಮತ್ತು ಜಿದ್ದಿಗೆ ಬಿದ್ದಿವೆ. ಅಣುಬಾಂಬುಗಳು, ಶಕ್ತಿಶಾಲಿ ಫೈಟರ್‌ಗಳು, ರೋಬೋಟುಗಳು ಹೆಚ್ಚೆಚ್ಚು ಹೊಂದಿರುವುದು ಸುಪ್ರೀಂ ರಾಷ್ಟ್ರವಾಗುವ ಸಾಧನೆಗೆ ಮೆಟ್ಟಿಲುಗಳು ಎಂದು ಆಧುನಿಕ ರಾಷ್ಟ್ರಪ್ರಭುತ್ವಗಳು ಭಾವಿಸುತ್ತಿವೆ. ತನ್ನ ರಾಷ್ಟ್ರ ವಿಶಿಷ್ಟ ಎನ್ನುವುದಾದರೆ ಅದು ಆರೋಗ್ಯಕರ. ಸುಪ್ರೀಂ ಎಂದ ಕೂಡಲೇ ಮತ್ತೊಂದು ಅಡಿಯಾಳಾಗಬೇಕೆಂಬ ಒತ್ತಾಸೆ ಶುರುವಾಗುತ್ತದೆ. (ಹಿಟ್ಲರ್‌ನೆಂಬ ಬೇಟೆಗಾರ ಬೆನ್ನು ಹತ್ತಿ ಬರುತ್ತಿದ್ದರೂ ತಪ್ಪಿಸಿಕೊಂಡು ಓಡುತ್ತಿದ್ದ ಕವಿ ಬ್ರೆಕ್ಟ್ ಒಮ್ಮೆ ‘ಜನರಲ್ ನಿನ್ನ ಬಾಂಬರು ಸರ್ವಶಕ್ತ ಆದರೆ ಅದಕ್ಕೊಬ್ಬ ಮನುಷ್ಯ ಬೇಕಲ್ಲವೇ’ ಎಂದು ಕೇಳಿದ್ದ. ಕೊಲ್ಲುವ ಮನುಷ್ಯನಿಗೆ ಕೊಲೆ ಮಾಡುವುದು ಅವಿವೇಕಿತನದ್ದೆಂದು ಅನ್ನಿಸಿಬಿಡಬಹುದು. ಸುಸ್ತು ಮಾಡಬಹುದು. ತುಸು ಸೂಕ್ಷ್ಮಮತಿಯಾದವನಿಗೆ ಹುಚ್ಚು ಹಿಡಿಸಬಹುದು. ಈ ತಾಪತ್ರಯವೇ ಬೇಡವೆಂದು ಕೃತಕ ಬುದ್ಧಿಮತ್ತೆಯ ಮತ್ತು ಜೈವಿಕತಂತ್ರಜ್ಞಾನದ ಬುದ್ಧಿಮತ್ತೆಯಿಂದಾಗಿ ಡಾರ್ವಿನ್ನನ ವಿಕಾಸವಾದದ ಪರಿಧಿಗೇ ಸಿಲುಕದ ಹೊಸ ಸೂಪರ್ ಮ್ಯಾನುಗಳೆಂಬ ರೋಬೋಟುಗಳ ಅನ್ವೇಷಣೆ ತೀವ್ರರೂಪದಲ್ಲಿ ನಡೆಯುತ್ತಿದೆ). ಡ್ರೋಣ್‌ಗಳು ನಿಖರ ಗುರಿ ತಲುಪಿ ಕೊಂದು ವಾಪಸ್ ಬರುತ್ತಿವೆ. ಇದೆಲ್ಲ ಮಾಡಬೇಕೆಂದರೆ ಹಣಬೇಕು. ಅದಕ್ಕಾಗಿ ಇನ್ನಿಲ್ಲದ ರೀತಿಯಲ್ಲಿ ಭೂಮಿಯ ಶೋಷಣೆ ಮಾಡಬೇಕು. ಈ ಶೋಷಣೆಯು ಸೃಷ್ಟಿಸಿರುವ ಜಾಗತಿಕ ಪರಿಸರ ಬಿಕ್ಕಟ್ಟು ಐದು ಮಿಲಿಯ ವರ್ಷಗಳ ಮನುಷ್ಯ ಸಂಕುಲವನ್ನು ಭೂಮಿಯಿಂದ ಅಳಿಸಿಹಾಕುವಂತೆ ಮಾಡುತ್ತಿದೆ. ಜೊತೆಗೆ, ರೋಬೋಟುಗಳೆಂಬ ಹೃದಯಹೀನ ಮನುಷ್ಯರ ಹುಟ್ಟು ಜಗತ್ತಿನಲ್ಲಿ ಅಸಂಖ್ಯಾತ ನಾಗರಿಕ ಸಮುದಾಯಗಳನ್ನು ನಿಷ್ಪ್ರಯೋಜಕ ವರ್ಗಗಳನ್ನಾಗಿ ರಾಷ್ಟ್ರಪ್ರಭುತ್ವಗಳು ರೂಪಿಸುತ್ತಿವೆ. ಇವುಗಳೆಲ್ಲ ಜಾಗತಿಕ ಸಮಸ್ಯೆಗಳು. ಜಾಗತಿಕ ಆರ್ಥಿಕತೆ, ಜಾಗತಿಕ ಸಂಸ್ಕೃತಿ, ಜಾಗತಿಕ ಪರಿಸರದ ಬಿಕ್ಕಟ್ಟು, ಅಣುಬಾಂಬುಗಳ ಆತಂಕ, ಕೃತಕ ಬುದ್ಧಿಮತ್ತೆಯೊಂದಿಗೆ ಜೈವಿಕ ತಂತ್ರಜ್ಞಾನದ ಬುದ್ಧಿಮತ್ತೆಯು ಸೇರಿದ ರೋಬೋಟುಗಳು ಇವುಗಳನ್ನು ಪರಿಹರಿಸಲು ಬಿಡಿ ಬಿಡಿಯಾದ ರಾಷ್ಟ್ರಪ್ರಭುತ್ವಗಳಿಂದ ಸಾಧ್ಯವೇ? ಎಂದು ಹರಾರಿ ಕೇಳುತ್ತಾನೆ. ಕ್ರೂರಿ ಕೊಲೆಗಡುಕ ರೋಬೋಟುಗಳನ್ನು, ಅಣುಬಾಂಬುಗಳನ್ನು ಉತ್ಪಾದಿಸುವ ಪ್ರಕ್ರಿಯೆಯನ್ನು ಒಂದು ದೇಶ ಕೈ ಬಿಟ್ಟಿತೆನ್ನಿ, ಇನ್ನೊಂದು ದೇಶವೂ ಹಾಗೆ ಮಾಡುತ್ತದೆನ್ನುವುದಕ್ಕೆ ಖಾತ್ರಿ ಏನು? ಅಣುಬಾಂಬುಗಳ ವಿಚಾರದಲ್ಲಿ ಏನಾಗುತ್ತಿದೆಯೆಂದು ನಾವೀಗಾಗಲೇ ನೋಡುತ್ತಿದ್ದೇವೆ.

