ಪ್ರಚಾರ ರ್ಯಾಲಿಯಲ್ಲಿ ದೇವರ ಮೂರ್ತಿಯನ್ನು ಬಳಸಿದ ಬಿಜೆಪಿಯ ಸಂಬಿತ್ ಪಾತ್ರ: ದೂರು ದಾಖಲು

Update: 2019-03-27 09:15 GMT

ಭುಬನೇಶ್ವರ್, ಮಾ.27: ಬಿಜೆಪಿ ವಕ್ತಾರ ಹಾಗೂ ಪುರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸಂಬಿತ್ ಪಾತ್ರ ಅವರ ಚುನಾವಣಾ ರ್ಯಾಲಿ ಸಂದರ್ಭ ವಾಹನದಲ್ಲಿ ಜಗನ್ನಾಥ ದೇವರ ಮೂರ್ತಿಯನ್ನು ಸಾಗಿಸಿದ್ದರ ವಿರುದ್ಧ ಕಾಂಗ್ರೆಸ್ ಪಕ್ಷವು ರಾಜ್ಯ ಚುನಾವಣಾಧಿಕಾರಿಗೆ ದೂರು ನೀಡಿದೆ. ಜಗನ್ನಾಥ ದೇವರನ್ನು ಚುನಾವಣಾ ಲಾಭಕ್ಕಾಗಿ ಸಂಬಿತ್ ಪಾತ್ರ ಉಪಯೋಗಿಸಿದ್ದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಪಕ್ಷ ಆರೋಪಿಸಿದೆ.

ಈ ರೀತಿ ರಾಜಕೀಯ ರ್ಯಾಲಿಗಳಲ್ಲಿ ಜಗನ್ನಾಥ ದೇವರ ಮೂರ್ತಿ ಸಾಗಿಸುವುದು ಒಡಿಶಾ ಸಂಸ್ಕೃತಿಯ ವಿರುದ್ಧವಾಗಿದೆ ಎಂದು ಪುರಿ ಜಗನ್ನಾಥ ದೇವಳದ ಅರ್ಚಕ ರಾಮಚಂದ್ರ ದಾಸಮೊಹಾಪಾತ್ರ ಹೇಳಿದ್ದಾರೆ.

ಆದರೆ ತಮ್ಮ ವಿರುದ್ಧದ ಆರೋಪವನ್ನು ಸಂಬಿತ್ ಪಾತ್ರ ನಿರಾಕರಿಸಿದ್ದು, ರ್ಯಾಲಿ ಸಂದರ್ಭ ತಮಗೆ ಯಾರೋ ಇದನ್ನು ಉಡುಗೊರೆಯಾಗಿ ನೀಡಿದ್ದು, ಅದಕ್ಕೆ ಗೌರವವನ್ನಷ್ಟೇ ಸೂಚಿಸಿದ್ದಾಗಿ ತಿಳಿಸಿದ್ದಾರೆ. “ದೇವರಿಗೆ ಗೌರವ ಸಲ್ಲಿಸುವುದರಲ್ಲಿ ತಪ್ಪೇನಿಲ್ಲ. ಇತರರು ಏನು ಹೇಳುತ್ತಾರೆಂಬ ಪರಿವೆ ನನಗಿಲ್ಲ. ಇದಕ್ಕೂ ಚುನಾವಣೆಗೂ ನಂಟು ಕಲ್ಪಿಸಬೇಡಿ'' ಎಂದು ಅವರು ಹೇಳಿದ್ದಾರೆ.

“ಸಂಬಿತ್ ಪಾತ್ರ ರ್ಯಾಲಿಯ ಸಂದರ್ಭ ಜಗನ್ನಾಥನ ಮೂರ್ತಿಯ ಹೊರತಾಗಿ ಜಗನ್ನಾಥ ದೇವರ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಬಳಸಿದ್ದಾರೆ” ಎಂದು ಕಾಂಗ್ರೆಸ್ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News