ಇವಿಎಂ ಹ್ಯಾಕ್ ಮಾಡುವುದು ಅಸಾಧ್ಯ: ರಾಜ್ಯ ಮುಖ್ಯಚುನಾವಣಾಧಿಕಾರಿ ಸಂಜೀವ್ ಕುಮಾರ್
ಬೆಂಗಳೂರು, ಮಾ.29: ಮತಯಂತ್ರದ ಜೊತೆ ಅಳವಡಿಸುವ ವಿವಿ ಪ್ಯಾಟ್‌ನಲ್ಲಿ ಮುದ್ರಣವಾಗುವ ಖಾತರಿ ಪತ್ರಕ್ಕೆ ನೋಟುಗಳಿಗೆ ನೀಡುವ ರೀತಿಯಲ್ಲಿ ಭದ್ರತಾ ಕೋಡ್ ನೀಡಲಾಗುತ್ತದೆ. ಹೀಗಾಗಿ, ಮತಯಂತ್ರಗಳನ್ನು ಹ್ಯಾಕ್ ಮಾಡುವುದು ಅಸಾಧ್ಯ ಎಂದು ಚುನಾವಣಾಧಿಕಾರಿ ಸಂಜೀವ್‌ಕುಮಾರ್ ಹೇಳಿದರು.
ಶುಕ್ರವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಿದ್ದ ಇವಿಎಂ ಹಾಗೂ ವಿವಿ ಪ್ಯಾಟ್ ಪ್ರಾತ್ಯಕ್ಷಿತೆ ಮತ್ತು ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಿವಿ ಪ್ಯಾಟ್‌ನಲ್ಲಿ ಮುದ್ರಣವಾಗುವ ಪೇಪರ್‌ಗೆ ಸೂಕ್ಷ್ಮ ಭದ್ರತೆ ಸಲುವಾಗಿ ನಿಗೂಢವಾದ ನಂಬರ್ ಇರುತ್ತದೆ. ಪ್ರತಿಯೊಂದು ಮತಕೇಂದ್ರಕ್ಕೆ ನೀಡುವ ವಿವಿಪ್ಯಾಟ್‌ನ ಕೋಡ್ ಅನ್ನು ಅಧಿಕಾರಿಗಳು ದಾಖಲಿಸುತ್ತಾರೆ ಎಂದು ತಿಳಿಸಿದರು.
ಮತಯಂತ್ರಗಳು(ಇವಿಎಂ) ಮುದ್ರಣದಿಂದ ಜಿಲ್ಲಾ ಕೇಂದ್ರಗಳಿಗೆ ತಲುಪವವರೆಗೂ ಜಿಪಿಎಸ್ ಅಳವಡಿಕೆ ಮಾಡಲಾಗಿದೆ. ಅನಂತರ ಮತದಾನ ಕೇಂದ್ರ ತಲುಪುವವರೆಗೂ ಪೊಲೀಸ್ ಭದ್ರತೆಯೊಂದಿಗೆ ತೆರಳಲಾಗುತ್ತದೆ. ಮತದಾನದ ಸಮಯದಲ್ಲಾಗುವ ದೋಷಗಳಿಗೆ ಸಂಬಂಧಿಸಿದಂತೆ ಸಿಬ್ಬಂದಿಗೆ ಮೂರು ಹಂತದಲ್ಲಿ ತರಬೇತಿ ನೀಡಲಾಗುತ್ತದೆ. ಮತದಾನದ ಬಳಿಕ ಸೂಕ್ಷ್ಮ ಭದ್ರತೆಯೊಂದಿಗೆ ಇಡಲಾಗುತ್ತದೆ ಎಂದು ಹೇಳಿದರು.