‘‘ಅಮೆರಿಕದ ಗಡಿಯಲ್ಲಿ ಗೋಡೆಕಟ್ಟುವ ಟ್ರಂಪ್‌ನ ಪ್ರಯತ್ನ ತೀರಾ ಹಾಸ್ಯಾಸ್ಪದ ಮತ್ತು ಜನರನ್ನು ದಾರಿತಪ್ಪಿಸುವ ಪ್ರಯತ್ನ’’ ಎನ್ನುತ್ತಾನೆ ಹರಾರಿ. ಜಾಗತೀಕರಣವೆಂದರೆ ಗೋಡೆಗಳಿಲ್ಲದ ಜಗತ್ತು ಎಂದು ನಂಬಿಸಲಾಗಿದೆ. ಗೋಡೆ ಕಟ್ಟುತ್ತಿರುವುದಕ್ಕೆ ಟ್ರಂಪ್ ನೀಡುತ್ತಿರುವ ಸಮರ್ಥನೆ ಏನು? ಮೆಕ್ಸಿಕೋದ ಮೂಲಕ ದೇಶದೊಳಗೆ ನುಗ್ಗುವ ಅಕ್ರಮ ವಲಸೆಕೋರರು ತನ್ನ ರಾಷ್ಟ್ರದ ಪ್ರಜೆಗಳಿಗೆ ಉದ್ಯೋಗ ತಪ್ಪಿಸಿ ಆರ್ಥಿಕತೆಯನ್ನು ಬುಡಮೇಲು ಮಾಡುತ್ತಿದ್ದಾರೆನ್ನುವುದಲ್ಲವೇ? ಆದರೆ ಗೋಡೆಕಟ್ಟುವ ಪ್ರಕ್ರಿಯೆ ನಡೆಸುತ್ತಿದ್ದಾಗಲೇ ತನ್ನದೇ ದೇಶದ ಗೂಗಲ್ ಸಂಸ್ಥೆ ಚಾಲಕರಿಲ್ಲದ ಕಾರುಗಳನ್ನು, ಕೃತಕ ರೋಬೋಟುಗಳನ್ನು ತಯಾರಿಸಲು ಬೇಕಾದ ತಂತ್ರಜ್ಞಾನದ ಅನ್ವೇಷಣೆಯಲ್ಲಿದೆ. ಬಹುಮಟ್ಟಿಗೆ ಸಾಧಿಸಿಯೂ ಆಗಿದೆ. ಜನಸಂಖ್ಯೆಯಲ್ಲಿ ಗಜಗಾತ್ರದ ಚೀನಾ ಕೂಡ ಅಪಾರ ಸಂಖ್ಯೆಯಲ್ಲಿ ರೋಬೋಟುಗಳನ್ನು ಉತ್ಪಾದಿಸ ಹೊರಟಿದೆ. ಇದರ ನಡುವೆ ಅನ್ಯರಿರುವುದರಿಂದಲೇ ನಮ್ಮ ಪ್ರಗತಿಗೆ ತೊಂದರೆಯಾಗಿದೆಯೆಂದು ಜನರನ್ನು ನಂಬಿಸುವ ಅಭಿಪ್ರಾಯವನ್ನು ಉತ್ಪಾದಿಸುತ್ತಿದೆ. ಇಂಗ್ಲೆಂಡಿನ ಜನ ಯುರೋಪಿಯನ್ ಒಕ್ಕೂಟದಿಂದ ಹೊರಬರುವ ಪ್ರಯತ್ನವೂ ಇಂಥದೆ ಅಭಿಪ್ರಾಯ ಉತ್ಪಾದನೆಯ ಫಲ.

