ಮುಸ್ಲಿಮರ ಬಗ್ಗೆ ಸೋಗಲಾಡಿತನದಿಂದ ವರ್ತಿಸುತ್ತಿರುವ ಚೀನಾ: ಪಾಂಪಿಯೊ

Update: 2019-03-28 15:14 GMT

ವಾಶಿಂಗ್ಟನ್, ಮಾ. 28: ಮುಸ್ಲಿಮರನ್ನು ನಡೆಸಿಕೊಳ್ಳುತ್ತಿರುವ ವಿಷಯದಲ್ಲಿ ಚೀನಾ ಸೋಗಲಾಡಿತನದಿಂದ ವರ್ತಿಸುತ್ತಿದೆ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಬುಧವಾರ ಹೇಳಿದ್ದಾರೆ.

ಚೀನಾದ ಮಾಜಿ ಕೈದಿ ಹಾಗೂ ಅವರ ಸಂಬಂಧಿಗಳು ಉಯಿಘರ್ ಮುಸ್ಲಿಮ್ ಅಲ್ಪಸಂಖ್ಯಾತರ ಮೇಲೆ ‘ಚೀನಾ ನಡೆಸುತ್ತಿರುವ ದೌರ್ಜನ್ಯ’ಗಳ ಬಗ್ಗೆ ವಿವರಣೆ ನೀಡಿದ ಬಳಿಕ ಪಾಂಪಿಯೊ ಈ ಹೇಳಿಕೆ ನೀಡಿದ್ದಾರೆ.

‘‘ತರಬೇತಿ ಶಿಬಿರಗಳೆಂದು ಕರೆಯಲಾಗುವ ಬಂಧನ ಕೇಂದ್ರಗಳಲ್ಲಿ ಚೀನಾ ಸ್ವೇಚಾಚ್ಛಾರದಿಂದ ಬಂಧಿಸಿಟ್ಟಿರುವ ಎಲ್ಲರನ್ನೂ ಬಿಡುಗಡೆ ಮಾಡಬೇಕು’’ ಎಂಬುದಾಗಿ ಟ್ವಿಟರ್‌ನಲ್ಲಿ ಪಾಂಪಿಯೊ ಕರೆ ನೀಡಿದ್ದಾರೆ.

‘‘ಮುಸ್ಲಿಮರ ಬಗ್ಗೆ ಚೀನಾದ ಆಷಾಢಭೂತಿತನದ ನಿಲುವನ್ನು ಜಗತ್ತು ಸಹಿಸಲು ಸಾಧ್ಯವಿಲ್ಲ. ಒಂದು ಕಡೆ, ಚೀನಾ ತನ್ನದೇ ದೇಶದಲ್ಲಿ 10 ಲಕ್ಷಕ್ಕೂ ಅಧಿಕ ಮುಸ್ಲಿಮರ ಮೇಲೆ ದೌರ್ಜನ್ಯ ನಡೆಸುತ್ತಿದೆ, ಆದರೆ, ಇನ್ನೊಂದೆಡೆ ಅದು ಹಿಂಸೆಯಲ್ಲಿ ತೊಡಗಿರುವ ಭಯೋತ್ಪಾದಕ ಗುಂಪುಗಳನ್ನು ವಿಶ್ವಸಂಸ್ಥೆಯಲ್ಲಿ ರಕ್ಷಿಸುತ್ತಿದೆ’’ ಎಂದು ಅವರು ಹೇಳಿದರು.

ಜೈಶೆ ಮುಹಮ್ಮದ್ ಭಯೋತ್ಪಾದಕ ಗುಂಪಿನ ಸ್ಥಾಪಕ ಮಸೂದ್ ಅಝರ್‌ನನ್ನು ವಿಶ್ವಸಂಸ್ಥೆಯ ಭಯೋತ್ಪಾದಕರ ಪಟ್ಟಿಗೆ ಸೇರಿಸುವ ಜಾಗತಿಕ ಸಮುದಾಯದ ನಿರಂತರ ಪ್ರಯತ್ನಗಳನ್ನು ಚೀನಾ ವಿಫಲಗೊಳಿಸುತ್ತಿರುವುದನ್ನು ಪ್ರಸ್ತಾಪಿಸಿ ಪಾಂಪಿಯೊ ಈ ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News