ಐಟಿ ದಾಳಿ ಹಿಂದೆ ರಾಜಕೀಯ ಉದ್ದೇಶವಿಲ್ಲ: ಆದಾಯ ತೆರಿಗೆ ಇಲಾಖೆ ಸ್ಪಷ್ಟನೆ

Update: 2019-03-28 13:13 GMT

ಬೆಂಗಳೂರು, ಮಾ. 28: ರಾಜ್ಯದ ವಿವಿಧೆಡೆ ಆದಾಯ ತೆರಿಗೆ (ಐಟಿ) ಇಲಾಖೆ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಕರ್ನಾಟಕ ಮತ್ತು ಗೋವಾ ವಲಯದ ಸಾರ್ವಜನಿಕ ಸಂಪರ್ಕಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ.

ಐಟಿ ಇಲಾಖೆ ಗುತ್ತಿಗೆದಾರರು ಮತ್ತು ಅವರಿಗೆ ಸಂಬಂಧಿಸಿದ ವ್ಯಕ್ತಿಗಳನ್ನು ತಪಾಸಣೆಗೆ ಒಳಪಡಿಸಿದೆ. ಯಾವುದೇ ಶಾಸಕ, ಸಂಸದ ಅಥವಾ ಸಚಿವರ ಮನೆ ಮೇಲೆ ದಾಳಿ ನಡೆಸಿಲ್ಲ. ಇಲಾಖೆಗೆ ದೊರೆತ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಲಾಗಿದೆ. ಅಧಿಕಾರಿಗಳಿಗೆ ಭದ್ರತೆ ಒದಗಿಸಲು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಸಿಬ್ಬಂದಿಯನ್ನು ಬಳಸಿಕೊಳ್ಳಲಾಗಿದೆ. ರಾಜ್ಯ ಪೊಲೀಸ್ ಇಲಾಖೆಯ (ಎಡಿಜಿಪಿ) ಕೋರಿಕೆಯ ಮೇರೆಗೆ ಸಿಆರ್‌ಪಿಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಭದ್ರತೆಗೆ ಬಳಕೆಯಾಗಿರುವ ಸಿಬ್ಬಂದಿಯನ್ನು ಹೊರ ರಾಜ್ಯದಿಂದ ಕರೆತಂದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.

ಇಲಾಖೆಯು ರಾಜಕೀಯ ಪಕ್ಷಗಳೊಂದಿಗೆ ಸಂಬಂಧ ಹೊಂದಿರುವವರೂ ಸೇರಿದಂತೆ ವ್ಯಾಪಾರಸ್ಥರು, ಉದ್ಯಮಿಗಳು, ನಟರ ವಿವರಗಳನ್ನು ಪರಿಶೀಲಿಸಿದೆ. ತೆರಿಗೆ ವಂಚನೆಯ ಮಾಹಿತಿ ವಿಶ್ಲೇಷಿಸಿದ ನಂತರವೆ ದಾಳಿ ಮಾಡಲಾಗಿದೆ. ವಿವಿಧ ರಾಜಕೀಯ ಪಕ್ಷಗಳೊಂದಿಗೆ ಸಂಬಂಧ ಹೊಂದಿದವರ ಮೇಲೆಯೂ ದಾಳಿಗಳು ನಡೆದಿವೆ ಎಂದು ತಿಳಿಸಿದೆ.

ಆದಾಯ ತೆರಿಗೆ ಇಲಾಖೆಯ ತನಿಖಾ ವಿಭಾಗವು ಕಾನೂನು ಬದ್ಧವಾಗಿಯೇ, ವೃತ್ತಿಪರವಾಗಿ ಕಾರ್ಯನಿರ್ವಹಿಸುತ್ತಿದೆ. ರಾಜಕೀಯ ಪಕ್ಷಗಳೂ ಸೇರಿ ಸಂಬಂಧಿಸಿದ ಎಲ್ಲರ ಸಹಕಾರವನ್ನು ಇಲಾಖೆಯು ಕೋರುತ್ತದೆ. ಇಲಾಖೆಯ ಕಾರ್ಯಾಚರಣೆಯನ್ನು ರಾಜಕೀಯಗೊಳಿಸುವುದು, ವೈಯಕ್ತಿಕ ದೃಷ್ಟಿಕೋನಗಳಿಂದ ವಿಮರ್ಶಿಸುವುದನ್ನು ನಿಲ್ಲಿಸಬೇಕು.

ಜವಾಬ್ದಾರಿಯುತ ಹುದ್ದೆಯಲ್ಲಿರುವವರು ಪ್ರಕ್ಷುಬ್ಧ ಪರಿಸ್ಥಿತಿಗೆ ಕಾರಣವಾಗುವಂತೆ ಹೇಳಿಕೆ ನೀಡಿರುವುದನ್ನು ಒಪ್ಪಲು ಸಾಧ್ಯವಿಲ್ಲ. ವಿಶ್ವಾಸಾರ್ಹ ಮಾಹಿತಿ ಆಧರಿಸಿ, ಯಾವುದೇ ರಾಜಕೀಯ ಓಲೈಕೆಗಳಿಲ್ಲದೆ ವೃತ್ತಿಪರವಾಗಿ ಮತ್ತು ನಿರ್ಭಯವಾಗಿ ಕಾರ್ಯ ನಿರ್ವಹಿಸಲು ತೆರಿಗೆ ಇಲಾಖೆ ಬದ್ಧವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News