2012ರಲ್ಲೇ ಬಾಹ್ಯಾಕಾಶದಲ್ಲಿ ಸಾಧನೆ ಮಾಡಿತ್ತು ಭಾರತ

Update: 2019-03-27 15:33 GMT

ಹೊಸದಿಲ್ಲಿ,ಮಾ.27: ಭಾರತ ಇದೇ ಮೊದಲ ಬಾರಿ ಬಾಹ್ಯಾಕಾಶ ಕಕ್ಷೆಯಲ್ಲೇ ಉಪಗ್ರಹವನ್ನು ಹೊಡೆದುರುಳಿಸಬಲ್ಲ ಕ್ಷಿಪಣಿಯನ್ನು ದೇಶೀಯವಾಗಿ ನಿರ್ಮಿಸಿ ಸಾಧನೆ ಮಾಡಿದೆ ಎಂದು ಬುಧವಾರ ಪ್ರಧಾನಿ ಮೋದಿ ದೂರದರ್ಶನದಲ್ಲಿ ಹೇಳಿಕೆ ನೀಡಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಹೊಸ ಕ್ರಾಂತಿ ಮಾಡಿದೆ ಎಂದು ತಿಳಿಸಿದ್ದಾರೆ.

ಆದರೆ ಭಾರತ ಇಂಥದ್ದೊಂದು ಸಾಧನೆಯನ್ನು 2012ರಲ್ಲೇ ಮಾಡಿತ್ತು ಎಂಬುದನ್ನು 2012ರ ಎಪ್ರಿಲ್ 28ರಂದು ಆಂಗ್ಲ ಪತ್ರಿಕೆ ಇಂಡಿಯಾ ಟುಡೆಯಲ್ಲಿ ಪ್ರಕಟವಾದ ವರದಿ ಬಹಿರಂಗಪಡಿಸಿದೆ.

ಈ ವರದಿಯಲ್ಲಿ, “ಇಂದು ನಾವು ಉಪಗ್ರಹನಿಗ್ರಹ (ಎಸ್ಯಾಟ್) ಸಾಮರ್ಥ್ಯ ಗಳಿಸಲು ಅಗತ್ಯವಿರುವ ಎಲ್ಲ ಸಾಧನಗಳನ್ನು ಅಭಿವೃದ್ಧಿಪಡಿಸಿದ್ದೇವೆ” ಎಂದು ಅಂದಿನ ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರ ಮತ್ತು ಡಿಆರ್‌ಡಿಒ ಮುಖ್ಯಸ್ಥ ವಿಜಯ್ ಸಾರಸ್ವತ್ ಇಂಟಿಯಾ ಟುಡೆಗೆ ಹೇಳಿಕೆ ನೀಡಿರುವುದನ್ನು ಉಲ್ಲೇಖಿಸಲಾಗಿದೆ.

2007ರ ಜನವರಿಯಲ್ಲಿ ಚೀನಾದ ಎಸ್ಯಾಟ್ ಕ್ಷಿಪಣಿ ಉಪಯೋಗವಿಲ್ಲದ ಹವಾಮಾನ ಉಪಗ್ರಹವನ್ನು ಹೊಡೆದುರುಳಿಸಿದ ನಂತರ ಆ ದೇಶದ ವಿರುದ್ಧ ತನ್ನ ಬಾಹ್ಯಾಕಾಶ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ತುರ್ತು ಅಗತ್ಯ ಭಾರತಕ್ಕಿತ್ತು ಮತ್ತು ಅದನ್ನು ಸದ್ಯ ಡಿಆರ್‌ಡಿಒ ಸಾಧಿಸಿದೆ ಎಂದು ಸಾರಸ್ವತ್ ತಿಳಿಸಿದ್ದರು.

ಸಾರಸ್ವತ್ ಅವರು ಗೇಮ್ ಚೇಂಜರ್ ಎಂದು ಕರೆದಿರುವ 5,500ಕಿ.ಮೀ ವ್ಯಾಪ್ತಿಯ ಅಗ್ನಿ ಮಧ್ಯಂತರ ವ್ಯಾಪ್ತಿಯ ಕ್ಷಿಪಣಿ ಬಾಹ್ಯಾಕಾಶದಲ್ಲಿ ವಸ್ತುಗಳನ್ನು ಗುರಿ ಮಾಡುವ ಸಾಮರ್ಥ್ಯದತ್ತ ಭಾರತ ಇಟ್ಟ ಮತ್ತೊಂದು ಹೆಜ್ಜೆ ಎಂದು ಬಣ್ಣಿಸಲಾಗಿತ್ತು.

2014ರ ವೇಳೆಗೆ ಡಿಆರ್‌ಡಿಒ ಅಗ್ನಿ ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿ ಪ್ರತಿಬಂಧಕ ಆಧಾರಿತ ಸಂಪೂರ್ಣ ಎಸ್ಯಾಟ್ ಆಯುಧವನ್ನು ನಿಯೋಜಿಸಲಿದೆ ಎಂದು ಸರಕಾರಿ ಅಧಿಕಾರಿ ತಿಳಿಸಿದ್ದರು. ಆದರೆ ಈ ಅಸ್ತ್ರವನ್ನು ಸಾರ್ವಜನಿಕವಾಗಿ ಪರೀಕ್ಷೆ ನಡೆಸುವುದು ಅನುಮಾನ ಎಂದು ಅವರು ತಿಳಿಸಿದ್ದರು.

ಇದನ್ನು ದೃಢಪಡಿಸಿದ್ದ ಸಾರಸ್ವತ್, ಭಾರತ ಉಪಗ್ರಹವನ್ನು ದ್ವಂಸ ಮಾಡುವ ಮೂಲಕ ತನ್ನ ಕ್ಷಿಪಣಿ ಸಾಮರ್ಥ್ಯವನ್ನು ಪರೀಕ್ಷಿಸುವುದಿಲ್ಲ. ಇಂಥ ಪರೀಕ್ಷೆಗಳಿಂದ ಬಾಹ್ಯಾಕಾಶದಲ್ಲಿ ಮಾರಕ ತ್ಯಾಜ್ಯಗಳು ಹೆಚ್ಚಾಗಿ ಸದ್ಯ ಇರುವ ಉಪಗ್ರಹಗಳಿಗೆ ಹಾನಿಯುಂಟು ಮಾಡಬಹುದು. ಅದರ ಬದಲು ಭಾರತದ ಎಸ್ಯಾಟ್ ಸಾಮರ್ಥ್ಯವನ್ನು ವಿವಿಧ ಇಲೆಕ್ಟ್ರಾನಿಕ್ ಪರೀಕ್ಷೆಗಳ ಮೂಲಕ ಸಾಬೀತುಪಡಿಸಲಾಗುವುದು ಎಂದು ತಿಳಿಸಿದ್ದರು ಎಂದು ಇಂಡಿಯಾ ಟುಡೆ ವರದಿ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News