ಇದಕ್ಕೆ ಬದಲಾಗಿ ಗಿಡ್ಡೆನ್ಸ್ ಹೇಳುವಂತೆ ‘‘ಕಳೆದ ಮೂರು ದಶಕಗಳಲ್ಲಿ ಬೃಹತ್ ಬಂಡವಾಳದ ಹದಿನಾರು ಇಪ್ಪತ್ತು ಕಂಪೆನಿಗಳು ಸಹಕಾರತತ್ವದ ಮೂಲಕ, ಸಹಭಾಗಿತ್ವದ ಮೂಲಕ ಜಾಗತಿಕ ಆರ್ಥಿಕತೆಯನ್ನು ನಡೆಸುತ್ತಿವೆ. ರಾಷ್ಟ್ರಗಳ ನಡುವೆ ಏರ್ಪಡಬೇಕಾಗಿದ್ದ ಸಹಕಾರ ತತ್ವವನ್ನು ಲಾಭಕೋರ ಮೊನ್ಸಾಂಟೋ ರೀತಿಯ ಕಂಪೆನಿಗಳು ಅಳವಡಿಸಿಕೊಳ್ಳುತ್ತಿವೆ. ಬೃಹತ್ತಾಗದೆ ಬಹುರಾಷ್ಟ್ರೀಯವಾಗಲು ಸಾಧ್ಯವಿಲ್ಲ ಎಂಬ ಸತ್ಯ ಬಂಡವಾಳಿಗರಿಗೆ ಅರ್ಥವಾಗಿದೆ. ಮಾನವ ಕಲ್ಯಾಣದ ಆಶಯದ ದೃಷ್ಟಿಕೋನದಲ್ಲಿ ಇಪ್ಪತ್ತನೇ ಶತಮಾನ ಕನಸಿದ್ದ ವಿಶ್ವ ಸರಕಾರವೆಂಬ ಪರಿಕಲ್ಪನೆ ತನ್ನೆಲ್ಲ ರೆಕ್ಕೆಗಳನ್ನು ಮುರಿದುಕೊಂಡು ಮಲಗಿದೆ.’’

ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಸಂಕಥನವೆಂಬುದು ಅಪ್ರಸ್ತುತವಾಗುತ್ತಿದೆ ಎನ್ನುತ್ತಾನೆ. ಇದಕ್ಕೆ ಪರ್ಯಾಯವಾಗಿ ವಿಶ್ವ ಸಹಕಾರತತ್ವವೊಂದೆ ಬದುಕುವ ಭರವಸೆ ಹುಟ್ಟಿಸ ಬಲ್ಲುದು ಎನ್ನುತ್ತಾನೆ. ತಾನು ವಿಶಿಷ್ಟ ಮಾತ್ರ ನಿನಗಿಂತ ಶ್ರೇಷ್ಠನಲ್ಲ. ಹೊರಗಿಡುವುದಕ್ಕಿಂತ ಒಳಗೊಂಡು ಬಾಳು ಎಂದು ಕರೆ ನೀಡಿದ್ದ ಕುವೆಂಪು ಅವರ ಸರ್ವೋದಯ ತತ್ವ ಹರಾರಿ ಮೂಲಕ ಜೀವ ತಳೆಯುತ್ತಿದೆ ಎನ್ನಿಸುತ್ತಿದೆ. ಗಡಿಗಳ ಒಳಗೇ ಬಂದಿಯಾಗುವ ಮನುಷ್ಯನ ಚೈತನ್ಯ ಹುಸಿ ದ್ವೇಷವಾದಗಳಿಗೆ ಸಿಲುಕಿ ನಾಶವಾಗುವ ಕುರಿತು ಟಾಗೂರ್ ಆತಂಕ ವ್ಯಕ್ತಪಡಿಸಿದ್ದರು. ವಿಧ್ವಂಸಕಾರಿ ಯುದ್ಧಾಸ್

Writer - ನೆಲ್ಲುಕುಂಟೆ ವೆಂಕಟೇಶ್

contributor

Editor - ನೆಲ್ಲುಕುಂಟೆ ವೆಂಕಟೇಶ್

contributor

Similar News