ಇವಿಎಂ ಬಗ್ಗೆ ಆರೋಪ ಕೇಳಿ ಬಂದಿದೆ. ಆದರೆ ಆರೋಪ ಸಾಬೀತು ಮಾಡುವುದಕ್ಕೆ ಸಾಧ್ಯವಾಗಿಲ್ಲ. ಉನ್ನತ ಮಟ್ಟದ ತಂತ್ರಜ್ಞರ ಸಮಿತಿ ಪರಿಶೀಲನೆ ಮಾಡಿ ಇವಿಎಂ ಮತ್ತು ವಿವಿ ಪ್ಯಾಟ್‌ಗಳನ್ನು ಸಿದ್ಧಪಡಿಸಿದೆ. ಯಾವುದೇ ರೀತಿಯಲ್ಲೂ ಹ್ಯಾಕ್, ಟ್ಯಾಂಪರಿಂಗ್ ಮಾಡುವುದಕ್ಕೆ ಸಾಧ್ಯವಿಲ್ಲ. ರಾಜಕೀಯ ಪಕ್ಷಗಳು ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
ರಾಜ್ಯದ ಪ್ರತಿಯೊಬ್ಬ ಮತದಾರನಿಗೂ ಇವಿಎಂ-ವಿವಿ ಪ್ಯಾಟ್ ಕುರಿತು ಪ್ರಾತ್ಯಕ್ಷಿಕೆ ನೀಡಿ, ಮತದಾರರ ವಿಶ್ವಾಸ ಹೆಚ್ಚಿಸುವ ಗುರಿ ಹೊಂದಲಾಗಿದೆ. ಹಿಂದಿನ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯದ 3.5 ಕೋಟಿ ಮತದಾರರಿಗೆ ಇವಿಎಂ-ವಿವಿ ಪ್ಯಾಟ್ ಕುರಿತು ಪ್ರಾತ್ಯಕ್ಷಿಕೆ ನೀಡಲಾಗಿತ್ತು. ಈ ಬಾರಿ ಬರೋಬ್ಬರಿ 2.3 ಕೋಟಿ ಮತದಾರರಿಗೆ ಪ್ರಾತ್ಯಕ್ಷಿಕೆ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ 5.6 ಕೋಟಿ ಮತದಾರರಿಗೆ ಪ್ರಾತ್ಯಕ್ಷಿಕೆ ನೀಡಿ, ಈ ಬಗ್ಗೆ ಜಾಗೃತಿ ಮುಟ್ಟಿಸಲಾಗುವುದು ಎಂದರು.
ವಿವಿ ಪ್ಯಾಟ್ ಬಳಕೆಯಿಂದ ತಾನು ಯಾರಿಗೆ ಮತದಾನ ಮಾಡಿದ್ದೇನೆ ಎಂಬುದನ್ನು ಮತದಾರ ಮತದಾನ ಮಾಡಿದ ಕ್ಷಣದಲ್ಲಿ ವೀಕ್ಷಣೆ ಮಾಡಬಹುದು. ಬ್ಯಾಲೆಟ್ ಯೂನಿಟ್‌ನಲ್ಲಿ ಮತದಾನ ಮಾಡಿದ ನಂತರ ಏಳು ಸೆಕೆಂಡ್‌ನಲ್ಲಿ ಯಾರಿಗೆ ಮತ ಹಾಕಿದ್ದೇನೆ ಎಂದು ಪ್ರದರ್ಶನವಾಗಲಿದೆ ಎಂದು ವಿವರಿಸಿದರು.
ಮತ ಚಲಾಯಿಸಿದ ಮತದಾರ ಮಾತ್ರ ವಿವಿ ಪ್ಯಾಟ್‌ನಲ್ಲಿ ವೀಕ್ಷಣೆಗೆ ಅವಕಾಶವಿರುತ್ತದೆ. ಇದರಿಂದ ಯಾವುದೇ ಗೊಂದಲ, ಸಮಸ್ಯೆ, ಅನುಮಾನ ಮತದಾರನಿಗೆ ಉಳಿಯುವುದಿಲ್ಲ. ತಾನು ಮತಚಲಾಯಿಸಿದ ವ್ಯಕ್ತಿ ಅಥವಾ ಚಿಹ್ನೆಗೆ ಮತದಾನವಾದ ಕುರಿತಂತೆ ಖಾತ್ರಿಪಡಿಸಿ ಮತಗಟ್ಟೆಯ ಕೊಠಡಿಯಿಂದ ತೆರಳಬಹುದಾಗಿದೆ ಎಂದು ತಿಳಿಸಿದರು.
ಕಾರ್ಯಾಗಾರದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಬೃಂಗೀಶ್, ರಾಜ್ಯ ಚುನಾವಣಾ ಆಯೋಗದ ಹೆಚ್ಚುವರಿ ಆಯುಕ್ತ ವೆಂಕಟೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು