ಐಎಫ್ಎಫ್ ವತಿಯಿಂದ ಅನಿವಾಸಿ ಭಾರತೀಯರ ಐತಿಹಾಸಿಕ 'ಬೈಶ್ ಸಮ್ಮಿಲನ -2019'

Update: 2019-03-27 07:30 GMT

ಜಿಝಾನ್: ಇಂಡಿಯಾ ಫ್ರೆಟರ್ನಿಟಿ ಫೋರಂ (ಐಎಫ್ಎಫ್) ಸೌದಿ ಅರೇಬಿಯಾದ್ಯಂತ ಆಯೋಜಿಸಿರುವ "ಫ್ರೆಟರ್ನಿಟಿ ಫೆಸ್ಟ್" ಅಂಗ‌ವಾಗಿ ಐಎಫ್ಎಫ್ ಕರ್ನಾಟಕ ಚಾಪ್ಟರ್ ಬೈಶ್, ಜಿಝಾನ್ ವತಿಯಿಂದ "ಬೈಶ್ ಸಮ್ಮಿಲನ  2019" ಕಾರ್ಯಕ್ರಮವು ಬೈಶ್‌ ನ  ಝಹೂರ್ ಅಲ್ ರೀಫ್ ಇಸ್ತಿರಾದಲ್ಲಿ ನಡೆಯಿತು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಐಎಫ್ಎಫ್ ಅಭಾ- ಜಿಝಾನ್ ವಲಯಾಧ್ಯಕ್ಷ ಇಕ್ಬಾಲ್ ಕೂಳೂರು ವಹಿಸಿ ನಂತರ ಮಾತನಾಡಿದ ಅವರು ಅನಿವಾಸಿ ಭಾರತೀಯರ ನೋವು ನಲಿವುಗಳ ಮಧ್ಯೆ ಐಎಫ್ಎಫ್ ನಡೆದುಬಂದ ದಾರಿ ಹಾಗೂ ಮಾನವೀಯ ಕಾರ್ಯ ಚಟುವಟಿಕೆಗಳ ಬಗ್ಗೆ ವಿವರಿಸಿದರು.

ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಅಬ್ದುಲ್ ಮಜೀದ್ ತಬೂಕ್, ಫ್ಯಾಸಿಸ್ಟ್ ಶಕ್ತಿಗಳು ದೇಶದಾದ್ಯಂತ ರೌದ್ರ ತಾಂಡವವಾಡುತ್ತಿದೆ. ದಲಿತ ದಮನಿತ ವರ್ಗಗಳ ಧ್ವನಿ ಅಡಗಿಸುವ ಹುನ್ನಾರ ನಡೆಯುತ್ತಿದೆ. ನಾವು ತಲೆತಲಾಂತರಗಳಿಂದ ನಂಬಿರುವ ಪಕ್ಷಗಳ ಕಪಿಮುಷ್ಟಿಯಿಂದ ಹೊರ ಬಂದು ಸಮಾನ ಮನಸ್ಕರಾಗಿ ಪರ್ಯಾಯ ಶಕ್ತಿಯ ಉಗಮದ ಆವಶ್ಯಕತೆ ದೇಶಕ್ಕಿದೆ. ಸುಂದರ ಭಾರತದ ಸಂವಿಧಾನ ಉಳಿಸಿ, ಅದರ ಮೌಲ್ಯಗಳನ್ನು ಕಾಪಾಡುವುದು  ಭಾರತೀಯರಾದ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಇರ್ಷಾದ್ ಬಜ್ಪೆ ನಡೆಸಿಕೊಟ್ಟ ಕಿರಾಅತ್ ನೊಂದಿಗೆ ಆರಂಭಗೊಂಡ ಸಭಾ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಅಬ್ದುಲ್ ಸಮದ್ ಬಜ್ಪೆ (ಮಾಲಕರು ಜಿ ಟೆಕ್ ಇನ್ಫಾರ್ಮಶನ್ ಆ್ಯಂಡ್ ಟೆಕ್ನಾಲಜಿ), ಅಬೂಬಕ್ಕರ್ ಸಿದ್ದಿಕ್ ಫತೇಹ್ ಅಲ್ ಜುನೂಬ್ (ಅಧ್ಯಕ್ಷರು ಐಎಸ್ಎಫ್ ಬೈಶ್ ಕರ್ನಾಟಕ ಚಾಪ್ಟರ್), ಹನೀಫ್ ಜೋಕಟ್ಟೆ (ಕಾರ್ಯದರ್ಶಿ,ಐಎಫ್ಎಫ್ ಅಭಾ-ಜಿಝಾನ್) ಮುಹಮ್ಮದ್ ಬಾವ ಕೆಸಿ ರೋಡ್ (ಸಮಾಜ ಸೇವಕರು) ಮೊಹಮ್ಮದ್ ರಿಯಾಝ್ ( ಬಿಸಿನೆಸ್ ಡೆವಲಪ್ಮೆಂಟ್ ಮ್ಯಾನೇಜರ್ ಯುನೈಟೆಡ್ ಟೆಕ್), ಫಯಾಝ್ ಪಾಷ (ಮ್ಯಾನೇಜಿಂಗ್ ಡೈರೆಕ್ಟರ್, ಎಫ್ಎ ಪಾಷ ಇಂಪೋರ್ಟ್ ಆ್ಯಂಡ್ ಎಕ್ಸ್ಪೋರ್ಟ್) ಭಾಗವಹಿಸಿದ್ದರು.

ಈ ಸಂದರ್ಭ ಸೌದಿ ಅರೇಬಿಯಾದಲ್ಲಿ ಸುಮಾರು 35 ವರ್ಷಗಳಿಂದ ತನ್ನ ದುಡಿಮೆಯೊಂದಿಗೆ ಸಮಾಜ ಸೇವೆಯನ್ನೇ ತನ್ನ ಜೀವನದಲ್ಲಿ ಮುಡಿಪಾಗಿಟ್ಟ ಮುಹಮ್ಮದ್‌ ಬಾವಾ ರನ್ನು ಸನ್ಮಾನಿಸಲಾಯಿತು.

ಐಎಫ್ಎಫ್ ಅಭಾ-ಬೈಶ್ ಕರ್ನಾಟಕ ಅಧ್ಯಕ್ಷ ಇಕ್ಬಾಲ್ ಕೂಳೂರು ಉದ್ಘಾಟನೆ ಮಾಡಿದ ಈ ಸಮಾರಂಭದಲ್ಲಿ ತಾಯ್ನಾಡನ್ನು ನೆನಪಿಸುವಂತಹ ವಿವಿಧ ಖಾದ್ಯಮೇಳಗಳು, ಬಾಬರಿ ಮಸ್ಜಿದ್ ಎಕ್ಸ್ಪೋ, ಸಮಾಜಕ್ಕೆ ಉತ್ತಮ ಸಂದೇಶ ಸಾರುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಮಕ್ಕಳ ಮನೋರಂಜನಾ ಕಾರ್ಯಕ್ರಮಗಳು, ಮಹಿಳೆಯರ ವಿವಿಧ ಬಗೆಯ ಸಲಾಡ್ ಸ್ಪರ್ಧೆಗಳು, ಕರಕುಶಲ ತಯಾರಿ, ನಾಡಿನ ಗ್ರಾಮೀಣ ಸೊಗಡನ್ನು ನೆನಪಿಸುವ ಮಡಕೆ ಒಡೆತ, ಬಲೂನ್ ಸ್ಪರ್ಧೆ,  ಚಾಪೆ ಓಟ, ಹಗ್ಗ ಜಗ್ಗಾಟ ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳು ನಡೆದವು.

ಫೆಸ್ಟ್ ನ ಭಾಗವಾಗಿ ನಡೆದ ವಾಲಿಬಾಲ್ ಟೂರ್ನಮೆಂಟ್‌ ನ ವಿಜೇತರಿಗೆ, ಮಹಿಳೆಯರ ಹಾಗೂ ಪುಟಾಣಿ ಮಕ್ಕಳ ವಿವಿಧ ಸ್ಪರ್ಧೆ ಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಇರ್ಷಾದ್ ಸುರತ್ಕಲ್ ಸ್ವಾಗತಿಸಿ, ಹನೀಫ್ ಜೋಕಟ್ಟೆ ವಂದಿಸಿದರು. ಸಲೀಂ ಗುರುವಾಯನಕೆರೆ ಮತ್ತು ಹಫೀಝ್ ಇಸ್ಮಾಯಿಲ್ ಕೆಸಿ ರೋಡ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News